ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಒಡಿಶಾ ರೈಲು ದುರಂತದ ಹಿನ್ನೆಲೆಯಲ್ಲಿ ಬಿಜೆಪಿ ಪ್ರತಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆ ವಿಳಂಬವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ನೀಡಿದ್ದಾರೆ.
ಆದರೆ ಈ ಹೇಳಿಕೆ ಈಗ ಬಹು ಚರ್ಚೆಗಳಿಗೆ ಆಸ್ಪದವಾಗಿದ್ದು ಅಪಹಾಸ್ಯಕ್ಕೀಡಾಗಿದೆ. ರಾಜ್ಯದಲ್ಲಿ ಚುನಾವಣೆ ನಡೆದಿದ್ದು ಮೇ 10ರಂದು. ಫಲಿತಾಂಶ ಬಂದಿದ್ದು ಮೇ 13ರಂದು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದು ಪೂರ್ಣ ಪ್ರಮಾಣದಲ್ಲಿ ಆಡಳಿತವನ್ನೂ ಆರಂಭಿಸಿದೆ.
ಇಷ್ಟೆಲ್ಲ ನಡೆದು ತಿಂಗಳು ಕಳೆಯುತ್ತ ಬಂದಿದ್ದರೂ ಕರ್ನಾಟಕ ಬಿಜೆಪಿಗೆ ಇನ್ನೂ ಪ್ರತಿಪಕ್ಷ ನಾಯಕರ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈ ವಿಳಂಬಕ್ಕೆ ಹತ್ತು ಹಲವು ಕಾರಣಗಳ ಬಗ್ಗೆ ವಿಮರ್ಷಿಸಲಾಗುತ್ತಿದೆ.
ಪ್ರತಿಪಕ್ಷ ನಾಯಕರನ್ನಾಗಿ ಯಾರನ್ನು ಆಯ್ಕೆ ಮಾಡಬೇಕೆಂಬುದೇ ಬಿಜೆಪಿಯಲ್ಲಿ ಗೊಂದಲ ಹುಟ್ಟುಹಾಕಿದೆ ಎನ್ನಲಾಗುತ್ತಿದ್ದು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಆಯ್ಕೆ ಮಾಡಬೇಕೋ, ಬಿ.ವೈ. ವಿಜಯೇಂದ್ರ ಅವರನ್ನು ಆಯ್ಕೆ ಮಾಡಬೇಕೋ ಎಂಬ ದ್ವಂದ್ವದಲ್ಲಿ ಪಕ್ಷ ಸಿಲುಕಿದೆ ಎನ್ನಲಾಗಿದೆ. ಇದರ ಹೊರತಾಗಿ ಇನ್ನೂ ಹಲವರ ಹೆಸರುಗಳು ಪ್ರತಿಪಕ್ಷ ನಾಯಕ ಸ್ಥಾನದ ಪಟ್ಟಿಯಲ್ಲಿವೆ ಎನ್ನಲಾಗಿದೆ.
ಆದರೆ ಈ ವಿಷಯವನ್ನು ಮರೆ ಮಾಚುವ ವಿಷಯದಲ್ಲೂ ಸಂಕೋಚ ಎದುರಾಗಿದ್ದು ಬೇರೇನನ್ನೂ ಹೇಳಲಾಗದ ಪ್ರಹ್ಲಾದ ಜೋಶಿ ಅವರು ನೆಪ ಹೇಳುವ ಭರದಲ್ಲಿ ಒಡಿಶಾ ರೈಲು ದುರಂತದೊಂದಿಗೆ ವಿಳಂಬ ತಳಕು ಹಾಕುತ್ತಿರುವುದು ಅಚ್ಚರಿ ಹಾಗೂ ಅಪಹಾಸ್ಯಕ್ಕೆ ಎಡೆ ಮಾಡಿದೆ.
ಚುನಾವಣೆ ಫಲಿತಾಂಶ ಬಂದು 24 ದಿನಗಳು ಕಳೆದಿವೆ. ರೈಲು ದುರಂತ ಸಂಭವಿಸಿದ್ದು ಮೂರು ದಿನಗಳ ಹಿಂದೆ. ಹಾಗಿದ್ದರೆ 21 ದಿನಗಳಲ್ಲಿ ಪ್ರತಿಪಕ್ಷ ನಾಯಕರ ಆಯ್ಕೆಗೆ ಪುರಸೊತ್ತು ಸಿಗಲಿಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ. ಇಷ್ಟಕ್ಕೂ ರೈಲು ದುರಂತ ನಡೆದಿದ್ದು ದೂರದ ಒಡಿಶಾದಲ್ಲಿ. ಈ ದುರಂತದಲ್ಲಿ ಕರ್ನಾಟಕದ ಬಹುತೇಕ ಎಲ್ಲ ಪ್ರಯಾಣಿಕರೂ ಸುರಕ್ಷಿತವಾಗಿದ್ದು ರಾಜ್ಯ ಸರಕಾರ ಅವರನ್ನು ತಾಯ್ನಾಡಿಗೆ ಕರೆ ತರುವ ಎಲ್ಲ ಪ್ರಯತ್ನಗಳನ್ನೂ ಯಶಸ್ವಿಯಾಗಿ ನಿಭಾಯಿಸಿದೆ. ಹೀಗಿರುವಾಗ ಕರ್ನಾಟಕದಲ್ಲಿ ಪ್ರತಿಪಕ್ಷ ನಾಯಕರ ಆಯ್ಕೆಗೂ ರೈಲು ದುರಂತಕ್ಕೂ ತಳಕು ಹಾಕುವ ಕಾರಣವೇನು? ಎಂಬುದೀಗ ಚರ್ಚೆಗೆ ಗ್ರಾಸವಾಗಿದೆ.
ಪ್ರಹ್ಲಾದ ಜೋಶಿಯವರ ಈ ಹೇಳಿಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು ಜಾಲತಾಣಗಳಲ್ಲೂ ನೆಟ್ಟಿಗರು ಬಿಜೆಪಿಗರ ಜನ್ಮ ಜಾಲಾಡಲು ಆರಂಭಿಸಿದ್ದಾರೆ.
ಏತನ್ಮಧ್ಯೆ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಅವಧಿಯೂ ಮುಗಿದಿದ್ದು ಶೀಘ್ರವೇ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಪ್ರಹ್ಲಾದ ಜೋಶಿ ಸುಳಿವು ನೀಡಿದ್ದಾರೆ.
https://pragati.taskdun.com/conspiracy-of-disruptive-forces-behind-odisha-train-disaster-suspected/
https://pragati.taskdun.com/dont-listen-to-such-rumors-the-government-is-with-you-minister-to-the-people-lakshmi-hebbalkar-abhay/
https://pragati.taskdun.com/mla-raju-kageharrasmentbelagaviaccusedgrama-panchayat-mamber/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ