Karnataka NewsLatestPolitics

*ವಿದ್ಯುತ್ ನಿಗಮಗಳ ಖಾಸಗೀಕರಣಕ್ಕೆ ವಿರೋಧ ವಿಚಾರ: ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಎಂದ ಸಿಎಂ ಡಿ ಕೆ ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ವಿದ್ಯುತ್ ನಿಗಮಗಳನ್ನು ಖಾಸಗೀಕರಣ ಮಾಡದಿರುವ ವಿಚಾರವಾಗಿ ನಾನೊಬ್ಬನೇ ತೀರ್ಮಾನ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ, ನಿಮ್ಮ ಅಭಿಪ್ರಾಯದ ಮೇರೆಗೆ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಭರವಸೆ ನೀಡಿದರು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಹಾಗೂ ಅಸೋಸಿಯೇಷನ್ ಒಕ್ಕೂಟದವರು ಬೆಂಗಳೂರು ಅರಮನೆ ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ ಅಭಿನಂದನೆ ಸಮಾರಂಭದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

“ವಿದ್ಯುತ್ ನಿಗಮಗಳನ್ನು ಖಾಸಗೀಕರಣ ಮಾಡಬಾರದು ಎಂದು ನೀವು ಹೋರಾಟ ಮಾಡುತ್ತಿದ್ದೀರಿ. ನಾನು ಏನು ಮಾತನಾಡಲಿದ್ದೇನೆ ಎಂದು ಎಲ್ಲರೂ ನೋಡುತ್ತಿದ್ದಾರೆ. ಇದು ಪ್ರಸ್ತಾಪವಾಗಿದ್ದು 2003ರಲ್ಲಿ, ಈ ಕುರಿತ ಕಾನೂನು ತಂದವರು ಯಾರು? ಬಿಜೆಪಿ ಸರ್ಕಾರ. ನೀವು ಯಾರೂ ಆಗ ಅದರ ವಿರುದ್ಧ ಧ್ವನಿ ಎತ್ತಲಿಲ್ಲ. ಯಾರೂ ಹೋರಾಟ ಮಾಡಲಿಲ್ಲ, ಧಿಕ್ಕಾರ ಹೇಳಲಿಲ್ಲ. ನನ್ನ ಬಳಿ ಹಾಗೂ ಜಾರ್ಜ್ ಅವರ ಬಳಿ ಬಂದು ಖಾಸಗೀಕರಣಕ್ಕೆ ಅವಕಾಶ ನೀಡಬೇಡಿ ಎಂದು ಹೇಳುತ್ತಿದ್ದೀರಿ. ನೀವು ಸದಾ ನನ್ನ ಜೊತೆ ಇರುತ್ತೀರಿ ಎಂದು ಹೇಳುತ್ತಿದ್ದೀರಿ. ತಪ್ಪು ಮಾಡಿದವರ ವಿರುದ್ಧ ಧಿಕ್ಕಾರ ಹೇಳಿದಾಗ, ಒಳ್ಳೆಯ ಕೆಲಸ ಮಾಡಿದವರಿಗೆ ಜೈಕಾರ ಹೇಳಿದಾಗ ಮಾತ್ರ ಅದಕ್ಕೆ ಗೌರವ ಬರುತ್ತದೆ” ಎಂದು ತಿಳಿಸಿದರು.

ವಿದ್ಯುತ್ ಲೈನ್ ಎಳೆದವರು ನೀವು, ಹಣ ಮಾಡುವುದು ಖಾಸಗಿ ಕಂಪನಿಗಳಾ?

Home add -Advt

“ಬಿಜೆಪಿ ತಂದಿರುವ ಕಾನೂನು ಸರಿ ಇಲ್ಲ ಎಂದು ನಿಮ್ಮ ಸಂಘಟನೆಗಳ ಅಧ್ಯಕ್ಷರುಗಳು ಎಂದಾದರೂ ಮಾತನಾಡಿದ್ದಾರಾ? ಬಿಜೆಪಿಯವರು ಎಲ್ಲಾ ವಿಚಾರದಲ್ಲೂ ಟೀಕೆಗಳನ್ನು ಮಾಡಿಕೊಂಡು ಇದ್ದಾರೆ. ಅವರ ಟೀಕೆಗಳೆಲ್ಲಾ ಸಾಯುತ್ತವೆ, ನಮ್ಮ ಕೆಲಸಗಳು ಮಾತ್ರ ಉಳಿಯುತ್ತವೆ. ನೀವೆಲ್ಲರೂ ನಮ್ಮ ಸರ್ಕಾರದ ಹೆಬ್ಬೆಟ್ಟು. ಮುಂಬೈ, ದೆಹಲಿ ಸೇರಿದಂತೆ ಅನೇಕ ನಗರಗಳಲ್ಲಿ ಖಾಸಗೀಕರಣ ಮಾಡಲಾಗಿದೆ. ನೂರಾರು ವರ್ಷಗಳಿಂದ ವಿದ್ಯುತ್ ಲೈನ್ ಎಳೆದವರು ನೀವು, ಬೆಂಬಲ ಕೊಟ್ಟಿದ್ದು ಸರ್ಕಾರ. ಈಗ ಖಾಸಗಿ ಕಂಪನಿಯವರು ದುಡ್ಡು ಮಾಡಲು, ಸಂಪರ್ಕ ನೀಡುವ ಅಧಿಕಾರ ಅವರಿಗೆ ನೀಡಬೇಕಂತೆ” ಎಂದರು.

ನೀವು ನಮ್ಮನ್ನು ಕಾಳಜಿ ಮಾಡಿದರೆ, ನಾವು ನಿಮ್ಮನ್ನು ಕಾಳಜಿ ಮಾಡುತ್ತೇವೆ

“ನೀವು ಡಿಕೆ, ಡಿಕೆ ಎಂದು ಕೂಗಿದಾಕ್ಷಣ ನಾನು ಹಿಗ್ಗುವುದಿಲ್ಲ, ಜಗ್ಗುವುದಿಲ್ಲ. ನಮ್ಮದು ಏನಿದ್ದರೂ ಗೀವ್ ಅಂಡ್ ಟೇಕ್ (ಕೊಡು, ಕೊಳ್ಳುವ), ಶೇರಿಂಗ್ ಅಂಡ್ ಕೇರಿಂಗ್ ಪದ್ಧತಿ. ನೀವು ನಮಗೆ ಕಾಳಜಿ ತೋರಬೇಕು, ನಾವು ನಿಮಗೆ ಕಾಳಜಿ ತೋರಬೇಕು. ಈ ಒಪ್ಪಂದಕ್ಕೆ ನೀವು ಬದ್ಧರಾಗಿರುತ್ತೀರಾ? 2028ರಲ್ಲಿ ನಿಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು ತಾನೆ? ನುಡಿದಂತೆ ನಡೆಯಬೇಕು, ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಈಗಾಗಲೇ ನಮ್ಮ ಸಚಿವರಾದ ಜಾರ್ಜ್ ಅವರು ಎಲ್ಲಾ ಎಸ್ಕಾಂ ಅಧ್ಯಕ್ಷರುಗಳು ಡಿ.ಕೆ. ಶಿವಕುಮಾರ್ ಕಾಲದಲ್ಲಿ ಯಾವುದೇ ಕಾರಣಕ್ಕೂ ಖಾಸಗೀಕರಣ ಆಗಬಾರದು ಎಂದು ನನಗೆ ಕಿವಿಯಲ್ಲಿ ಹೇಳಿದ್ದಾರೆ. ಈ ವಿಚಾರದಲ್ಲಿ ನನ್ನ ಅಭಿಪ್ರಾಯ ನಾನು ಈಗಾಗಲೇ ಹೇಳಿದ್ದು, ಈ ವಿಚಾರವನ್ನು ನಾನೊಬ್ಬನೇ ತೀರ್ಮಾನ ಮಾಡುವುದಿಲ್ಲ. ನಿಮ್ಮ ಅಭಿಪ್ರಾಯವೇ ನನ್ನ ಅಭಿಪ್ರಾಯ. ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುತ್ತೇನೆ” ಎಂದು ವಾಗ್ದಾನ ನೀಡಿದರು.

“ನಂಬಿಕೆ ಮನುಷ್ಯನ ಶ್ರೇಷ್ಠ ಗುಣ. ನಿಮ್ಮ ಮೇಲೆ ನಂಬಿಕೆ ಇಟ್ಟು ನಾನು ಮುಂದಿನ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡುತ್ತೇನೆ. ನೀವು ಮೋಸ ಮಾಡಿದರೆ ನಾನು ವಾಜಪೇಯಿ ಅವರ ಸರ್ಕಾರದ ತೀರ್ಮಾನದ ಕಡೆ ಮುಖ ಮಾಡುತ್ತೇನೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ. ನಮ್ಮ ನಿಮ್ಮ ಸಂಬಂಧ ಗಟ್ಟಿಯಾಗಿರಬೇಕು” ಎಂದರು.

ಬೇರೆಯವರಂತೆ ಇಂಜಿನಿಯರ್ ಗಳಿಂದ ಪೆನ್ಸಿಲ್ ನಲ್ಲಿ ಬರೆಸಿ, ತಿದ್ದುವ ಕೆಲಸ ಮಾಡಿಲ್ಲ

“ಇಂಧನ ಇಲಾಖೆಯಲ್ಲಿ ಈ ಹಿಂದೆಯೂ ಕ್ರಾಂತಿಕಾರಿ ಬದಲಾವಣೆ ತಂದಿದ್ದೇವೆ, ಈಗಲೂ ಜಾರ್ಜ್ ಅವರ ನೇತೃತ್ವದಲ್ಲಿ ಅನೇಕ ಯೋಜನೆ ತೀರ್ಮಾನ ಮಾಡಿದ್ದಾರೆ. ಈ ಮಧ್ಯೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಇಂಧನ ಉತ್ಪಾದನೆ ಹೆಚ್ಚಿಸಲು ಯಾವುದಾದರೂ ಯೋಜನೆ ತರಲಾಯಿತೇ? ಇಲಾಖೆಗೆ ಹೊಸ ಭವನ ಕಟ್ಟಿದರೇ? ಕಳೆದ ನಮ್ಮ ಸರ್ಕಾರದ ವೇಳೆ ಇಂಧನ ಭವನ ಕಟ್ಟಲಾಯಿತು. ರೇಸ್ ಕೋರ್ಸ್ ರಸ್ತೆ ಬಳಿ ಖಾಲಿ ಜಾಗದಲ್ಲಿ ಇಂಧನ ಭವನ ನಿರ್ಮಿಸಿ ಸಾಕ್ಷಿಗುಡ್ಡೆ ನಿರ್ಮಿಸಿದ್ದೇವೆ. ಕ್ರೆಡೆಲ್ ಕಟ್ಟಡ ನೋಡಿದ್ದೀರಾ? ನಾವು ಅವಕಾಶ ಸಿಕ್ಕಾಗೆಲ್ಲಾ ಸಾಕ್ಷಿಗುಡ್ಡೆ ನೀಡಿದ್ದೇವೆ” ಎಂದು ಹೇಳಿದರು.

“7 ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡಲಾಗುತ್ತಿತ್ತು. ನಾನು ಅದನ್ನು ಐದು ವರ್ಷಕ್ಕೆ ಇಳಿಸಿದೆ. ನಾನು ಒಂದೇ ಬಾರಿಗೆ ಎಷ್ಟು ಪರ್ಸೆಂಟ್ ವೇತನ ಹೆಚ್ಚಿಸಿದೆ? ನೀವು ಅದನ್ನು ನೆನಪಿಟ್ಟುಕೊಂಡಿದ್ದೀರೋ.. ಮರೆತಿದ್ದಿರೋ? ನಮ್ಮ ತೀರ್ಮಾನ ನಿಮ್ಮ ಬದುಕಿಗೆ ಅನುಕೂಲವಾಯಿತಲ್ಲವೇ? ನಾನು ಯಾವತ್ತೂ ಇಂಜಿನಿಯರ್ ಗಳಿಂದ ಪೆನ್ಸಿಲ್ ನಲ್ಲಿ ಬರೆಸಿ, ನಂತರ ಅದನ್ನು ತಿದ್ದುವ ಕೆಲಸ ಮಾಡಿಲ್ಲ. ನಾನು ಒಬ್ಬರಿಂದ ಒಂದು ರೂಪಾಯಿ ಲಂಚ ಪಡೆಯದೇ 25 ಸಾವಿರ ಜನರನ್ನು ಇಲಾಖೆಯಲ್ಲಿ ನೇಮಕ ಮಾಡಿದೆ. ಇದನ್ನು ನೀವು ಸ್ಮರಿಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.

ಇಂಧನ ಇಲಾಖೆ ಸಿಬ್ಬಂದಿ ಕತ್ತಲನ್ನು ದೂರ ಮಾಡುವ ಕಾಯಕ ಜೀವಿಗಳು

“ದೀಪ ಉರಿಯುವಾಗ ಅದರ ಬೆಳಕು ಕಾಣುತ್ತದೆ. ಅದರ ಹಿಂದೆ ಇರುವ ಬತ್ತಿ ಹಾಗೂ ಎಣ್ಣೆ ಯಾರಿಗೂ ಕಾಣುವುದಿಲ್ಲ. ನೀವೆಲ್ಲರೂ ಕತ್ತಲನ್ನು ದೂರ ಮಾಡುವ ಕಾಯಕ ಜೀವಿಗಳು. ಹಗಲು ರಾತ್ರಿ ಎನ್ನದೇ ನೀವು ಶ್ರಮಿಸುತ್ತಿದ್ದೀರಿ. ಜನರು ತಮ್ಮ ಶಾಸಕರ ದೂರವಾಣಿ ಸಂಪರ್ಕ ಹೊಂದಿರುತ್ತಾರೋ ಇಲ್ಲವೋ ಆದರೆ ಪವರ್ ಮ್ಯಾನ್ ಹಾಗೂ ಇಂಜಿನಿಯರ್ ಗಳ ದೂರವಾಣಿ ಸಂಪರ್ಕ ಇಟ್ಟುಕೊಂಡೇ ಇರುತ್ತಾರೆ. ನಿಮಗೆ ಸರ್ಕಾರವನ್ನು ಅಧಿಕಾರಕ್ಕೆ ತರುವ ಹಾಗೂ ಸರ್ಕಾರವನ್ನು ಅಧಿಕಾರದಿಂದ ತೆಗೆಯುವ ಸಾಮರ್ಥ್ಯವಿದೆ ಎಂದು ನನಗೆ ಅರಿವಿದೆ” ಎಂದರು.

“ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ನಾನು ಇಂಧನ ಇಲಾಖೆ ಜವಾಬ್ದಾರಿ ತೆಗೆದುಕೊಂಡಾಗ ಈ ಇಲಾಖೆ ಹೇಗಿತ್ತು, ಈಗ ಹೇಗಾಗಿದೆ ಎಂದು ನೀವು ನೋಡಬಹುದು. ನಾನು ಈ ಜವಾಬ್ದಾರಿ ತೆಗೆದುಕೊಳ್ಳುವಾಗ ಅನೇಕರು ನನಗೆ ಈ ಖಾತೆ ಬೇಡ, ಕೆಟ್ಟ ಹೆಸರು ಬರುತ್ತದೆ ಎಂದು ಸಲಹೆ ನೀಡಿದ್ದರು. ನನಗೆ ಇತಿಹಾಸ ಓದುವುದು, ಸ್ಮರಿಸುವುದರಲ್ಲಿ ನಂಬಿಕೆ ಇಲ್ಲ. ಇತಿಹಾಸ ಸೃಷ್ಟಿಸುವುದರಲ್ಲಿ ಹೆಚ್ಚು ನಂಬಿಕೆ. ಇದನ್ನು ಗಮನದಲ್ಲಿಟ್ಟುಕೊಂಡು ನಾನು ಕೆಲಸ ಮಾಡಿದೆ. ಇಂದು ಕರ್ನಾಟಕದಲ್ಲಿ ನಾನು ಕೈಗೊಂಡಿರುವ ತೀರ್ಮಾನ ದೇಶಕ್ಕೆ ಮಾದರಿಯಾಗಿರುವ ತೀರ್ಮಾನ. ನಾನು ಇಲಾಖೆ ಜವಾಬ್ದಾರಿ ಪಡೆದಾಗ 19% ನಷ್ಟು ಇಂಧನ ಸೋರಿಕೆ ವರ್ಗಾವಣೆ ವೇಳೆ ಆಗುತ್ತಿತ್ತು. ಈಗ ಅದು 10%ಗೆ ಇಳಿಸಲಾಗಿದೆ” ಎಂದು ವಿವರಿಸಿದರು.

ನನ್ನ ತೀರ್ಮಾನವನ್ನು ದೇಶವೇ ಅನುಸರಿಸಿತ್ತು

“13 ಸಾವಿರ ಎಕರೆ ಜಮೀನನ್ನು ಒಂದೇ ಜಾಗದಲ್ಲಿ ಒಂದು ಎಕರೆ ಭೂಸ್ವಾಧೀನ ಮಾಡದೇ, 2,400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿರುವ ಸೋಲಾರ್ ಪಾರ್ಕ್ ಅಂದಿನ ದಿನಗಳಲ್ಲಿ ದೇಶದಲ್ಲೇ ದೊಡ್ಡ ಇತಿಹಾಸವಾಗಿತ್ತು. ಇಂದು ಅನೇಕ ರಾಜ್ಯ ಹಾಗೂ ದೇಶಗಳಲ್ಲಿ ಇದನ್ನು ಅನುಸರಿಸಿರಬಹುದು. ನಂತರ ಪ್ರತಿ ತಾಲ್ಲೂಕಿನಲ್ಲಿ 20-50 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಗೆ ಟೆಂಡರ್ ಕರೆದು ಅಲ್ಲೇ ವಿದ್ಯುತ್ ಉತ್ಪಾದನೆ ಮಾಡಿ ರೈತರಿಗೆ ನೀಡಲಾಗುತ್ತಿದೆ. ಆಮೂಲಕ ವರ್ಗಾವಣೆ ವೇಳೆ ಇಂಧನ ಸೋರಿಕೆ ತಡೆಯಲಾಗಿದೆ. ಇದನ್ನು ಗಮನಿಸಿ ಕೇಂದ್ರ ಸರ್ಕಾರದವರು ಇಂದು ಕುಸುಮ್ ಯೋಜನೆ ಜಾರಿಗೆ ತಂದಿದ್ದಾರೆ” ಎಂದರು.

“ಗಡಿಯಲ್ಲಿ ಸೈನಿಕರು, ಶಾಲೆಯಲ್ಲಿ ಶಿಕ್ಷರು, ಕಾರ್ಖಾನೆಯಲ್ಲಿ ಕಾರ್ಮಿಕ, ಹೊಲದಲ್ಲಿ ಕೃಷಿಕನಿರುತ್ತಾನೆ. ಇವರೆಲ್ಲರಿಗೂ ಬೆಳಕು ನೀಡುತ್ತಿರುವ ಧೀಮಂತ ಸಿಬ್ಬಂದಿ ನೀವು. ನಿಮ್ಮ ಸೇವೆಯನ್ನು ಎಲ್ಲರೂ ಸ್ಮರಿಸುತ್ತಾರೆ. ಇಂದಿರಾ ಗಾಂಧಿ ಅವರ ಕಾಲದಲ್ಲಿ ನಿಮ್ಮ ಸಂಸ್ಥೆಗಳಿಗೆ ಹೊಸ ರೂಪ ನೀಡಲಾಯಿತು. ನಿಮ್ಮ ಆಡಳಿತ ವ್ಯವಸ್ಥೆ ಪ್ರತಿನಿಧಿ ನಮ್ಮ ಸರ್ಕಾರದ ಜೊತೆಯಲ್ಲಿ ಇರಬೇಕು ಎಂದು ತೀರ್ಮಾನ ಮಾಡಿದವರು ಶ್ರೀಮತಿ ಇಂದಿರಾ ಗಾಂಧಿ ಎಂಬುದನ್ನು ಮರೆಯಬಾರದು. ನಾವು ನಮ್ಮ ಮೂಲ ಮರೆತರೆ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ನಿಮ್ಮ ಇಲಾಖೆಯ ಸಿಬ್ಬಂದಿ ಧ್ವನಿಯನ್ನು ವ್ಯವಸ್ಥೆಯಲ್ಲಿ, ಇಲಾಖೆಯ ಮಂಡಳಿಯಲ್ಲಿ ಪ್ರಸ್ತಾಪಿಸುವ ಶಕ್ತಿ ಕೊಟ್ಟಿದ್ದು ಇಂದಿರಾ ಗಾಂಧಿಯವರು” ಎಂದು ತಿಳಿಸಿದರು.

Related Articles

Back to top button