*ಮೆಟ್ರೋ ಹುದ್ದೆಗಳಿಗೆ ಕನ್ನಡಿಗರು ಮಾತ್ರ ಆಯ್ಕೆಯಾಗಲಿ: ಎಚ್ಚರಿಕೆ ನೀಡಿದ ಕರವೇ ನಾರಾಯಣಗೌಡ*

ಪ್ರಗತಿವಾಹಿನಿ ಸುದ್ದಿ : ನಮ್ಮ ಮೆಟ್ರೋ ಕರೆದಿರುವ ಟ್ರೈನ್ ಆಪರೇಟರ್ ಹುದ್ದೆಗಳಿಗೆ ಕನ್ನಡ ಗೊತ್ತಿಲ್ಲದ ಪರಭಾಷಿಕರಿಗೂ ಇಲ್ಲಿ ಕೆಲಸ ನೀಡುವ ಹುನ್ನಾರ ನಡೆದಿದೆ ಎಂಬ ಆರೋಪಗಳ ವಿವಾದ ಭುಗಿಲೆದಿದ್ದು, ಕನ್ನಡಿಗರು ಮಾತ್ರ ಆಯ್ಕೆ ಆಗಬೇಕು ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.
ನಮ್ಮ ಮೆಟ್ರೊದಲ್ಲಿ ಅನ್ಯಭಾಷಿಕರಿಗೆ ಮಣೆ ಹಾಕಿ ಕನ್ನಡಿಗರನ್ನು ಕಡೆಗಣಿಸುತ್ತಿರುವುದನ್ನು ಕರವೇ ಗಂಭೀರವಾಗಿ ಪರಿಗಣಿಸಿದೆ. ನಮ್ಮ ಮೆಟ್ರೋ ಸಂಸ್ಥೆ ಈಗ ಹೊರಡಿಸಿರುವ ಅಧಿಸೂಚನೆ ಹಿಂಪಡೆದು, ಕನ್ನಡಿಗರು ಮಾತ್ರ ಆಯ್ಕೆಯಾಗುವಂತೆ ಅಧಿಸೂಚನೆ ಹೊರಡಿಸದಿದ್ದರೆ ಉಗ್ರ ಸ್ವರೂಪದ ಚಳವಳಿ ಹಮ್ಮಿಕೊಳ್ಳಲಾಗುವುದು.
ಕನ್ನಡಿಗರ ವಿರೋಧ ಕಟ್ಟಿಕೊಂಡರೆ ಬೆಂಗಳೂರಿನಲ್ಲಿ ಮೆಟ್ರೋ ರೈಲು ಓಡಾಡುವುದು ಕಷ್ಟವಾಗುತ್ತದೆ. ಬೆಂಗಳೂರು ನಮ್ಮ ಮೆಟ್ರೊ ಸಂಸ್ಥೆಯಲ್ಲಿ ಅನ್ಯ ಭಾಷಿಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಮುಂದಾಗಿರುವ ಬಗ್ಗೆ ವರದಿಯಾಗಿದ್ದು ಈಗಾಗಲೇ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ದೊಡ್ಡ ಮಟ್ಟದ ಅನ್ಯಾಯವಾಗಿರುವುದು ಎದ್ದು ಕಾಣಿಸುತ್ತಿದೆ.
ಬ್ಯಾಂಕ್ ಮತ್ತು ರೈಲ್ವೆಯಲ್ಲಿ ಕನ್ನಡಿಗರನ್ನು ಉದ್ಯೋಗದಿಂದ ದೂರವಿಡಲು ನಿರಂತರವಾಗಿ ಕ್ರಮಕೈಗೊಳ್ಳಲಾಗುತ್ತಿದೆ. ಇದೀಗ ರಾಜ್ಯ ಸರ್ಕಾರದ ಸಂಸ್ಥೆಯಲ್ಲೂ ಕನ್ನಡಿಗರನ್ನು ಕಡೆಗಣಿಸುವುದನ್ನು ಕರವೇ ಸಹಿಸಲ್ಲ ಎಂದು ನಾರಾಯಣಗೌಡ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.