Kannada NewsKarnataka NewsNationalPolitics

*ಕುಮಾರಸ್ವಾಮಿ ಬಂಧನಕ್ಕೆ ಒಬ್ಬ ಪೊಲೀಸ್ ಕಾನ್ಸಟೆಬಲ್ ಸಾಕು: ಸಿ.ಎಂ.ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ;  ಹೆಚ್.ಡಿ. ಕುಮಾರಸ್ವಾಮಿಯನ್ನು ಬಂಧಿಸೋಕೆ ನೂರು ಸಿದ್ದರಾಮಯ್ಯ ಬೇಕಾಗಿಲ್ಲ. ಒಬ್ಬ ಪೊಲೀಸ್ ಪೇದೆ ಸಾಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಅವರು ಬುಧವಾರ ಆಲಮಟ್ಟಿ ಜಲಾಶಯದ ಬಳಿ ಕೃಷ್ಣೆಯ ಜಲಧಿಗೆ ಗಂಗಾ ಪೂಜೆ ನೆರವೇರಿಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ನೂರು ಸಿದ್ದರಾಮಯ್ಯ ಬಂದರೂ ನನ್ನ‌ ಅರೆಸ್ಟ್ ಮಾಡೋಕೆ ಆಗಲ್ಲ ಎಂದ ಕುಮಾರಸ್ವಾಮಿಯವರ ಮಾತಿನ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅವರನ್ನು ಬಂಧಿಸೋಕೆ ನಾನು ಬೇಡ. ಒಬ್ಬ ಪೊಲೀಸ್ ಪೇದೆ ಸಾಕು ಎಂದು ತಿರುಗೇಟು ನೀಡಿದರು. 

ಯಾರನ್ನಾದರೂ ಬಂಧಿಸುವುದು ಪೊಲೀಸ್ ಇಲಾಖೆಯವರೇ ಹೊರತು ನಾನಲ್ಲ. ಕುಮಾರಸ್ವಾಮಿ ಅವರು ಹೆದರಿರುವ ಕಾರಣಕ್ಕಾಗಿ ಇಂದು ಪತ್ರಿಕಾಗೋಷ್ಠಿಯನ್ನು ಮಾಡಿದ್ದಾರೆ. ಪ್ರಕರಣದ ಸಮಗ್ರ ತನಿಖೆಗೆ ಆಯೋಗವನ್ನು  ರಚಿಸಲಾಗಿದ್ದು, ಸತ್ಯ ಹೊರಬೀಳುತ್ತದೆ. ಕುಮಾರಸ್ವಾಮಿ ಹೇಳುವುದು ಸತ್ಯವೇ ಎಂಬುವುದು ತನಿಖೆಯಿಂದ ಸ್ಪಷ್ಟವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಯಾವುದೇ ವಿಚಾರಣೆ ನಡೆದಿಲ್ಲ, ವರದಿಯಾಗಲಿ, ಪತ್ರವಾಗಲಿ ಅಥವಾ ಆದೇಶವಾಗಲಿ ಇಲ್ಲ. ಆ ಅವಧಿಯಲ್ಲಿ ಪ್ರಭಾವ ಬೀರಲು ನಾನು  ಸಿಎಂ ಅಥವಾ ಮಂತ್ರಿಯಾಗಿರಲಿಲ್ಲ. ಕುಮಾರಸ್ವಾಮಿಯವರು ಯಾವತ್ತಿದ್ದರೂ ಹಿಟ್ ಅಂಡ್ ರನ್ ಮಾಡುವವರು, ವಿಧಾನಸಭಾ ಅಧಿವೇಶನ ಸಂದರ್ಭ ದಲ್ಲಿ ತನ್ನ ಬಳಿ ‘ಪೆನ್ ಡ್ರೈವ್’ ಇದೆ ಎಂದರು, ಆದರೆ ಅವರು ಇದುವರೆಗೆ ಮಾಡಿರುವ  ಯಾವುದೇ ಆರೋಪಗಳಿಗೆ ತಾರ್ಕಿಕ ಅಂತ್ಯ ಕಂಡಿಲ್ಲ. ತನ್ನ ಬಳಿ ದಾಖಲೆಗಳಿವೆ ಎನ್ನುವ ಕುಮಾರಸ್ವಾಮಿಯವರು, ಅವುಗಳನ್ನು ಬಿಡುಗಡೆ ಮಾಡಬೇಕು.

ಸಿದ್ದರಾಮಯ್ಯನವರು ದಾಖಲಾತಿಗಳನ್ನು ತಿದ್ದಿದ್ದಾರೆ ಎಂದು ಕುಮಾರಸ್ವಾಮಿಯವರು ಆರೋಪಿಸಿರುವ ಬಗ್ಗೆ ಉತ್ತರಿಸಿ, ನಾನು ಯಾವುದೇ ದಾಖಲಾತಿಗಳನ್ನು ತಿದ್ದಿಲ್ಲ. 2014 ರ ಪತ್ರದ ಮೇಲೆ  ನಿವೇಶನ ಹಂಚಿಕೆಯಾಗಿಲ್ಲ. 2021 ರಲ್ಲಿ ಸಲ್ಲಿಸಿದ ಪತ್ರದ ಮೇಲೆ ನಿವೇಶನ ಹಂಚಿಕೆಯಾಗಿದೆ. ಅಂದು ಮುಡಾ ಮಂಡಳಿ ಅಧ್ಯಕ್ಷರಾಗಿದ್ದವರು ಬಿಜೆಪಿಯವರು. ಆಗ ಮಂಡಳಿಯಲ್ಲಿದ್ದವರು ಬಿಜೆಪಿ ಹಾಗೂ ಜೆಡಿಎಸ್ ನವರು , ಆಗ ಆದ ನಿವೇಶನ ಹಂಚಿಕೆಗೆ ಯಾರು ಜವಾಬ್ದಾರರು. ಈ ಬಗ್ಗೆ ಆಯೋಗವನ್ನು ರಚಿಸಲಾಗಿದ್ದು, ತನಿಖಾ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button