ಪ್ರಗತಿ ವಾಹಿನಿ, ಬೆಳಗಾವಿ: ಆನ್ ಲೈನ್ ವಂಚನೆ ಎಂಬುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ನಯವಾಗಿ ಮಾತಾಡಿ, ಬ್ಯಾಂಕ್ ವಿವರ ಪಡೆದು ಬ್ಯಾಂಕ್ ಖಾತೆಯಿಂದ ಹಣ ಎಗರಿಸುವುದರಿಂದ ಹಿಡಿದು ಮೋಹಕವಾಗಿ ಮಾತಾಡಿ ನಗ್ನಗೊಳಿಸಿ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡುವವರೆಗೆ ನೂರಾರು ಬಗೆಯ ವಂಚನೆಗಳು ನಡೆಯುತ್ತಿವೆ.
ಆದರೆ ಈ ಎಲ್ಲ ವಿಧಾನಗಳಲ್ಲಿ ವಂಚನೆ ನಡೆಯುವ ಬಗ್ಗೆ ಜನ ಎಚ್ಚರವಹಿಸುತ್ತಿದ್ದಂತೆ ಆನ್ ಲೈನ್ ವಂಚಕರು ಪಿಗ್ ಬುಚೇರಿಂಗ್ ಎಂಬ ವಿನೂತನ ಮಾದರಿಯ ವಂಚನೆಯ ಜಾಲ ಬೀಸುತ್ತಿದ್ದಾರೆ. ಈ ವಂಚನೆಗೆ ಸಿಲುಕಿದವರು ಸಾವಿರಗಳ ಲೆಕ್ಕದಲ್ಲಲ್ಲ, ಕೋಟಿಗಳ ಲೆಕ್ಕದಲ್ಲಿ ಹಣ ಕಳೆದುಕೊಂಡು ಜೀವನವನ್ನೇ ನಷ್ಟಮಾಡಿಕೊಳ್ಳುತ್ತಿದ್ದಾರೆ.
ತಂತ್ರಜ್ಞಾನ ಹೆಚ್ಚು ಬೆಳೆಯುತ್ತಿದ್ದಂತೆ ಜನ ಹಣಕಾಸಿನ ವಹಿವಾಟಿಗೆ ಆನ್ ಲೈನ್ ಅವಲಂಬಿಸುತ್ತಿದ್ದು, ವಂಚಕರಿಗೆ ತಮ್ಮ ವಂಚನೆಯ ಕೆಲಸ ಸುಲಭವಾಗುತ್ತಿದೆ. ಜನ ಹೆಚ್ಚು ಎಚ್ಚರ ವಹಿಸುತ್ತಿದ್ದಂತೆ ಮೋಸದ ಮಜಲುಗಳು ಕೂಡ ಬದಲಾಗುತ್ತಲೇ ಇವೆ.
ಪಿಗ್ ಬುಚೆರಿಂಗ್ ಎಂದರೇನು ?
ಚೀನಾದಲ್ಲಿ ನಾಲ್ಕು ವರ್ಷಗಳ ಹಿಂದೆ ಆರಂಭವಾದ ಈ ಪಿಗ್ ಬುಚೆರಿಂಗ್ ಕ್ರಿಪ್ಪೋ ಮೋಸದಾಟ ಈಗ ಭಾರತದಲ್ಲೂ ಕಾಲಿಟ್ಟಿದೆ. ನಮ್ಮಲ್ಲೂ ಈ ಮೋಸಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.
ಸಂಪೂರ್ಣವಾಗಿ ಆನ್‌ಲೈನ್ ಮೂಲಕವೇ ನಡೆಯುವ ಹೊಸ ಬಗೆಯ ಮೋಸದಾಟವಿದು. ಹಂದಿಗಳನ್ನು ಕೊಲ್ಲುವ ಮೊದಲು ಅವುಗಳಿಗೆ ಆಹಾರವನ್ನು ತಿನ್ನಿಸುವ ವಾಡಿಕೆಯಿದೆ ಅದೇ ರೀತಿಯಲ್ಲಿ ಓರ್ವ ವ್ಯಕ್ತಿಯ ಬಳಿ ಪರಿಚಯದ ನಾಟಕವಾಡಿ, ಆತನ ಬಳಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡುವಂತೆ ಮನವೊಲಿಸಲಾಗುತ್ತದೆ. ಆರಂಭದಲ್ಲಿ ಲಾಭಾಂಶವನ್ನು ನೀಡಲಾಗುತ್ತದೆ. ಆ ಮೂಲಕ ಮೋಸ ಹೋಗುವವರ ವಿಶ್ವಾಸ ಗಳಿಸಲಾಗುತ್ತದೆ. ಹಾಗಾಗಿ ಇದನ್ನು ಪಿಗ್ ಬುಚೆರಿಂಗ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ಈ ನಂಬಿಕೆಯೇ ಪಿಗ್ ಬುಚೇರಿಂಗ್ ಮೋಸದ ಅಸ್ತ್ರ. ಅಂತಿವಾಗಿ ವಿಪರೀತ ಲಾಭದ ಆಸೆಗೆ ಬಲೆಬಿದ್ದು ಸರ್ವಸ್ವವನ್ನೂ ಕಳೆದುಕೊಳ್ಳುತ್ತಾನೆ.
ಮೆಸೇಜ್‌ನಿಂದ ಆರಂಭ
ಸ್ಮಾರ್ಟ್ ಫೋನ್‌ಗಳಲ್ಲಿ ವಾಟ್ಸಾಪ್ ಸೇರಿದಂತೆ ಚಾಟ್ ಮೆಸೇಜಿಂಗ್ ಅಪ್ಲಿಕೇಶನ್‌ಗಳು ಸುಲಭದಲ್ಲಿ ಲಭ್ಯವಿದೆ. ಹೆಚ್ಚಿನ ಬಳಕೆದಾರರ ಮೊದಲ ಆಯ್ಕೆಯೂ ಇದೇ ಆಗಿರುತ್ತದೆ. ವಿವಿಧ ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸುವವರ ಸಂಖ್ಯೆಯೂ ಹೆಚ್ಚಿದೆ. ಇಂತಹ ಅಪ್ಲಿಕೇಶನ್‌ಗಳ ಮೂಲಕ ಅಪರಿಚಿತರಿಂದ ಸಂದೇಶಗಳು ಬರುವ ಮೂಲಕ ಪಿಗ್ ಬುಚೆರಿಂಗ್ ಮೋಸದ ಮೊದಲ ಹಂತ ಆರಂಭವಾಗುತ್ತದೆ.
ಅಪರಿಚಿತರ ಸಂದೇಶವನ್ನು ನಿರ್ಲಕ್ಷಿಸುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಯಾವ ರೀತಿಯ ಸಂದೇಶಕ್ಕೆ ನೀವು ಪ್ರತಿಕ್ರಿಯಿಸಬಹುದು ಎಂಬುದನ್ನು ಮೊದಲೇ ಊಹಿಸುವ ಆನ್ ಲೈನ್ ವಂಚಕರು, ಸುಳ್ಳು ಭರವಸೆ ನೀಡುವ ಮೂಲಕ ಬಳಕೆದಾರರನ್ನು ಆಕರ್ಷಿಸುತ್ತಾರೆ. ನಿಧಾನವಾಗಿ ನಂಬಿಕೆ ಗಳಿಸುತ್ತಾರೆ. ತಾವು ಹೂಡಿಕೆ ಮಾಡಿ ಪಡೆದ ಲಾಭಾಂಶದ ಸುಳ್ಳು ಲೆಕ್ಕಾಚಾರಗಳನ್ನು ತೋರಿಸುತ್ತಾರೆ. ಮೊದಲ ಕೆಲ ಹೂಡಿಕೆಗಳಿಗೆ ಲಾಭಾಂಶವನ್ನು ನೀಡಲು ಆರಂಭಿಸುತ್ತಾರೆ. ಸ್ನೇಹಿತನ ನಾಟಕವಾಡಿ ವಿಶ್ವಾಸವನ್ನು ಗಳಿಸಿದ ನಂತರ, ತಾವೇ ಅಭಿವೃದ್ಧಿಪಡಿಸಿದ ನಕಲಿ ಕ್ರಿಪ್ಟೋಕರೆನ್ಸಿ ವೆಬ್ ಸೈಟ್, ಪ್ರಮುಖ ಕಂಪನಿಗಳ ನಕಲಿ ವೆಬ್‌ಸೈಟ್ ನಲ್ಲಿ ಹೂಡಿಕೆ ಮಾಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಇದಕ್ಕಾಗಿ ನಕಲಿ ಸ್ಟಾಕ್ ಎಕ್ಸ್ಚೇಂಜ್ ನಂತಹ ಹಣಕಾಸು ವೇದಿಕೆಗಳ ವಹಿವಾಟನ್ನು ತೋರಿಸುತ್ತಾರೆ. ನಂತರ ಅಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹಿಸುತ್ತಾರೆ.
ದೊಡ್ಡ ಮೊತ್ತದ ಹೂಡಿಕೆಯ ಬಳಿಕ ಆ ಹಣವನ್ನು ಹಿಂಪಡೆಯಲು ಸಾಧ್ಯವಾಗದೇ ಇದ್ದಾಗ ವಂಚನೆಗೊಳಗಾಗಿರುವುದು ಅರಿವಾಗುತ್ತದೆ.
90 ಲಕ್ಷ ವಂಚನೆ
ಹಾಂಕಾಂಗ್‌ನ ಮಹಿಳೆಯೊಬ್ಬರಿಂದ ಸ್ವೀಕರಿಸಿದ ಸಂದೇಶದ ಹಿಂದೆ ಹೋಗಿದ್ದ ಲಡಾಖ್ ನಿವಾಸಿಯೊಬ್ಬರು ಸುಮಾರು 90 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಕಳೆದುಕೊಂಡಿದ್ದಾರೆ.
ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿ ಗಳಿಸಿದ ಭಾರಿ ಲಾಭದ ಕಟ್ಟು ಕಥೆಯನ್ನು ನಂಬಿದ ಲಡಾಖ್ ವ್ಯಕ್ತಿ ಆಕೆ ಹೇಳಿದ ರೀತಿಯಲ್ಲಿ ಹೂಡಿಕೆ ಮಾಡಲು ಆರಂಭಿಸಿದ್ದರು. ಕೆಲ ಗಂಟೆಗಳ ಅವಧಿಯಲ್ಲೇ 2 ರಿಂದ 3 ಪ್ರತಿಶತ ಲಾಭಪಡೆಯಲು ಆರಂಭಿಸಿದ್ದರು. ಹೀಗಾಗಿ ಪ್ರತಿದಿನ ತನ್ನ ಬಳಿಯಲ್ಲಿದ್ದ ಎಲ್ಲಾ ಹಣವನ್ನೂ ಆಕೆ ಹೇಳಿದ್ದ ಕ್ರಿಪ್ಟೋ ಕರೆನಸಿಯಲ್ಲಿ ಹೂಡಿಕೆ ಮಾಡಿದ್ದರು. ದೊಡ್ಡ ಮೊತ್ತದ ಹೂಡಿಕೆಯ ಬಳಿಕ ಆ ಹಣವನ್ನು ಹಿಂಪಡೆಯಲು ಹೊರಟಾಗ, ಭಾರತದ ನಿಯಮದನ್ವಯ ಲಾಭಾಂಶ ಸೇರಿ ಒಟ್ಟು ಮೊತ್ತದ ಶೇ.30ರಷ್ಟು ತೆರಿಗೆ ಪಾವತಿಸಬೇಕು ಎಂಬ ಸಂದೇಶ ಆತನಿಗೆ ಲಭಿಸಿತ್ತು. ಅದನ್ನೂ ಆತ ಪಾವತಿಸಿದ್ದ ಅದಾಗಿಯೂ ಕೊನೆಯಲ್ಲಿ ಎಲ್ಲಾ ಹಣವೂ ಹೋಯಿತು.
ದುಪ್ಪಟ್ಟು ಹಣದ ಆಸೆಯ ಆಮಿಷ ತೋರಿಸಿ ಈ ಹಿಂದೆ ಸಾಮಾನ್ಯವಾಗಿ ನಡೆಯುತ್ತಿದ್ದ ಹಣಕಾಸಿನ ಮೋಸ ಪ್ರಕರಣಗಳು ಇದೀಗ ಪಿಗ್ ಬುಚೆರಿಂಗ್ ಹೆಸರಿನ ಮೂಲಕ ಹೊಸ ರೂಪದಲ್ಲಿ ಪ್ರತ್ಯಕ್ಷವಾಗಿದೆ. ಆದರೆ ಇಲ್ಲಿ ಹಣದ ಬದಲು ಕ್ರಿಪ್ಟೋ ಕರೆನ್ಸಿಯ ಆಸೆ ತೋರಿಸಲಾಗುತ್ತದೆ.
ಗೋಕಾಕ್ ನಗರದಾದ್ಯಂತ ಪೊಲೀಸ್ ಬಂದೋಬಸ್ತ್; ಎಲ್ಲೆಲ್ಲೂ ಖಾಕಿ ಕಣ್ಗಾವಲು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ