Election NewsKannada NewsKarnataka NewsPolitics

ಬರೀ 0.1ರಷ್ಟು ವೋಟ್ ಶೇರ್ ಹೆಚ್ಚಿಸಿಕೊಂಡ ಕಾಂಗ್ರೆಸ್ಸಿಗೆ ಗೆದ್ದ ಭ್ರಮೆ: ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಟೀಕೆ

ಪ್ರಗತಿವಾಹಿನಿ ಸುದ್ದಿ: ಲೋಕಸಭೆ ಚುನಾವಣೆಯಲ್ಲಿ ಕೇವಲ ಶೇ.0.1ರಷ್ಟು ವೋಟ್ ಶೇರ್ ಹೆಚ್ಚಿಸಿಕೊಂಡ ಕಾಂಗ್ರೆಸ್ ಗೆದ್ದ ಭ್ರಮೆಯಲ್ಲಿದ್ದು, ಇಂಡಿ ಒಕ್ಕೂಟ ದೇಶದಲ್ಲಿ ಇಲ್ಲವೇ ಇಲ್ಲ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

ಬೆಂಗಳೂರಿನಲ್ಲಿ ಇಂದು ಬಿಜೆಪಿ-ಜೆಡಿಎಸ್ ನೂತನ ಸಂಸದರಿಗೆ ಹಮ್ಮಿಕೊಂಡಿದ್ದ ಅಭಿನಂದನೆ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ದೇಶದಲ್ಲಿ 230 ಸ್ಥಾನಗಳನ್ನು ಗೆದ್ದಿದ್ದು,  ಇದು ಬಿಜೆಪಿ ಒಂದೇ ಪಕ್ಷ ಪಡೆದ ಸೀಟುಗಳಿಗೂ ಸರಿ ಸಮವಾಗಿಲ್ಲ. ಕಾಂಗ್ರೆಸ್ಸಿಗರು ವಾಸ್ತವ ಅರಿಯಲಿ ಎಂದು ಕಿವಿಮಾತು ಹೇಳಿದರು.

ಬಿಜೆಪಿಗೆ ಸಾಟಿಯೇ ಅಲ್ಲ ಕಾಂಗ್ರೆಸ್

ಕಳೆದ ಮೂರು ಲೋಕಸಭೆ ಚುನಾವಣೆಗಳಿಗೆ ಹೋಲಿಸಿದರೆ ಕಾಂಗ್ರೆಸ್ ನಮಗೆ ಸರಿ ಸಾಟಿಯೇ ಅಲ್ಲ. 2014, 2019 ಮತ್ತು 2024 ಈ ಮೂರೂ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದ ಸಂಖ್ಯೆ ಬಿಜಿಪಿಯ ಪ್ರಸ್ತುತ ಫಲಿತಾಂಶಕ್ಕೆ ಸಮವಿಲ್ಲ. ಕಾಂಗ್ರೆಸ್ ಈ ಮೂರೂ ಚುನಾವಣೆಗಳಲ್ಲಿ ಒಟ್ಟಾರೆ 140 ರಿಂದ 150 ಸ್ಥಾನ ಗೆದ್ದರೆ ಬಿಜೆಪಿ ಒಂದೇ ಚುನಾವಣೆಯಲ್ಲಿ 240 ಸ್ಥಾನಗಳನ್ನು ಗೆದ್ದುಕೊಂಡಿದೆ ಎಂದು ಜೋಶಿ ವಿಶ್ಲೇಷಿಸಿದರು.

ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಗೆ ಕಳೆದ ಬಾರಿಗಿಂತ ತುಸು ಕಡಿಮೆ ಸೀಟುಗಳು ಬಂದಿವೆ ನಿಜ. ಚುನಾವಣೆಯಿಂದ ಚುನಾವಣೆಗೆ ವ್ಯತ್ಯಾಸ ಆಗೋದು ಸಹಜವೇ. ಆದರೆ, ಇಡೀ ಇಂಡಿ ಕೂಟ ಪಡೆದ ಸ್ಥಾನಗಳೂ ಬಿಜೆಪಿಗೆ ಸರಿ ಸಮನಾಗಿಲ್ಲ ಎಂದು ಹೇಳಿದರು.

ಅರ್ಥವೇ ಇಲ್ಲದ ಇಂಡಿ ಕೂಟ

ಬಿಜೆಪಿಯನ್ನು ವಿರೋಧಿಸಲೆಂದೇ ಹುಟ್ಟಿಕೊಂಡ ಕಾಂಗ್ರೆಸ್ ನೇತೃತ್ವದ ಇಂಡಿ ಕೂಟಕ್ಕೆ ಅರ್ಥವೇ ಇಲ್ಲ. ದೇಶದಲ್ಲೆಲ್ಲೂ ಇಂಡಿಗೆ ನೆಲೆಯೇ ಇಲ್ಲ. ಇಂಡಿ ಕೂಟದಲ್ಲಿ ಸಮನ್ವಯತೆ ಇಲ್ಲವೆಂದು ಟೀಕಿಸಿದರು.

ಕೇರಳದಲ್ಲಿ ಇಂಡಿ ಕೂಟದಲ್ಲಿ ಪರಸ್ಪರ ಬಡಿದಾಟವಿದೆ. ದೆಹಲಿಯಲ್ಲಿ ಎಎಪಿ+ ಕಾಂಗ್ರೆಸ್ ಚುನಾವಣೆಗೆ ಹೋಗುತ್ತಿವೆ. ಪಂಜಾಬ್ ಅಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಟವಿದೆ. ಹೀಗೆ ದೇಶದ ಎಲ್ಲೆಡೆಯೂ ಇಂಡಿ ಕೂಟದಲ್ಲಿ ಸಮನ್ವಯ ಇಲ್ಲವೇ ಇಲ್ಲ ಎಂದು ಲೇವಡಿ ಮಾಡಿದರು.

ವಯನಾಡಲ್ಲಿ ಪ್ರಿಯಾಂಕಾಗೆ ಬೆಂಬಲ ಸಿಗುತ್ತದೆಯೇ?

ಪ್ರಿಯಾಂಕಾ ಗಾಂಧಿ ವಯನಾಡಲ್ಲಿ ಸ್ಪರ್ಧಿಸಲು ಹೊರಟಿದ್ದಾರೆ. CPI, CPM ಪಕ್ಷಗಳು ಅಲ್ಲಿ ನಿಮ್ಮನ್ನು ಬೆಂಬಲಿಸುತ್ತವೆಯೇ? ನೋಡಿಕೊಳ್ಳಿ ಎಂದು ಪ್ರಲ್ಹಾದ ಜೋಶಿ ಸವಾಲು ಹಾಕಿದರು.

NDA ಗೆಲುವಿನ ನಾಗಾಲೋಟ

ದೇಶದಲ್ಲಿ ಬಿಜೆಪಿ ನೇತೃತ್ವದ NDA ಗೆಲುವಿನ ನಾಗಾಲೋಟ ಮುಂದುವರೆಸಿದೆ. 10 ರಾಜ್ಯಗಳಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. 7 ರಾಜ್ಯ ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.50ಕ್ಕಿಂತ ಹೆಚ್ಚು ಮತ ಪಡೆದಿದೆ. ಒಡಿಸ್ಸಾದಲ್ಲಿ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸುತ್ತಿದೆ. ಅರುಣಾಚಲ ಪ್ರದೇಶದಲ್ಲಿ 46 ಸ್ಥಾನಗಳನ್ನು ಗೆದ್ದು ಹೊಸ ದಾಖಲೆ ಬರೆದಿದೆ ಬಿಜೆಪಿ. ಆಂಧ್ರಪ್ರದೇಶದಲ್ಲಿ ಸಹ NDA ಆಡಳಿತದಲ್ಲಿದೆ. ಪಂಜಾಬ್ ಅಲ್ಲಿ ಅಪಪ್ರಚಾರದ ನಡುವೆಯೂ ಶೇ.10ರಷ್ಟು ಹೆಚ್ಚು ಮತ ಪಡೆದಿದ್ದೇವೆ ಎಂದು ಪ್ರಲ್ಹಾದ ಜೋಶಿ NDA ಸಾಧನೆಯನ್ನು ಬಿಚ್ಚಿಟ್ಟರು.

ಕಾಂಗ್ರೆಸ್ 2 ಬಾರಿ ಸಮ್ಮಿಶ್ರ ಸರ್ಕಾರ ನಡೆಸಲಿಲ್ಲವೇ?

ಕೇಂದ್ರದಲ್ಲಿ ಕಾಂಗ್ರೆಸ್ 2 ಬಾರಿ ಸಮ್ಮಿಶ್ರ ಸರ್ಕಾರ ನಡೆಸಲಿಲ್ಲವೇ? ಎಂದು ಪ್ರಲ್ಹಾದ ಜೋಶಿ ಪ್ರಶ್ನಿಸಿದರು. 2004ರಲ್ಲಿ ಕಾಂಗ್ರೆಸ್ 145 ಸೀಟು ಪಡೆದಿತ್ತು. ಬಿಜೆಪಿ 138 ಸೀಟು ಪಡೆದಿತ್ತು. ಆಗ ಕೇವಲ ಏಳೇ ಸೀಟು ಹೆಚ್ಚು ಪಡೆದು ಆಡಳಿತ ನಡೆಸಿದ ಕಾಂಗ್ರೆಸ್ ಈಗ 242 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಬಿಜೆಪಿಯನ್ನು ಪ್ರಶ್ನಿಸುತ್ತಿದೆ ಎಂದು ವ್ಯಂಗ್ಯವಾಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button