Karnataka NewsLatestPolitics

*ಬಡ ಮಕ್ಕಳ ಜೀವದ ಜೊತೆ ಆಟವಾಡುವುದನ್ನು ನಿಲ್ಲಿಸಿ; ಮೊದಲು ಕಲ್ಯಾಣ ಕರ್ನಾಟಕದ ಶಾಲೆಗಳ ದುಸ್ಥಿತಿ ಸರಿಪಡಿಸಿ: ಪ್ರಿಯಾಂಕ್ ಖರ್ಗೆಗೆ ಆರ್.ಅಶೋಕ್ ಆಗ್ರಹ*


ಪ್ರಗತಿವಾಹಿನಿ ಸುದ್ದಿ: ಕಲಬುರಗಿ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಕಲ್ಯಾಣ ಕರ್ನಾಟಕದ ಶಾಲೆಗಳ ದುರಸ್ತಿ ಬಗ್ಗೆ ಮುಖ್ಯಮಂತ್ರಿಗಳಿಗೆ ಯಾವಾಗ ಪತ್ರ ಬರೆಯುತ್ತೀರಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ತಾವು ಮತ್ತು ತಮ್ಮ ಕುಟುಂಬ ಕಲ್ಯಾಣ ಕರ್ನಾಟಕದ ಜನತೆಯ ಮತ ಪಡೆದು ದಶಕಗಳಿಂದ ಅಧಿಕಾರ ಅನುಭವಿಸುತ್ತಿದ್ದೀರಿ. ಆದರೆ ಕಲ್ಯಾಣ ಕರ್ನಾಟಕ ಮಾತ್ರ ಇನ್ನೂ ನಿಜಾಮರ ಆಡಳಿತದಲ್ಲಿಯೇ ಇದೆಯೇನೋ ಅನ್ನುವಷ್ಟು ಕೆಟ್ಟ ಪರಿಸ್ಥಿತಿಯಲ್ಲಿದೆ ಸ್ವಾಮಿ! ಕೆಲಸದಲ್ಲಿ ಜೀರೋ, ವಿವಾದದಲ್ಲಿ ಹೀರೋ ಎನ್ನುವಂತಾಗಿದೆ ನಿಮ್ಮ ಪರಿಸ್ಥಿತಿ ಎಂದು ವಾಗ್ದಾಳಿ ನಡೆಸಿದ್ದಾರೆ.

Home add -Advt

ಪತ್ರಿಕಾ ವರದಿಯನ್ನು ಒಮ್ಮೆ ಕಣ್ಣು ಬಿಟ್ಟು ನೋಡಿ! ನಿಮ್ಮದೇ ಉಸ್ತುವಾರಿ ಜಿಲ್ಲೆಗಳನ್ನೊಳಗೊಂಡ ಕಲ್ಯಾಣ ಕರ್ನಾಟಕದ ಶಾಲಾ ಕೊಠಡಿಗಳ ದುಸ್ಥಿತಿ ಬಿಚ್ಚಿಡುತ್ತಿದೆ.

18,022 ಶಾಲಾ ಕೊಠಡಿಗಳು: ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ದುರಸ್ತಿಗೆ ಕಾಯುತ್ತಿವೆ.
ಇದರಲ್ಲಿ ಬರೋಬ್ಬರಿ 8,006 ಕೊಠಡಿಗಳು ಸಂಪೂರ್ಣ ಜೀರ್ಣಾವಸ್ಥೆಯಲ್ಲಿದ್ದು, ಕಲಿಯಲು ಯೋಗ್ಯವೇ ಅಲ್ಲ ಎಂದು ಇಲಾಖೆಯೇ ಕೈಚೆಲ್ಲಿದೆ.
ಸಿಮೆಂಟ್ ಉದುರಿದ ತಾರಸಿ, ಬಿರುಕು ಬಿಟ್ಟ ಗೋಡೆಗಳ ನಡುವೆ ಬಡವರ ಮಕ್ಕಳು ಪ್ರಾಣ ಕೈಯಲ್ಲಿ ಹಿಡಿದು ಅಕ್ಷರ ಕಲಿಯಬೇಕಾದ ದುರ್ಗತಿ ಬಂದಿದೆ.

ಮಾಧ್ಯಮಗಳ ಮುಂದೆ ದಿನವಿಡೀ ಭಾಷಣ ಬಿಗಿಯುವ, ಅನಗತ್ಯ ವಿವಾದ ಸೃಷ್ಟಿಸುವ ನಿಮಗಾಗಲಿ, ಪೂರ್ಣಾವಧಿ ಶಿಕ್ಷಣ ಸಚಿವರೇ ಇಲ್ಲದ ನಿಮ್ಮ ನಾಲಾಯಕ್ @INCKarnataka ಸರ್ಕಾರಕ್ಕಾಗಲಿ ನಮ್ಮ ಕಲ್ಯಾಣ ಕರ್ನಾಟಕದ ಬಡ ಮಕ್ಕಳ ಭವಿಷ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲವೇ?

ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ತಾವು ತೋರುವ ಸೈದ್ಧಾಂತಿಕ ಬದ್ಧತೆ, ನಿಷ್ಠೆಯನ್ನು, ನಿಮಗೆ ಮತ ನೀಡಿ ಗೆಲ್ಲಿಸಿ, ಅಧಿಕಾರ ಕೊಟ್ಟಿರುವ ಕಲ್ಯಾಣ ಕರ್ನಾಟಕದ ಜನತೆಗೂ, ಅಲ್ಲಿನ ಶಾಲೆಗಳ ಅಭಿವೃದ್ಧಿಗೂ ಸ್ವಲ್ಪ ತೋರಿಸಿ ಸ್ವಾಮಿ.

ಕಲ್ಯಾಣ ಕರ್ನಾಟಕದ ಜನತೆಗೆ ನೀಡಬೇಕಾದ ಕನಿಷ್ಠ ಮೂಲಸೌಕರ್ಯದ ಕರ್ತವ್ಯದಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದೀರಿ. ಬಡ ಮಕ್ಕಳ ಜೀವದ ಜೊತೆ ಆಟವಾಡುವುದನ್ನು ನಿಲ್ಲಿಸಿ, ಮೊದಲು ಆ ಶಾಲೆಗಳನ್ನು ಸರಿಪಡಿಸಿ ಎಂದು ಆಗ್ರಹಿಸಿದ್ದಾರೆ.

Related Articles

Back to top button