ಸಿದ್ಧರಾಮಯ್ಯ ಒಳ್ಳೆಯ ಸಹೃದಯಿ ಮನುಷ್ಯ ಎಂದು ಹಾಡಿ ಹೊಗಳಿದ ಮಾಜಿ ಸಚಿವ
ಪ್ರಗತಿವಾಹಿನಿ ಸುದ್ದಿ, ಗೋಕಾಕ: ಈಚೆಗಷ್ಟೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸೋಲಿಸಲು ಮರಾಠಿಗರು ಒಂದಾಗಬೇಕೆಂದು ಬಹಿರಂಗ ಭಾಷಣ ಮಾಡಿ ತೀವ್ರ ವಿರೋಧ ಎದುರಿಸಿದ್ದ ಶಾಸಕ ರಮೇಶ ಜಾರಕಿಹೊಳಿ ಈಗ ತಮ್ಮ ವರಸೆ ಬದಲಿಸಿದ್ದಾರೆ. ನನಗೆ ಅಭಿವೃದ್ಧಿಯೇ ಜಾತಿ ಎಂದಿದ್ದಾರೆ.
ಉಪಚುನಾವಣೆಯ ಸಂದರ್ಭದಲ್ಲಿ ವಿರೋಧಿಗಳು ಗೂಂಡಾಗಿರಿ ನಡೆಸಿ, ಜಾತಿ ಎಂಬ ವಿಷ ಬೀಜ ಬಿತ್ತಿ ಮತಯಾಚನೆ ನಡೆಸಿದರು. ಆದರೆ ನನಗೆ ಅಭಿವೃದ್ಧಿಯೇ ಜಾತಿ. ಮೂರು ವರ್ಷಗಳವರೆಗೆ ಅಭಿವೃದ್ಧಿ ಮೂಲಕ ವಿರೋಧಿಗಳಿಗೆ ತಕ್ಕ ಉತ್ತರ ನೀಡೋಣ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ಶನಿವಾರದಂದು ಗೋಕಾಕ ಮತಕ್ಷೇತ್ರದ ಖನಗಾಂವ, ನಭಾಪೂರ, ದೇವಗೌಡನಹಟ್ಟಿ, ಗುದನಟ್ಟಿ, ಕ್ಯಾಶಪನಟ್ಟಿ, ಮಿಡಕನಟ್ಟಿ ಗ್ರಾಮಗಳಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.
ಸಿದ್ಧರಾಮಯ್ಯ ಒಳ್ಳೆಯ ಸಹೃದಯಿ ಮನುಷ್ಯ. ಈ ಹಿಂದೆ ನಾನು ಅವರ ಬಲಗೈ ಬಂಟನಂತಿದ್ದೆ. ಸಿದ್ದರಾಮಯ್ಯನವರಿಗೆ ಅವರ ಪಕ್ಷದವರೆ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ಭ್ರಷ್ಟಾಚಾರ, ಕುಟುಂಬ ರಾಜಕಾರಣ ಹಾಗೂ ಮೈತ್ರಿ ಸರಕಾರ ಜಾತಿಗೆ ಸಿಮೀತವಾದ ಹಿನ್ನೆಲೆ ಮೈತ್ರಿ ಸರಕಾರದಿಂದ ಹೊರಬಂದು ಬಿಜೆಪಿಯಿಂದ ಸ್ಫರ್ಧಿಸಿ ನಿಮ್ಮೆಲ್ಲರ ಆಶೀರ್ವಾದದಿಂದ ಇಂದು ೬ನೇ ಬಾರಿ ಶಾಸಕನಾಗಿದ್ದೇನೆಂದರು.
ಇದು ಉಪಚುನಾವಣೆಯಾದ ಹಿನ್ನೆಲೆ ವಿರೋಧ ಪಕ್ಷಗಳು ಶತಾಯಗತಾಯ ನನ್ನನ್ನು ಸೋಲಿಸಲು ಪ್ರಯತ್ನ ಪಟ್ಟರು. ಆದರೆ ತಮ್ಮ ಆಶೀರ್ವದ ನನ್ನ ಕೈ ಬಿಡಲಿಲ್ಲ. ಯುವಕರು ವೈಮನಸ್ಸು ಬೆಳೆಸಿಕೊಳ್ಳದೆ ಒಗ್ಗಟ್ಟಾಗಿ ಬಿಜೆಪಿ ಬಲ ಪಡಿಸಿ ಮುಂದಿನ ಚುನಾವಣೆಯಲ್ಲಿ ಒಂದು ಲಕ್ಷ ಮತಗಳಿಂದ ಗೆಲುವು ಸಾಧಿಸಲು ಆಶೀರ್ವದಿಸಿ ಎಂದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಟಿ ಆರ್ ಕಾಗಲ, ಬಿಜೆಪಿ ಗ್ರಾಮೀಣ ಅಧ್ಯಕ್ಷ ವೀರುಪಾಕ್ಷ ಯಲಿಗಾರ, ಮುಖಂಡರಾದ ವಿಕ್ರಮರಾಜ ನಾಯಕ, ರಾಮಪ್ಪ ಡಬ್ಬನವರ, ಮಹಾದೇವ ಇಂಚಲ, ನಿಂಗಣ್ಣ ಗುಡಜನವರ, ಈಶ್ವರ ವಣ್ಣೂರ, ಬಸಪ್ಪ ವಣ್ಣೂರ, ಕೆಂಪಣ್ಣ ಪಾಟೀಲ, ಗಂಗಪ್ಪ ಮಾರಿಹಾಳ, ಡಿ ಎಮ್ ವಣ್ಣೂರ, ಈಶ್ವರ ಭಾಗೋಜಿ, ಸಿದ್ದಗೌಡ ಪಾಟೀಲ, ಬಸಪ್ಪ ಹಮ್ಮಿನಿ, ನಿಂಗನಗೌಡ ಪಾಟೀಲ, ಸಿದ್ದಗೌಡ ಪಾಟೀಲ, ಚಂದ್ರಪ್ಪ ಗಸ್ತಿ, ಸುನೀಲ ನಾಯಿಕ, ಜಗದೀಶ ವಣ್ಣೂರ ಸೇರಿದಂತೆ ಅನೇಕರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ