
ರಾತ್ರೋರಾತ್ರಿ ದೋಸ್ತಿಗೆ ಮತ್ತೊಂದು ಶಾಕ್
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ಒಂದೊಂದು ಶಾಸಕರನ್ನೂ ಹಿಡಿದಿಡಲು ಹೋರಾಟ ನಡೆಸುತ್ತಿರುವ ದೋಸ್ತಿ ಪಕ್ಷಗಳ ನಾಯಕರಿಗೆ ರಾತ್ರೊರಾತ್ರಿ ಮತ್ತೊಂದು ಶಾಕ್ ಆಗಿದೆ.
ಇರುವ ಶಾಸಕರನ್ನಾದರೂ ಹಿಡಿದಿಡಬೇಕೆಂದು ಅವರನ್ನೆಲ್ಲ ರೆಸಾರ್ಟ್ ನಲ್ಲಿ ಕೂಡಿಟ್ಟು, ಹೊರಗೆ ಹೋಗಿರುವ ಶಾಸಕರನ್ನೂ ಒಬ್ಬೊಬ್ಬರಾಗಿ ಕರೆ ತರಲು ಪ್ರಯತ್ನ ನಡೆಸುತ್ತಿದ್ದ ಶಾಸಕರಿಗೆ ರೆಸಾರ್ಟ್ ನಲ್ಲೇ ಆಘಾತವಾಗಿದೆ.
ಮಧ್ಯರಾತ್ರಿಯಿಂದಲೇ ರೆಸಾರ್ಟ್ ನಿಂದ ಶಾಸಕರೊಬ್ಬರು ನಾಪತ್ತೆಯಾಗಿದ್ದಾರೆ. ಬೆಳಗಾವಿ ಜಿಲ್ಲೆ ಕಾಗವಾಡದ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ ರಾತ್ರಿಯಿಂದ ರೆಸಾರ್ಟ್ ನಲ್ಲಿ ಕಾಣುತ್ತಿಲ್ಲ. ಅವರ ಮೊಬೈಲ್ ಸಹ ಸ್ವಿಚ್ಡ್ ಆಫ್ ಆಗಿದೆ.
ಶ್ರೀಮಂತ ಪಾಟೀಲ ಅವರ ಬಗ್ಗೆ ಮೊದಲಿನಿಂದಲೂ ಅನುಮಾನವಿತ್ತು. ಅವರು ರಮೇಶ ಜಾರಕಿಹೊಳಿ ಬಣದಲ್ಲಿ ಇರಬಹುದು ಎನ್ನುವ ಸಂಶಯ ಇತ್ತು. ಆದರೆ ತಾವು ಕಾಂಗ್ರೆಸ್ ಬಿಡುವುದಿಲ್ಲ ಎಂದು ಹೇಳಿ ಅವರು ಕಾಂಗ್ರೆಸ್ ನೊಂದಿಗೇ ಇದ್ದರು.
ಆದರೆ ಕಳೆದ ರಾತ್ರಿ ಅವರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಶಾಸಕ, ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಂತ್ರದಿಂದಾಗಿ ಶ್ರೀಮಂತ ಪಾಟೀಲ ಬಂಡಾಯ ಶಾಸಕರ ಗುಂಪಿಗೆ ಸೇರಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಶ್ರೀಮಂತ ಪಾಟೀಲ ಇಂದು ಸದನಕ್ಕೆ ಗೈರಾಗುವ ಸಾಧ್ಯತೆ ಇದ್ದು, ದೋಸ್ತಿ ಬಲ ಮತ್ತೆ ಕುಸಿಯುವ ಅನುಮಾನವಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ