
ಪ್ರಗತಿವಾಹಿನಿ ಸುದ್ದಿ; ಮೈಸೂರು :– ಹುಲಿಯೊಂದು ಕಳ್ಳಬೇಟೆಗಾರರ ಉರುಳಿಗೆ ಸಿಲುಕಿ ದುರಂತ ಸಾವಿಗೀಡಾಗಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ವನ್ಯಜೀವಿ ವಲಯದಲ್ಲಿ ನಡೆದಿದ್ದು, ಅದರ ಮೂರು ಮರಿಗಳು ಅನಾಥವಾಗಿರುವುದರಿಂದ ಅವುಗಳ ರಕ್ಷಣೆಗಾಗಿ ಹುಡುಕಾಟವನ್ನು ಅರಣ್ಯ ಇಲಾಖೆ ಸಾಕಾನೆಗಳ ಸಹಾಯದಿಂದ ಕಾರ್ಯಾಚರಣೆ ಆರಂಭಿಸಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಕನಕೋಟೆ ಸಫಾರಿಯ ವೇಳೆ ಇಲ್ಲಿನ ನಾಯಂಜಿಕಟ್ಟೆ ಎಂಬ ಕೆರೆ ಬಳಿ ಮೂರು ಮರಿಗಳೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಹೆಣ್ಣು ಹುಲಿ ಕಳ್ಳಬೇಟೆಗಾರರ ಉರುಳಿಗೆ ಸಿಲುಕಿ ಸಾವನ್ನಪ್ಪಿದ್ದು, ಈಗ ಅದರ ಮೂರು ಮರಿಗಳು ಅನಾಥವಾಗಿವೆ. ಅವುಗಳ ರಕ್ಷಣೆಗಾಗಿ ಇದೀಗ ಅನಾಥ ಹುಲಿ ಮರಿಗಳ ರಕ್ಷಣೆಗೆ ಅರಣ್ಯ ಇಲಾಖೆ ಅಭಿಮನ್ಯು, ಅಶ್ವತ್ಥಾಮ, ಭೀಮ ಸಾಕಾನೆಗಳ ಮೂಲಕ ಕಾರ್ಯಾಚರಣೆ ಆರಂಭಿಸಲಾಗಿದೆ.ಈ ಕುರಿತಂತೆ ಮಾತನಾಡಿರುವ ವಲಯ ಅರಣ್ಯಾಧಿಕಾರಿ ಎಸ್.ಎಸ್.ಸಿದ್ದರಾಜು ಅವರು, ಮರಿಗಳನ್ನು ಹೊಂದಿರುವ ಹೆಣ್ಣುಹುಲಿ ಸಾವನ್ನಪ್ಪಿದ್ದು, ಸದ್ಯ ಹುಲಿ ಮರಿಗಳನ್ನು ರಕ್ಷಿಸಲು ಸಾಕಾನೆಗಳ ಸಹಾಯದಿಂದ ಕೊಂಬಿಂಗ್ ಆರಂಭಿಸಲಾಗಿದೆ. ಜತೆಗೆ ಉರುಳು ಹಾಕಿರುವ ವಿಚಾರವಾಗಿ ತನಿಖೆ ನಡೆಯುತ್ತಿದೆ. ತನಖೆ ನಂತರ ಕಾನೂನು ಕ್ರಮ ಜರುಗಿಸಲಾಗುವುದು. ಮರಿಗಳ ರಕ್ಷಣೆಗೆ ಕೊಂಬಿಂಗ್ ಆರಂಭವಾಗಿದ್ದು, ಬೋನು ಸಹ ಇರಿಸಲಾಗಿದೆ ಎಂದಿದ್ದಾರೆ.
ಅನಾಥವಾಗಿರುವ ಮರಿಗಳು 6ರಿಂದ8 ತಿಂಗಳ ವಯಸ್ಸಿನವಾಗಿದ್ದು, ಅವುಗಳು ಸ್ವತಂತ್ರವಾಗಿ ಬದುಕುವುದು ಕಷ್ಟವಾಗಿದೆ. ಹೀಗಾಗಿ ಅವುಗಳನ್ನು ಪತ್ತೆ ಹಚ್ಚಿ ಸೆರೆಹಿಡಿದು ಪೋಷಿಸುವ ಕೆಲಸಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.