ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯದಲ್ಲಿ ರಡ್ಡಿ ಸಮಾಜವು ಒಗ್ಗಟ್ಟಿನಿಂದ ಶ್ರಮಿಸಿದರೆ ಪ್ರತಿ ಜಿಲ್ಲೆ, ತಾಲೂಕು ಕೇಂದ್ರ ಸ್ಥಾನದಲ್ಲಿ ರಡ್ಡಿ ಭವನ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯಗಳ ನಿರ್ಮಾಣ ಕಾಲ ದೂರ ಇಲ್ಲ ಎಂದು ಹರಿಹರದ ಎರೆ ಹೊಸಳ್ಳಿ ರಡ್ಡಿ ಗುರುಪೀಠದ ವೇಮನಾನಂದ ಶ್ರೀಗಳು ಹೇಳಿದರು.
ಸದಾಶಿವನಗರದಲ್ಲಿ ಶನಿವಾರ ಬೆಳಗಾವಿ ರಡ್ಡಿ ಸಂಘ ಆಯೋಜಿಸಿದ್ದ ಮಹಾಯೋಗಿ ವೇಮನಗರ ಜಯಂತಿ, ರಡ್ಡಿ ಭವನ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರು ಭಾಗದ ರಡ್ಡಿ ಸಮಾಜದವರು ಈ ಭಾಗದಲ್ಲಿರುವ ಸಮಾಜದವರ ಬೆಂಬಲಕ್ಕೆ ನಿಂತರೆ ನಿಮ್ಮ ಕನಸಿನಂತೆ ಜಿಲ್ಲೆ, ತಾಲೂಕಿನಲ್ಲಿ ಇಂತಹ ಕಟ್ಟಡಗಳು ನಿರ್ಮಾಣ ಆಗಲಿವೆ. ಹಾಗಾಗಿ ಸಮಾಜದವರು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಕೈಗೊಂಡರೆ ಯಶಸ್ಸು ಸಿಗುತ್ತದೆ ಎಂದು ತಿಳಿಸಿದರು.
ಎಲ್ಲರೂ ಕಟ್ಟಡ ಗುದ್ದಲಿ ಪೂಜೆಗೆ ಕರೆಯುತ್ತಾರೆ. ಆದರೆ, ಉದ್ಘಾಟನೆಗೆ ಕರೆಯುವುದಿಲ್ಲ. ಏಕೆಂದರೆ ಆ ಕಟ್ಟಡ ಪೂರ್ಣಗೊಳ್ಳದೆ ಆಮೆ ಗತಿಯಲ್ಲಿ ಸಾಗುತ್ತಿರುತ್ತದೆ. ಆದರೆ, ಬೆಳಗಾವಿ ರಡ್ಡಿ ಸಂಘದವರು ಕೇವಲ ಎರಡು ವರ್ಷದ ಅವಧಿಯಲ್ಲಿ ರಡ್ಡಿ ಭವನ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯಗಳನ್ನು ನಿರ್ಮಾಣ ಮಾಡಿರುವುದು ಹೆಮ್ಮೆಯ ವಿಷಯ ಎಂದರು.
ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ಸಾಮಾಜಿಕ, ಅರ್ಥಿಕವಾಗಿ , ಬೌದ್ಧಿಕವಾಗಿ ಮುಂದೆ ಇರುವ ರಡ್ಡಿ ಸಮಾಜವು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕೊಟ್ಟು ಅವರ ಸಬಲೀಕರಣಕ್ಕೆ ಮುಂದಾಗಿರುವುದು ಹೆಮ್ಮೆಯ ವಿಷಯ. ರಡ್ಡಿ ಸಮಾಜವು ಗ್ರಾಮೀಣ ಪ್ರದೇಶಗಳ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ವಸತಿ ನಿಲಯ ನಿರ್ಮಿಸಿರುವುದು ಅಭಿನಂದನೀಯ ಕೆಲಸ. ಮತ್ತೊಂದು ಸಮಾಜಕ್ಕೆ ಮಾದರಿಯಾಗಿ ಕೆಲಸ ಮಾಡುತ್ತಿರುವುದು ಒಳ್ಳೆಯ ವಿಚಾರ ಎಂದರು.
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಯಾವುದೇ ಕೆಲಸ ಆಗಬೇಕಾದರೆ ಅನೇಕ ಜನ ಕೈ ಜೋಡಿಸಬೇಕಾಗುತ್ತದೆ. ಒಗ್ಗಟ್ಟಿನ ಬಲ ಬೇಕಾಗುತ್ತದೆ. ಸರಕಾರದ ಅನುದಾನ ಪಡೆಯದೆ, ಸಮಾಜದಿಂದ ದೇಣಿಗೆ ಸಂಗ್ರಹಿಸಿ ಸಮಾಜದ ಮುಖಂಡರು ರಡ್ಡಿ ಭವನ, ವಿದ್ಯಾರ್ಥಿ ನಿಲಯ ನಿರ್ಮಿಸಲು ನಿರ್ಧರಿಸಿದ್ದರು. ಅದೇ ರೀತಿ ದಾನಿಗಳು ಹಣ ಸಂಗ್ರಹಿಸಿ ಕಟ್ಟಡ ನಿರ್ಮಿಸಲು ಸಹಾಯ ಮಾಡಿದ್ದಾರೆ. ನಿವೃತ್ತ ಅಧಿಕಾರಿಗಳು ಸಮಾಜದ ಏಳಿಗೆಗಾಗಿ ಪ್ರತಿನಿತ್ಯ ಸ್ಥಳಕ್ಕೆ ಬಂದು ಅಭಿಮಾನದಿಂದ ಸೇವೆ ಮಾಡುತ್ತಿರುವುದು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ಶಾಸಕ ಶಿವಶಂಕರ ರೆಡ್ಡಿ ಮಾತನಾಡಿ, ಒಕ್ಕುಲತನ ನಂಬಿಕೊಂಡು ಸ್ವಾಭಿಮಾನದಿಂದ ಬದುಕುತ್ತಿರುವ ರಡ್ಡಿ ಸಮಾಜವು ಸಮಾಜದಲ್ಲಿ ಜಾಗೃತರಾಗಿ ಸಂಘಟಿತರಾಗುವುದು ಅವಶ್ಯಕವಾಗಿದೆ. ರಾಜಕೀಯ, ಆರ್ಥಿಕ, ಶೈಕ್ಷಣಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಮಾಜ ಅಭಿವೃದ್ಧಿ ಹೊಂದಬೇಕಾಗಿದೆ. ಹೇಮರಡ್ಡಿ ಮಲ್ಲಮ್ಮ, ವೇಮನ ಅಧ್ಯಯನ ಪೀಠಗಳನ್ನು ಸರ್ಕಾರವು ಆರಂಭಿಸಿದೆ. ಬೆಳಗಾವಿ ರಡ್ಡಿ ಸಮಾಜ ಕಟ್ಟಡ ಸಂಘಟನೆಯ ಸಂಕೇತ. ಈ ಸಮಾಜದ ಹೆಚ್ಚಿನವರು ರಾಜ್ಯದ ಸಿಎಂ ಆಗಬೇಕಿತ್ತು, ಆಗಿಲ್ಲ. ಹಾಗಾಗಿ ರಾಜಕೀಯವಾಗಿ ಬೆಳೆಯಬೇಕು ಎಂದರು.
ಶಾಸಕ ರಾಮಲಿಂಗಾರಡ್ಡಿ ಮಾತನಾಡಿ, ರಡ್ಡಿ ಸಮಾಜವು ಜಾಗೃತರಾಗಿ ಸಂಘಟನೆಯಾಗುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಬೆಳಗಾವಿ ನಗರದಲ್ಲಿ ರಡ್ಡಿ ಭವನದ ಜತೆಗೆ ವಿದ್ಯಾರ್ಥಿನಿಯರಿಗಾಗಿ ವಸತಿ ನಿಲಯ ನಿರ್ಮಿಸಲಾಗಿದೆ. ಎಲ್ಲ ನಗರ ಪ್ರದೇಶಗಳಲ್ಲಿ ಇಂತಹ ಕೆಲಸ ಆಗಬೇಕು. ಇದಕ್ಕಾಗಿ ಸಮಾಜದ ಎಲ್ಲರೂ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಮಾಜಿ ಸಚಿವ ಎಚ್.ಕೆ.ಪಾಟೀಲ, ಶಾಸಕರಾದ ಸೌಮ್ಯಾ ರೆಡ್ಡಿ, ಎ.ಎಸ್. ಪಾಟೀಲ ನಡಹಳ್ಳಿ, ಅನಿಲ ಬೆನಕೆ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್‌ಆರ್. ಪಾಟೀಲ್, ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಕೇಂದ್ರದ ಮಾಜಿ ಸಚಿವ ಬಸವರಾಜ ಅನ್ವರಿ. ಮಾಜಿ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ, ಬೆಳಗಾವಿ ರಡ್ಡಿ ಸಂಘದ ಗೌರವಾಧ್ಯಕ್ಷೆ ಇಂದಿರಾ ಮಳಲಿ, ಕರ್ನಾಟಕ ರೆಡ್ಡಿ ಜನಸಂಘದ ಅಧ್ಯಕ್ಷ ಎಸ್. ಜಯರಾಮ ರೆಡ್ಡಿ, ಬೆಳಗಾವಿ ರಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರು, ಉಪಾಧ್ಯಕ್ಷ ಬಸವರಾಜ ಬಾವಲತ್ತಿ, ಪಾಂಡುರಂಗ ರಡ್ಡಿ, ಬಿ.ಎನ್.ನಾಡಗೌಡ, ಪ್ರೊ.ಸಂಜೀವ ಎಚ್.ಸೊನ್ನದ, ನಾರಾಯಣ ಕೆಂಚರೆಡ್ಡಿ, ಮಂಜುನಾಥ ಪಾಟೀಲ, ಪ್ರೊ.ಪ್ರಕಾಶ ಸೋನವಾಲಕರ, ಅಪ್ಪಾಸಾಹೇಬ ಪಾಟೀಲ, ಡಾ.ಶ್ವೇತಾ ಸೋನವಾಲಕರ, ಪ್ರೇಮಲತಾ ರಡ್ಡಿ, ತುಳಸಾ ವಿ.ಪಾಟೀಲ ಇನ್ನಿತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ