Kannada NewsKarnataka NewsLatest

ಅಹಂಕಾರ ಬಿಟ್ಟು ಸಹಬಾಳ್ವೆ ಮಾಡಿದಾಗ ಮಾತ್ರ ಸಮಾಜ ಸುಧಾರಿಸಲು ಸಾಧ್ಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮನುಷ್ಯರಿಗೆ ಆಸೆ, ಕಿಚ್ಚು ಎರಡೂ ಇರಬೇಕು. ಅಂದಾಗ ಮಾತ್ರ ಜೀವನದಲ್ಲಿ ಸುಗಮವಾಗಿ ಬದುಕಲು ಸಾಧ್ಯ ಎಂದು ಬೇಬಿಮಠದ ಚಂದ್ರವನ ಆಶ್ರಮ ಶ್ರೀರಂಗಪಟ್ಟಣದ ಡಾ. ಮಹಾಂತ ಶಿವಯೋಗಿ ಸ್ವಾಮೀಜಿ ಹೇಳಿದರು.

ಭಾನುವಾರ ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ೨೬ನೇ ಮಾಸಿಕ ಸುವಿಚಾರ ಚಿಂತನ ಕಾರ್ಯಕ್ರಮದಲ್ಲಿ ಸಮೃದ್ದ ಜೀವನ ಕುರಿತ ಉಪನ್ಯಾಸ ನೀಡಿದರು.

ಸಮಾಜದಲ್ಲಿ ಬದುಕು ಜನರಿಗೆ ನಿಮ್ಮ ಮೇಲೆ ನಿಮಗೆ ನಂಬಿಕೆ ಇಲ್ಲವೋ ಆಗ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಂಬಿಕೆ, ವಿಶ್ವಾಸದ ಜತೆ ಧೈರ್ಯವೊಂದಿದ್ದರೆ ಮನುಷ್ಯ ಬೇಕಾದ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಯಾವ ಸಾಧನೆಯನ್ನೂ ಸಾಧಿಸಲು ಆಗುವುದಿಲ್ಲ ಎಂದು ಹೇಳಿದರು.

ಮನುಷ್ಯನಿಗೆ ಧೈರ್ಯ, ನಾನು ಮಾಡೇ ಮಾಡುತ್ತೇನೆ ಎನ್ನುವ ಛಲ ಇದ್ದರೆ ಎಷ್ಟೆ ಸಮಸ್ಯೆ ಇದ್ದರೂ ಬದುಕ ಬಹುದು. ಇದಕ್ಕೆ ಉದಾಹರಣೆ ಸ್ವಾಮಿ ದಯಾನಂದರು. ಪ್ರತಿಯೊಬ್ಬರು ಜೀವನದಲ್ಲಿ ಯಾವ ಕೆಲಸ ಮಾಡುತ್ತಾರೆಯೋ ಆ ಕೆಲಸದಲ್ಲಿ ಧೈರ್ಯ, ಸಮೃದ್ದಿ ಇರಬೇಕು ಎಂದರು.

ಪ್ರತಿಯೊಬ್ಬ ಮನುಷ್ಯ ಭಕ್ತಿ ಮಾಡಬಾರದು. ಮಾಡಿದರೆ ಬಿಡಬಾರದು. ಮಠ, ದೇವಸ್ಥಾನಕ್ಕೆ ಹೋಗಿ ಬರುತ್ತೇವೆ. ಆದರೆ ಅಲ್ಲಿ ಶರಣಾಗತಿಯಾಗದಿದ್ದರೆ ಭಕ್ತರು ಹೇಗಾಗುತ್ತೇವೆ. ನಮ್ಮಲ್ಲಿ  ಅಹಂಕಾರ, ಸಿಟ್ಟು ಇದ್ದಾಗ ಭಕ್ತಿ ಹೇಗಾಗುತ್ತದೆ ಎಂದ ಅವರು, ಭಕ್ತಿ ಶೃದ್ದೆ, ಧೈರ್ಯ ಇದ್ದರೆ ಎಲ್ಲಿ ಬೇಕಾದರೂ ಬದುಕಬಹುದು ಎಂದು ಹೇಳಿದರು.

ದೇವರಿಗೆ ಶರಣಾಗತಿಯಾಗಬೇಕಾದರೆ ಹೂವು, ಹಣ್ಣು ತೆಗೆದುಕೊಂಡು ಹೋಗುತ್ತೇವೆ. ಅದನ್ನು ಎಲ್ಲರಿಗೂ ಹಂಚಿದ ಮೇಲೆ ಮನೆಯಲ್ಲಿರುವವರ ಜತೆ ಜಗಳ ಮಾಡುತ್ತೇವೆ. ಇಂಥ ಭಕ್ತಿ ಬೇಡ. ಜಡ ವಸ್ತುವನ್ನು ಪ್ರಸಾದ ಎಂದು ಕರೆದ ಮನುಷ್ಯ ದೇವರು ಕೊಟ್ಟ ದೇಹವನ್ನೆ ಮರೆತ್ತಿದ್ದಾರೆ. ನಮ್ಮಲ್ಲಿರುವ ಅಹಂಕಾರ ಬಿಟ್ಟು ಸಹಬಾಳ್ವೆ ಮಾಡಿದಾಗ ಮಾತ್ರ ಸಮಾಜ ಸುಧಾರಿಸಲು ಸಾಧ್ಯವಾಗುತ್ತದೆ ಎಂದರು.

ಆಸ್ಟ್ರೇಲಿಯಾ ಸಿಡ್ನಿಯ ಕನ್ನಡ ಸಂಘದ ಅಧ್ಯಕ್ಷ ವಿಜಯಕುಮಾರ ಹಲಗಲಿ ಮಾತನಾಡಿ, ಸಿಡ್ನಿ ಕನ್ನಡ ಸಂಘ ೩೮ನೇ ವರ್ಷಕ್ಕೆ ಕಾಲಿಟ್ಟಿದೆ. ಆಸ್ಟ್ರೇಲಿಯಾದಲ್ಲಿ ಕನ್ನಡ ಕಟ್ಟಿ ಬೆಳೆಸಲು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ವೀರಶೈವ ಸಮಾಜದವರಿಗೆ ಸ್ವಾಮೀಜಿಯ ಆಶೀರ್ವಚನ ಕೊಡಿಸುವ ಕಾರ್ಯವನ್ನು ಕಳೆದ ೨೫ ವರ್ಷಗಳಿಂದ ಮಾಡುತ್ತಿದ್ದೇವೆ. ಗುರು ವೀರಕ್ತ ಸ್ವಾಮೀಜಿಗಳು ಆಸ್ಟ್ರೇಲಿಯಾಕ್ಕೆ ಆಗಮಿಸಿ ಧಾರ್ಮಿಕ ವಿಚಾರಗಳನ್ನು ಅಲ್ಲಿನ ಭಕ್ತರಿಗೆ ತಿಳಿಸುವ ಕಾರ್ಯ ಮಾಡಿದ್ದು ನಿಜಕ್ಕೂ ಶ್ಲಾಘನೀಯ ಎಂದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಕಳೆದ ಎರಡು ವರ್ಷದಿಂದ ಆಸ್ಟ್ರೇಲಿಯಾದ ವೀರಶೈವ ಸಮಾಜದವರಿಗೆ ಸಹಾಯ ಮಾಡುತ್ತ ಬಂದಿದ್ದಾರೆ. ಶ್ರೀಗಳು ಆಸ್ಟ್ರೇಲಿಯಾ ಭಕ್ತರ ಬಗ್ಗೆ ಮೇಲಿಂದ ಮೇಲೆ ವಿಚಾರಿಸಿ ಕನ್ನಡ, ಧಾರ್ಮಿಕ ವಿಚಾರದ ಬಗ್ಗೆ ಸದಾ ಮಾರ್ಗದರ್ಶನ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸುವಿಚಾರ ಚಿಂತನ ೨೬ನೇ ಸಂಭ್ರಮ ಆಚರಿಸಿಕೊಳ್ಳುತ್ತಿದೆ. ಇದು ಸ್ವಾಮಿತ್ವ ಅಲ್ಲ. ಯಾವುದನ್ನು ಪರಿಗಣಿಸದೆ ಸಮಾನವಾಗಿ ಇರುವವರೆ ಸ್ವಾಮೀಜಿ ಎಂದರು.

ಸಮಾಜಕ್ಕೆ ಸ್ವಾಮೀಜಿಯಾದವರು ಯೋಗ್ಯ ಗುರುವಿನ ಜತೆ ಯೋಗ್ಯ ಶಿಷ್ಯರು ಆಗಿರಬೇಕಾಗುತ್ತದೆ. ಸೋಲು ಗೆಲವನ್ನು ಎಲ್ಲರೂ ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡು ನಮ್ಮ ಮೇಲೆ ನಾವೇ ಅಭಿಮಾನ ಹೊಂದುವ ಕೆಲಸವನ್ನು ಎಲ್ಲರೂ ಮಾಡಬೇಕೆಂದು ಸಲಹೆ ನೀಡಿದರು.

ಸಮಾಜದಲ್ಲಿ ಸಾಕಷ್ಟು ವಿಚಾರಗಳಿವೆ. ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಲು ನಿರಂತರ ಕೆಲಸ ಮಾಡಬೇಕು. ಕೆಟ್ಟ ವಿಚಾರ ಬಿಟ್ಟು ಒಳ್ಳೆಯ ವಿಚಾರವನ್ನು ಸಮಾಜಕ್ಕೆ ಪಸರಿಸುವ ಕಾರ್ಯ ಮಾಡವುದು ಅಗತ್ಯವಾಗಿದೆ ಎಂದು ಹೇಳಿದರು.

ಗಿರಿಜಾ ಹಲಗಲಿ, ಅರವಿಂದ ಜೋಶಿ, ಚಂದ್ರಶೇಖರ ಸವಡಿ, ಸುರೇಶ ಜೀನರಾಳೆ, ವೀರುಪಾಕ್ಷಯ್ಯ ನೀರಲಗಿಮಠ, ಅರವಿಂದ ಪಾಟೀಲ, ವಿಜಯ ಶಾಸ್ತ್ರೀ ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button