ಉತ್ತಮ ನಟ ಮಾತ್ರ ನಾಟಕಕಾರನಾಗಲು ಸಾಧ್ಯ: ಹೂಲಿ ಶೇಖರ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ನಮ್ಮೊಳಗೆ ಒಬ್ಬ ನಟನಿದ್ದಾಗ ಮಾತ್ರ ಉತ್ತಮ ನಾಟಕಕಾರನಾಗಲು ಸಾಧ್ಯ. ಅತ್ಯುತ್ತಮ ನಾಟಕಗಳ ರಚನೆ ಮಾಡಲು ಸಾಧ್ಯ. ಕಾರ್ನಾಡ, ಕಂಬಾರರಲ್ಲಿ ಒಳಗಡೆ ಒಬ್ಬ ನಟನಿದ್ದ ಕಾರಣವೇ ಅವರು ಅತ್ಯುತ್ತಮ ನಾಟಕಕಾರಗಾಗಲು ಸಾಧ್ಯವಾಯಿತು ಎಂದು ಖ್ಯಾತ ನಾಟಕಕಾರ, ನಟ, ನಿರ್ದೇಶಕ ಹೂಲಿ ಶೇಖರ ಇಂದಿಲ್ಲಿ ಹೇಳಿದರು.
ನಗರದ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಹಾಗೂ ಕ್ರಿಯಾಶೀಲ ಬಳಗ ಸಂಯುಕ್ತ ಆಶ್ರಯದಲ್ಲಿ ಸಾಹಿತ್ಯ ಭವನ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ನಾಟಕ ರಂಗದ ಸ್ವಾನುಭವಗಳ ವಿಷಯದ ಮೇಲೆ ಮಾತನಾಡುತ್ತ ಆಗಮಿಸಿದ್ದ ಹೂಲಿ ಶೇಖರ ಮೇಲಿನಂತೆ ಅಭಿಪ್ರಾಯ ವ್ಯಕ್ತ ಪಡಿಸಿದರು.
ನಾನು ಕಲಿತದ್ದು ಬೆಳಗಾವಿಯಲ್ಲಿಯೇ ಕವಿ ಎಸ್. ಡಿ. ಇಂಚಲ ಅವರು ನನ್ನ ಗುರುಗಳು. ದೌತಿಯಲ್ಲಿಯ ಮಸಿಯಲಿ ಅದ್ದಿ ಗಲಗದಿಂದ ಬರೀತಾ ಇದ್ದೆ. ಮಸಿ ತೀರಿತ್ತು ಕೊಂಡುಕೊಳ್ಳಲಾಗದಂತಹ ಬಡತನ.
ಅಂದು ಗುರುಗಳಾದ ಇಂಚಲ ಅವರು ಒಂದು ಮಸಿದೌತಿ ಹಾಗೂ ಗಲಗನ್ನು ಕೊಡಿಸಿದ್ದರು. ಅಂದು ಬರೆಸಿ ಹರಸಿದ ಆಶಿರ್ವಾದಿಂದ ಇಂದಿನವರೆಗೆ ಸುಮಾರು ಆರು ಲಕ್ಷ ಪುಟಗಳಿಗಿಂತಲೂ ಹೆಚ್ಚು ಸಾಹಿತ್ಯ ರಚನೆ ಮಾಡಿದ್ದೆನೆಂದು ತಮ್ಮ ಅಂದಿನ ದಿನಗಳನ್ನು ಮೆಲಕು ಹಾಕಿದರು.
‘ಚುಟುಕು ಸಾಹತ್ಯ ಬೆಳೆದ ಬಗೆ ಬೆಳಯಬೇಕಾದ ಬಗೆ’ ಎಂಬ ವಿಷಯ ಕುರುತು ಮಾತನಾಡಿದ ಜರಗನಹಳ್ಳಿ ಶಿವಶಂಕರ ಅವರು ಬೀಜದಲ್ಲಿ ವೃಕ್ಷ ಅಡಗಿರುವಂತೆ ಹನಿಗವನಗಳು. ಹನಿಗವನ ಚುಟುಕುಗಳು ನೋಡಿಲು ಕಿರಿದಾಗಿ ಕಂಡರೂ ಅದರಲ್ಲಿ ಹಿರಿದಾದ ಅರ್ಥ ತುಂಬಿರುತ್ತದೆ.
ಕವಿಗೆ ತಾಳ್ಮೆಯನ್ನುವುದು ಬೇಕು. ಅಂದಾಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ. ಪ್ರಶಸ್ತಿ, ಪುರಸ್ಕಾರಗಳಿಗಾಗಿಯೇ ಬರವಣಿಗೆ ಬೇಡವೆಂದು ಅವರು ಹೇಳಿದರು
ಸಂವಾದದಲ್ಲಿ ಗುಂಡೇನಟ್ಟಿ ಮಧುಕರ ಹೊಸದಾಗಿ ಕಾವ್ಯಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವವರಿಗೆ ಕವಿತೆ, ಚುಟುಕುಗಳೆಂದರೆ ಎಷ್ಟು ಸಾಲುಗಳಿರಬೇಕು, ಲಘು ಗುರು, ಮಾತ್ರಾಗಣ, ಅಕ್ಷರಗಣ, ಪ್ರಾಸಗಳು ತುಂಬ ಕಾಡುತ್ತವೆಯಲ್ಲ ಎಂದು ಕೇಳಿದ ಪ್ರಶ್ನೆಗೆ ಜರಗನಹಳ್ಳಿ ಶಿವಶಂಕರ ಅವರು ನನ್ನ ಕವಿತೆಗಾವ ರೋಗವಿಲ್ಲ, ಅದಕೆ ಮಾತ್ರೆಗಳ ಅವಶ್ಯಕತೆಯಿಲ್ಲ! ಎಂಬ ಚುಟುಕೊಂದನ್ನು ಹೇಳಿದರು.
ಇದು ಮುಕ್ತ ಸಾಹಿತ್ಯ ಇಲ್ಲಿ ಲಘು, ಗುರು, ಮಾತ್ರಾ, ಪ್ರಾಸಗಳಿಗಿಂತ ಭಾವನೆಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಮನದಲ್ಲಿ ಮೂಡಿದ ಭಾವನೆಗಳನ್ನು ಹಾಗೇ ಇಡಬೇಕು. ಕಾವ್ಯ ಲಕ್ಷಣಗಳನ್ನು ನೋಡುತ್ತ ಕುಳಿತರೆ ಭಾವಗಳು ಹಾಳಾಗುತ್ತವೆ ಎಂದು ಹೇಳಿದರು.
ಸಂವಾದದಲ್ಲಿ ಆರ್. ಬಿ. ಬನಶಂಕರಿಯವರು ಮೊದಲು ಸಂಗ್ಯಾ ಬಾಳ್ಯಾ, ದೊಡ್ಡಗಳು ರಾತ್ರಿಯಿಂದ ಬೆಳಗಿನವರೆಗೆ ನೋಡುತ್ತಿದ್ದೆವು. ಅವೆಲ್ಲ ಮೊಟಕುಕೊಂಡು ಒಂದು- ಒಂದುವರೆ ಗಂಟೆಯಲ್ಲಿ ಮುಗಿದು ಬಿಡುತ್ತಿವೆಯಲ್ಲ ಹೀಗೇಕೆ ಎಂದು ಕೇಳಿದ ಪ್ರಶ್ನೆಗೆ ಇಂದಿನ ಯಾಂತ್ರಿಕ ಬದುಕಿನಲ್ಲಿ ಯಾರಿಗೂ ಸಮಯವಿಲ್ಲ ಸಹನೆಯೂ ಇಲ್ಲ.
ಇಂದಿನ ಬದುಕಿಗನುಗುಣವಾಗಿ ಅವನ್ನು ಮೊಟಕುಗೊಳಿಸುವುದು ಅನಿವಾರ್ಯವಾಗಿದೆ ಎಂದರು.
ನೀಲಗಂಗಾ ಚರಂತಿಮಠ, ದೀಪಿಕಾ ಚಾಟೆ, ಬಾಬಾ ಸಾಹೇಬ, ರವಿ ಭಜಂತ್ರಿ ಮುಂತದವರು ಸಂವಾದದಲ್ಲಿ ಪಾಲ್ಗೊಂಡಿದ್ದರು.
ಕ್ರಿಯಾಶೀಲ ಬಳಗದ ಪದಾಧಿಕಾರಿಗಳಾದ ದುರದುಂಡಯ್ಯ ಭಾವಿಮನಿ, ಕೆ. ವಿನಯ ಹಾಗೂ ಸುಭಾಸ ಏಣಗಿ, ಸ.ರಾ. ಸುಳಕೂಡೆ, ಜ್ಯೋತಿ ಬದಾಮಿ, ಗುರುಸಿದ್ದಯ್ಯ ಹಿರೇಮಠ, ಸ.ರಾ. ಸುಳಕೂಡೆ, ಬಸವರಾಜ ಸುಣಗಾರ, ಉಮಾ ಅಂಗಡಿ, ಎಂ. ಎಫ್. ಸುಬ್ಬಾಪೂರಮಠ, ರಾಜು ಮಠಪತಿ ಮುಂತಾದವರು ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಡಾ. ಸಿದ್ದನಗೌಡ ಪಾಟೀಲ ವಹಿಸಿದ್ದರು. ಪ್ರೊ. ಎಂ.ಎಸ್. ಇಂಚಲ ಚಾಲನೆಯನ್ನು ನೀಡಿದರು. ಅಶೋಕ ಮಳಗಲಿ ನಿರೂಪಿಸಿದರು. ಸರ್ವಮಂಗಳಾ ಅರಳಿಮಟ್ಟಿ ಸ್ವಾಗತಿಸಿದರು. ಕೆ. ಮಲ್ಲಿಕಾರ್ಜುನ ವಂದಿಸಿದರು.///
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ