ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹೊಸ ಶಿಕ್ಷಣ ನೀತಿ ೨೦೨೦ ಭಾರತದ ಶೈಕ್ಷಣಿಕ ಇತಿಹಾಸದಲ್ಲಿ ಒಂದು ಹೆಗ್ಗುರುತಾಗಿದೆ ಮತ್ತು ಇದು ದೇಶದ ಭವ್ಯ ಭವಿಷ್ಯವನ್ನು ನಿರ್ಧರಿಸಲಿದೆ. ಈ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನದಿಂದ ಶಿಕ್ಷಣ ಕ್ಷೇತ್ರ ಗಮನಾರ್ಹ ಬದಲಾವಣೆಗಳನ್ನು ಕಾಣುತ್ತದೆ ಮತ್ತು ಇದು ನಮ್ಮ ರಾಷ್ಟ್ರ ವಿವಿಧ ಕೌಶಲಗಳ ಜ್ಞಾನದ ಕಣಜವಾಗಲು ಬೇಕಾಗುವ ಎಲ್ಲ ಅವಶ್ಯಕ ಅಂಶಗಳನ್ನು ಪೂರೈಸಬಲ್ಲದು ಎಂದು ಉಪ ಮುಖ್ಯಮಂತ್ರಿ ಮತ್ತು ವಿ ತಾ ವಿ ಸಮಕುಲಾಧಿಪತಿ ಡಾ.ಸಿ.ಎನ್.ಅಶ್ವತ್ ನಾರಾಯಣ್ ಹೇಳಿದರು.
ಅವರು ವಿ ತಾ ವಿ ಯ ಟೆಕ್ಯುಪ್ ಘಟಕ ಬುಧವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ಪ್ರೊಜೆಕ್ಟ್ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನದ ವರ್ಚುಯಲ್ ಸಮಾರಂಭವ “ಆವಿಷ್ಕಾರ ೨೦೨೦” ನ್ನು ಉದ್ಘಾಟಿಸಿ ಮಾತನಾಡಿದರು.
ಈ ಶಿಕ್ಷಣ ನೀತಿಯಲ್ಲಿ ಪಠ್ಯಕ್ರಮದ ಶಿಕ್ಷಣದ ಜೊತೆಗೆ ಪಠ್ಯದಿಂದ ಆಚೆಗೆ ಇರುವ ವಿಷಯಗಳಿಗೆ ಸಂಬಂಧಿಸಿದ ಕೌಶಲ್ಯಗಳ ಮೇಲೆ ಪ್ರಾಮುಖ್ಯವನ್ನು ನೀಡಲಾಗಿದ್ದು ಎಲ್ಲಾ ಕ್ಷೇತ್ರಗಳ ಕೌಶಲ್ಯ ಮತ್ತು ಜ್ಞಾನವನ್ನು ನಿಯಮಿತ ಪಠ್ಯಕ್ರಮದಲ್ಲಿ ಸಂಯೋಜಿಸಲಾಗಿದೆ. ಆದ್ದರಿಂದ ಎಂಜಿನಿಯರಿಂಗ್ ಶಿಕ್ಷಣ ಕ್ಷೇತ್ರವು ಈ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸಲಿದೆ.
ಈ ಶಿಕ್ಷಣ ನೀತಿಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಎಂಬ ಮಾನ್ಯತೆಯನ್ನು ಕರ್ನಾಟಕಕ್ಕೆ ನೀಡುವ ಮಹತ್ವಾಕಾಂಕ್ಷೆಯೊಂದಿಗೆ, ಕರ್ನಾಟಕ ಸರ್ಕಾರ ಈಗಾಗಲೇ ಹೊಸ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮಾರ್ಗಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡಿದೆ ಎಂದು ಅವರು ಹೇಳಿದರು.
“ಆವಿಷ್ಕಾರ ೨೦೨೦” ರ ಬಗ್ಗೆ ಮಾತನಾಡುತ್ತ ಎಲ್ಲಾ ವಿಜೇತರನ್ನು ಮತ್ತು ಭಾಗವಹಿಸಿದವರನ್ನು ಅಭಿನಂದಿಸಿದರು ಮತ್ತು ವಿದ್ಯಾರ್ಥಿಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಗುರುತಿಸುವ ಮತ್ತು ಉತ್ತೇಜಿಸುವ ನಿಟ್ಟಿನಲ್ಲಿ ರೂಪಿಸಿದ ಕಾರ್ಯಕ್ರಮಗಳಿಗೆ ವಿ ತಾ ವಿ ಯನ್ನು ಶ್ಲಾಘಿಸಿದರು. ರಾಜ್ಯದ ವಿದ್ಯಾರ್ಥಿಗಳಲ್ಲಿನ ನಾವೀನ್ಯ ಹಾಗೂ ಸಂಶೋಧನಾ ಮನೋಭಾವ ರಾಷ್ಟ್ರದ ಶೈಕ್ಷಣಿಕ ಕ್ಷೇತ್ರದಲ್ಲಿ ಕರ್ನಾಟಕವನ್ನು ಮುಂಚೂಣಿಯಲ್ಲಿ ನಿಲ್ಲುವಂತೆ ಮಾಡಿದೆ ಎಂದು ಹೇಳಿದರು.
ಕಾರ್ಯಕ್ರಮದ ಗೌರವ ಅತಿಥಿ ಹಾಗೂ ವಿ ತಾ ವಿ ಯ ಟೆಕ್ಯುಪ್ ಘಟಕದ ಮಾರ್ಗದರ್ಶಕರಾದ ಪ್ರೊ.ಎನ್. ಸಿ. ಶಿವಪ್ರಕಾಶ್, ಆವಿಷ್ಕಾರ ೨೦೨೦ಯ ಯೂ ಟ್ಯೂಬ್ ಚಾನೆಲ್ ನ್ನು ಅನಾವರಣಗೊಳಿಸಿದರು ಮತ್ತು ಈ ಸಂದರ್ಭದಲ್ಲಿ ಮಾತನಾಡಿದ ಅವರು ಎಲ್ಲಾ ವಿಜೇತರನ್ನು ಅಭಿನಂದಿಸಿದರು ಮತ್ತು ಯಾವುದೇ ಸೋಲು ಅಥವಾ ವೈಫಲ್ಯ ಅಂತ್ಯವಲ್ಲ ಮತ್ತು ವಿಫಲತೆ ಎನ್ನುವುದು ಸುಧಾರಣೆಯ ಮೊದಲ ಪ್ರಯತ್ನ ಎಂದು ಹೇಳಿ ಅವರು ಟೆಕ್ಯುಪ್ ಘಟಕ ಸಾಧನೆಗಳನ್ನು ಉಲ್ಲೇಖಿಸಿದರು.
ನಂತರ ವಿ ತಾ ವಿ ಕುಲಪತಿ ಪ್ರೊ. ಕರಿಸಿದ್ದಪ್ಪ ಅವರು ಆವಿಷ್ಕಾರ ೨೦೨೦ ಸ್ಪರ್ಧೆಯ ವಿಜೇತರನ್ನು ಘೋಷಿಸಿದರು ಮತ್ತು ಅಧ್ಯಕ್ಷೀಯ ಭಾಷಣ ಮಾಡಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿ ತಾ ವಿ ಖಂಡಿತವಾಗಿಯೂ ಉಪ ಮುಖ್ಯಮಂತ್ರಿ ಮತ್ತು ವಿ ತಾ ವಿಯ ಸಮಕುಲಾಧಿಪತಿ ಡಾ. ಸಿ. ಎನ್. ಅಶ್ವತ್ ನಾರಾಯಣ್ ಅವರ ಸಲಹೆಗಳ ಮೇಲೆ ಕೆಲಸ ಮಾಡುತ್ತದೆ ಮತ್ತು ಹೊಸ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನದಲ್ಲಿ ವಿ ತಾ ವಿ ಪ್ರಮುಖ ಪಾತ್ರ ವಹಿಸಲು ಸಿದ್ಧವಿದೆ ಎಂದು ಹೇಳಿದರು.
ಆವಿಷ್ಕಾರ ೨೦೨೦
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ ಘಟಕವು ವಿತಾವಿಯ ಅಧೀನದಲ್ಲಿರುವ ಎಲ್ಲ ಅಭಿಯಾಂತ್ರಿಕ ಮಹಾವಿದ್ಯಾಲಯಗಳಿಂದ ಆವಿಷ್ಕಾರ ಶೀರ್ಷಿಕೆ ಅಡಿಯಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಕೋರ್ಸಗಳಲ್ಲಿ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಂದ ಮಹಿಳಾ ಸುರಕ್ಷತೆ, ಸ್ವಚ್ಚ ಭಾರತ, ಸ್ವಸ್ಥ ಭಾರತ, ಡಿಜಿಟಲ್ ಇಂಡಿಯಾ, ಗ್ರೀನ್ ಎನರ್ಜಿ, ಪರಿಸರ ಸುರಕ್ಷತೆ, ಕೃಷಿ ಸಲಕರಣೆ, ವಿಕಲ ಚೇತನರಿಗಾಗಿ ಸಾಧನಗಳು, ಅಟೊನೊಮಸ್ ವೆಹಿಕಲ್ (ಸ್ವಚಾಲಿತ ವಾಹನಗಳು) ಹಾಗೂ ತಂತ್ರಜ್ಞಾನಕ್ಕೆ ಸಂಬಂದಿಸಿರುವ ನಾವಿಣ್ಯತೆಯಿಂದ ಕೂಡಿರುವ ವಿಷಯಗಳ ಮೇಲೆ ಪ್ರೊಜೆಕ್ಟಗಳನ್ನು ಪ್ರದರ್ಶನ ಹಾಗು ಸ್ಪರ್ದೆಗಾಗಿ ಆಹ್ವಾನಿಸಿತ್ತು.
ಪ್ರತಿ ಮಹಾವಿದ್ಯಾಲಯಗಳಿಂದ ಸಾಮಾನ್ಯ ಹಾಗೂ ಮಹಿಳಾ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗ ಈ ಎರಡು ವರ್ಗಗಳಲ್ಲಿ ಪ್ರೊಜೆಕ್ಟಗಳನ್ನು ಆಹ್ವಾನಿಸಲಾಗಿತ್ತು. ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ಸುಮಾರು ನೂರಕ್ಕಿಂತ ಹೆಚ್ಚು ಪ್ರೊಜೆಕ್ಟಗಳು ಸಲ್ಲಿಕೆಯಾಗಿದ್ದು ಆನ್ಲೈನ್ ಮುಖಾಂತರ ವಿದ್ಯಾರ್ಥಿಗಳಿಂದ ಪ್ರೊಜೆಕ್ಟಗಳಿಗೆ ಸಂಬಂಧಪಟ್ಟಂತೆ ವಿಡಿಯೊಗಳನ್ನು ಒಪ್ಪಿಸಿಕೊಂಡು ಪರಿಣಿತರಿಂದ ಮೂರು ಹಂತಗಳಲ್ಲಿ ಮೌಲ್ಯಮಾಪನ ಮಾಡಿ ಆರು ವರ್ಗಗಳಲ್ಲಿ ಪ್ರೊಜೆಕ್ಟಗಳನ್ನು ಆಯ್ಕೆ ಮಾಡಲಾಗಿದೆ.
ಮೌಲ್ಯಮಾಪನ ಕುಲಸಚಿವರಾದ ಪ್ರೊ. ಸತೀಶ್ ಅಣ್ಣಿಗೇರಿ ಅವರು ವಂದಿಸಿದರು, ವಿ ತಾ ವಿ ಟೆಕ್ಯುಪ್ ಸಂಯೋಜನಾಧಿಕಾರಿ ಡಾ. ಸಂತೋಷ್ ದೇಶಪಾಂಡೆ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು, ವಿ ತಾ ವಿ ಟೆಕ್ಯುಪ್ ನೋಡಲ್ ಅಧಿಕಾರಿ ಡಾ. ಮೇಘನಾ ಕುಲಕರ್ಣಿ ಕಾರ್ಯಕ್ರಮವನ್ನು ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ