*BREAKING: ಒಎನ್ ಜಿಸಿ ಪೈಪ್ ಲೈನ್ ಸ್ಫೋಟ: ಬೆಂಕಿ ಅವಘಡಕ್ಕೆ ಕೃಷಿ ಭೂಮಿಯೇ ಸಂಪೂರ್ಣ ಸುಟ್ಟು ಕರಕಲು*

ಪ್ರಗತಿವಾಹಿನಿ ಸುದ್ದಿ: ಒಎನ್ ಜಿಸಿ (ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್)ಪೈಪ್ ಲೈನ್ ಸ್ಫೋಟಗೊಂಡ ಪರಿಣಾಮ ಹೊತ್ತಿಕೊಂಡ ಬೆಂಕಿ ಅವಘಡಕ್ಕೆ ಕೃಷಿ ಭೂಮಿ, ತೋಟ-ಗದ್ದೆಗಳು ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ನಡೆದಿದೆ.
ಆಂಧ್ರಪ್ರದೇಶದ ಮಲಿಕೀಪುರ ಪ್ರದೇಶದಲ್ಲಿ ಅನಿಲ ಒಎನ್ ಜಿಸಿ ತೈಲ ಬಾವಿ ಕಾಮಗಾರಿ ನಡೆಯುತ್ತಿದ್ದ ವೇಳೆಯೇ ಈ ಅವಘಡ ಸಂಭವಿಸಿದೆ. ಪೈಪ್ ಲೈನ್ ನಲ್ಲಿ ಒತ್ತಡ ಹೆಚ್ಚಾಗಿ ಅನಿಲದ ಪೈಪ್ ಸ್ಫೋಟಗೊಂಡಿದೆ. ಸ್ಫೋಟದ ಭೀಕರತೆಗೆ ಮುಗಿಲೆತ್ತರಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಸುತ್ತಮುತ್ತಲ ಕೃಷಿ ಭೂಮಿ, ತೋಟಗಳು ಬೆಂಕಿಗಾಹುತಿಯಾಗಿವೆ.
ಕಿಲೋಮೀಟರ್ ಗಟ್ಟಲೆ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿಯನ್ನು ನಿಯಂತ್ರಿಸಲು ಹರಸಾಹಸಪಡುತ್ತಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳೀಯ ಮನೆ, ಕಟ್ಟಡಗಳಲ್ಲಿ ಯಾರೂ ಬೆಂಕಿ ಹಾಗೂ ದೀಪಗಳನ್ನು ಉರಿಸದಂತೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.
ಮೂರು ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗುತ್ತಿದೆ. ಜಾನುವಾರುಗಳ ಸಮೇತ ಊರು ತೊರೆಯುವಂತೆ ಸೂಚಿಸಲಾಗಿದೆ.




