Latest

ರಾಜ್ಯಪಾಲರಿಂದ ಸಂಜೆ 6ಕ್ಕೆ ಮತ್ತೊಂದು ಗಡುವು

 

ರಾಜ್ಯಪಾಲರಿಂದ ಸಂಜೆ 6ಕ್ಕೆ ಮತ್ತೊಂದು ಗಡುವು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –

ರಾಜ್ಯಪಾಲ ವಜುಬಾಯಿ ವಾಲಾ ಶುಕ್ರವಾರ ಮಧ್ಯಾಹ್ನ 1.30ಕ್ಕೆ ನೀಡಿದ್ದ ಗಡುವು ಮೀರಿರುವ ಹಿನ್ನೆಲೆಯಲ್ಲಿ  ಅವರು ವಿಶ್ವಾಸ ಮತ ಯಾಚನೆಗೆ ಮತ್ತೊಂದು ಗಡುವು ನೀಡಿದ್ದಾರೆ.

ಇಂದೇ ಸಂಜೆ 6 ಗಂಟೆಯೊಳಗೆ ಬಹುಮತ ಸಾಭೀತುಪಡಿಸುವಂತೆ ರಾಜ್ಯಪಾಲರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಸೂಚಿಸಿದ್ದಾರೆ.

ಮೈತ್ರಿ ಪಕ್ಷಗಳು ವಿಶ್ವಾಸಮತ ಯಾಚನೆ ಮಾಡದೆ ಚರ್ಚೆಯ ಮೇಲೆ ಚರ್ಚೆ ನಡೆಸುತ್ತಿರುವುದರಿಂದ ರಾಜ್ಯಪಾಲರು ವಿಶ್ವಾಸ ಮತಕ್ಕೆ ಅಂತಿಮ ಗಡುವು ನೀಡಿದ್ದಾರೆ.

ಇಂದು ಸಂಜೆಯೊಳಗೆ ವಿಶ್ವಾಸ ಮತ ಸಾಭೀತುಪಡಿಸದಿದ್ದರೆ ಸರಕಾರ ವಜಾ ಮಾಡಿ, ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡುವ ಸಾಧ್ಯತೆ ಇದೆ.

ಆದರೆ ರಾಜ್ಯಪಾಲರ ಸೂಚನೆಗೆ ಯಾವುದೇ ಬೆಲೆ ನೀಡದ ಕಾಂಗ್ರೆಸ್, ಗಡುವು ನೀಡಲು ರಾಜ್ಯಪಾಲರಿಗೆ ಅಧಿಕಾರವೇ ಇಲ್ಲ ಎಂದು ವಾದಿಸುತ್ತಿದೆ. ಈ ಸಂಬಂಧ ಸುಪ್ರಿಂ ಕೋರ್ಟ್ ಮೆಟ್ಟಿಲೇರಲೂ ಮುಖ್ಯಮಂತ್ರಿಗಳು ಸಿದ್ದತೆ ನಡೆಸಿದ್ದಾರೆ.

ಈ ಮಧ್ಯೆ ಇಂದು ಶುಕ್ರವಾರವಾಗಿರುವದರಿಂದ ಕಲಾಪ ಬೇಗ ಮುಗಿಯುವ ಸಾಧ್ಯತೆ ಇದೆ. ಇಂದು ವಿಶ್ವಾಸಮತ ಯಾಚಿಸುವ ಲಕ್ಷಣಗಳು ಈಗಂತೂ ಕಾಣಿಸುತ್ತಿಲ್ಲ.  ಇನ್ನೂ ಹಲವರು ಮಾತನಾಡಲಿದ್ದಾರೆ ಎಂದು ದಿನೇಶ ಗುಂಡೂರಾವ್ ಹೇಳಿದ್ದಾರೆ.

ರಾಜ್ಯಪಾಲರು ಸೂಚನೆ ನೀಡಿರುವುದು ಮುಖ್ಯಮಂತ್ರಿಗೆ ಆಗಿರುವುದರಿಂದ ಸ್ಪೀಕರ್ ಈ ಬಗ್ಗೆ ಅವಸರ ಮಾಡುತ್ತಿಲ್ಲ.

ಈ ಎಲ್ಲ ಬೆಳವಣಿಗೆಗಳು ಬಿಜೆಪಿ ರಾಜ್ಯಧ್ಯಕ್ಷರೂ ಕೇಂದ್ರ ಗೃಹ ಸಚಿವರೂ ಆಗಿರುವ ಅಮಿತ್ ಶಾ ಅವರ ಕುಮ್ಮಕ್ಕಿನಿಂದ ನಡೆಯುತ್ತಿದೆ ಎಂದು ದಿನೇಶ ಗುಂಡೂರಾವ್ ಆರೋಪಿಸಿದ್ದರಿಂದ ಸದನದಲ್ಲಿ ಗದ್ದಲ ನಡೆಯುತ್ತಿದೆ.

ಈ ಮಾತನ್ನು ಕಡತದಿಂದ ತೆಗೆಯಲು ಸ್ಪೀಕರ್ ಸೂಚಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button