Kannada NewsKarnataka NewsLatest

ತಾವು ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಸಿದ್ದರಾಮಯ್ಯಹೇಳಿದ್ದೇನು?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಬಿಜೆಪಿಯವರಿಗೆ ಬುದ್ಧಿ ಇಲ್ಲ.. ನನಗೆ ಕ್ಷೇತ್ರ ಇಲ್ಲವಾಗಿದ್ದರೆ ಎಲ್ಲರೂ ನನ್ನನ್ನು ಕರೆಯುತ್ತಿದ್ದರಾ..?” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿಗರಿಗೆ ತಿರುಗೇಟು ನೀಡಿದ್ದಾರೆ.

ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನ ಕ್ಷೇತ್ರ ಬಾದಾಮಿ. ಅಲ್ಲಿನ ಜನರು, ಮಹಿಳೆಯರು ಅಲ್ಲಿಂದಲೇ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಹಲವರು ಪತ್ರ ಕೂಡ ಬರೆದಿದ್ದಾರೆ. ಆದರೆ ನಾನು ನಿರಂತರ ಪ್ರವಾಸದಲ್ಲಿರುವುದರಿಂದ ಅಲ್ಲಿ ನಿರೀಕ್ಷಿತ ಮಟ್ಟಿನ ಗಮನ ನೀಡಲು ಸಾಧ್ಯವಾಗುತ್ತಿಲ್ಲ. ಅಲ್ಲಿನ ಜನ ನೀವು ಬರಬೇಕಾಗಿಲ್ಲ ಎಂದು ಹೇಳಿದರೂ ನನ್ನ ಮನಸ್ಸಿಗೆ ಸರಿ ಎನಿಸುತ್ತಿಲ್ಲ. ಕೋಲಾರ, ವರುಣಾ, ಚಾಮರಾಜಪೇಟೆ ಸೇರಿದಂತೆ ನಾನಾ ಕಡೆಗಳಲ್ಲಿ ತಮಗೆ ಚುನಾವಣೆ ಸ್ಪರ್ಧೆಗೆ ಆಹ್ವಾನಿಸುತ್ತಿದ್ದಾರೆ” ಎಂದರು.

ಸಿ.ಎಂ. ಇಬ್ರಾಹಿಂ  ಕುರಿತು ಪ್ರತಿಕ್ರಿಯಿಸಿದ ಅವರು, “ಇಬ್ರಾಹಿಂ ನನ್ನ ಒಳ್ಳೆಯ ಗೆಳೆಯ. ಆದರೆ ಇತ್ತೀಚೆಗೆ ನಮ್ಮನ್ನು ಬಿಟ್ಟು ಜೆಡಿಎಸ್ ಗೆ ಹೋಗಿ ಅಧ್ಯಕ್ಷರಾಗಿದ್ದಾರೆ. ಅವರು ಭದ್ರಾವತಿಗೆ ಜೆಡಿಎಸ್ ನಿಂದ ನಿಂತರೆ ಉತ್ತಮ” ಎಂದರಲ್ಲದೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು,  “ನಾನು ಯಾವ ಕಾರಣಕ್ಕೂ ಕಾಂಗ್ರೆಸ್ ನಲ್ಲಿ ಒಬ್ಬಂಟಿಯಾಗಿಲ್ಲ” ಎಂದು ಅಕ್ಕಪಕ್ಕದಲ್ಲಿ ನಿಂತ ಶಾಸಕರು, ಪಕ್ಷದ ಮುಖಂಡರತ್ತ ಕೈತೋರಿಸಿದರು.

ಜನಾರ್ದನ ರೆಡ್ಡಿ ಕಾಂಗ್ರೆಸ್ ಗೆ ಸೇರುವ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದ ಸಿದ್ದರಾಮಯ್ಯ ಮುರುಘಾ ಶ್ರೀಗಳ ವಿಷಯ ಕೋರ್ಟ್ ನಲ್ಲಿರುವುದರಿಂದ ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.

ದುರ್ಬಲ ವರ್ಗದವರಿಗೆ ಮೀಸಲಾತಿ ಕುರಿತು ಪ್ರತಿಕ್ರಿಯಿಸಿದ ಅವರು, ಆರ್ಥಿಕ ದೌರ್ಬಲ್ಯ ಪರಿಗಣಿಸಬೇಕೆಂದಿಲ್ಲ. ಬದಲಾಗಿ ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿರುವುದನ್ನು ಪರಿಗಣಿಸಬೇಕೆಂದಿದೆ. ಆದಾಗ್ಯೂ ಆ್ಯಕ್ಟ್ ಜಾರಿಗೆ ಬಂದ ನಂತರವೇ ಆ ಬಗ್ಗೆ ನೋಡಿ ಪ್ರತಿಕ್ರಿಯಿಸಲಾಗುವುದು ಎಂದರು.

ಮೋದಿಯವರು ತಮ್ಮದು ಡಬಲ್ ಎಂಜಿನ್ ಸರಕಾರ ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರು ರಾಜ್ಯದಲ್ಲಿ ನೆರೆ ಬಂದಾಗ ಇಲ್ಲಿಗೆ ಬಂದಿದ್ದರೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, “ಮೋದಿಯವರು ಬಡತನ, ನಿರುದ್ಯೋಗ ನಿವಾರಣೆಗೆ ಏನು ಮಾಡಿದ್ದಾರೆ?, ಶೇ. 40 ಕಮಿಷನ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವ ಕ್ರಮ ಕೈಗೊಂಡಿದ್ದಾರೆ? ಎಂದರಲ್ಲದೆ ಚುನಾವಣೆ ಸಮೀಪಿಸಿದ್ದರಿಂದ ಈಗ ಬೆಂಗಳೂರಿಗೆ ಪ್ರವಾಸ ಕೈಗೊಂಡಿದ್ದಾರೆ ಅಷ್ಟೇ” ಎಂದರು.

ಅಮಿತ್ ಶಾ ಮೇಲೆ ಕೊಲೆ ಕೇಸು ಇರಲಿಲ್ವಾ?:

ಕೊಲೆ ಆಪಾದನೆ ಎದುರಿಸುತ್ತಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಹುಟ್ಟುಹಬ್ಬಕ್ಕೆ ಆಗಮಿಸಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, “ಅಮಿತ್ ಶಾ ಮೇಲೂ ಕೊಲೆ ಕೇಸಿದೆ. ಅವರು ಈ ದೇಶದ ಗೃಹ ಸಚಿವರಾಗಿಲ್ಲವೇ, ಕೊಲೆ ಆಪಾದನೆ ಹೊತ್ತ ಅದೆಷ್ಟೋ ಜನ ಇಂದು ಸಚಿವರು, ಶಾಸಕರು, ಸಂಸದರಾಗಿದ್ದಾರೆ. ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ಪರಿಗಣನೆಯಾಗಿ ಶಿಕ್ಷೆಯಾಗಿದ್ದರೆ ಮಾತ್ರ ಆ ಬಗ್ಗೆ ವಿಚಾರಿಸಬಹುದಿತ್ತು” ಎಂದು ಸಮರ್ಥಿಸಿಕೊಂಡರು.

ಮಾಜಿ ಸಚಿವ ಎಂ.ಬಿ. ಪಾಟೀಲ, ಶಾಸಕಿಯರಾದ ಲಕ್ಷ್ಮೀ ಹೆಬ್ಬಾಳಕರ, ಡಾ. ಅಂಜಲಿ ನಿಂಬಾಳಕರ, ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ, ಲಕ್ಷ್ಮಣರಾವ್ ಚಿಂಗಳೆ, ಮಾಜಿ ಶಾಸಕ ಫೊರೋಜ್ ಸೇಠ್ ಮತ್ತಿತರರಿದ್ದರು.

ರತನ್ ಟಾಟಾಗೆ ಅವಮಾನ ಮಾಡಿದವರಿಗೆ ಕಾಲವೇ ಉತ್ತರ ನೀಡಿತು!

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button