Belagavi NewsBelgaum NewsPolitics

*ಬೆಳಗಾವಿ ಪಾಲಿಕೆಯ ಇಬ್ಬರು ನಗರ ಸೇವಕರ ಸದಸತ್ವ ರದ್ದು ಪಡಿಸಿ ಆದೇಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಮಹಾನಗರ ಪಾಲಿಕೆಯ ತಿನಿಸು ಕಟ್ಟೆ ಮಳಿಗೆಗಳನ್ನು ತಮ್ಮ ಪತ್ನಿ ಹೆಸರಿನಲ್ಲಿ ಪಡೆದ ಪ್ರಕರಣದಡಿ ಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತರು ಸೋಮವಾರ ಮಹತ್ವದ ಆದೇಶ ಹೊರಡಿಸಿದ್ದಾರೆ.

ವಾರ್ಡ್ ನಂ.23ರ ಜಯಂತ ಜಾಧವ ಹಾಗೂ ವಾರ್ಡ್‌ ನಂ. 41ರ ಸದಸ್ಯ ಮಂಗೇಶ ಪವಾರ ಅವರ ಪಾಲಿಕೆ ಸದಸ್ಯತ್ವ ಅನರ್ಹಗೊಳಿಸಿ ಪ್ರಾದೇಶಿಕ ಆಯುಕ್ತ ಎಸ್.ಬಿ. ಶೆಟ್ಟೆಣ್ಣವರ ಆದೇಶಿಸಿದ್ದಾರೆ.

ತಿನಿಸು ಕಟ್ಟೆಗಳ ಹರಾಜಿನಲ್ಲಿ ಸದಸ್ಯ ಜಯಂತ ಜಾಧವ ಅವರು ತಮ್ಮ ಪತ್ನಿ ಸೋನಾಲಿ ಜಾಧವ ಹಾಗೂ ಮಂಗೇಶ ಪವಾರ ಅವರು ತಮ್ಮ ಪತ್ನಿ ನೀತಾ ಪವಾರ ಅವರ ಹೆಸರಿನಲ್ಲಿ ಮಳಿಗೆಗಳನ್ನು ಬಾಡಿಗೆ ಪಡೆದಿದ್ದರು. ಪಾಲಿಕೆ ಸದಸ್ಯರಾಗುವ ಮುನ್ನವೇ ಅವರು ಬಾಡಿಗೆ ಪಡೆದುಕೊಂಡಿದ್ದರು. ಸದಸ್ಯರಾಗಿ ಆಯ್ಕೆಯಾದ ಬಳಿಕವೂ ಅದನ್ನು ವಾಪಸ್ಸು ನೀಡಿರಲಿಲ್ಲ.

ಹಾಗಾಗಿ, ಚುನಾಯಿತ ಸದಸ್ಯರಾಗಿದ್ದರೂ ಪಾಲಿಕೆಯಿಂದ ಲಾಭ ಪಡೆಯುತ್ತಿದ್ದಾರೆ. ಈ ಇಬ್ಬರ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸುಜೀತ ಮುಳಗುಂದ 2023ರ 9 ನವೆಂಬರ್ ನಲ್ಲಿ ದೂರು ನೀಡಿದ್ದರು. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಪ್ರಾದೇಶಿಕ ಆಯುಕ್ತರು ಜಯಂತ ಜಾಧವ ಹಾಗೂ ಮಂಗೇಶ ಪವಾರ ಅವರ ಸದಸ್ಯತ್ವ ರದ್ದುಪಡಿಸಿದ್ದಾರೆ.

ನಗರಸೇವಕರಾಗಿ ಚುನಾಯಿತರಾದ ನಂತರ ಹರಾಜಿನಲ್ಲಿ ಪಡೆಯಲಾದ ಮಳಿಗೆಗಳನ್ನು ಮಹಾನಗರ ಪಾಲಿಕೆಗೆ ಅವರು ಬಿಟ್ಟುಕೊಡಬೇಕಾಗಿತ್ತು. ಆದರೆ ಅವರು ಹಾಗೆ ಮಾಡದೇ ಆ ಮಳಿಗೆಗಳನ್ನು ತಮ್ಮ ಕುಟುಂಬದ ಸದಸ್ಯರ ಬಳಿಯೇ ಉಳಿಸಿಕೊಂಡಿರುತ್ತಾರೆ. ಇದರಿಂದ ಇಬ್ಬರೂ ಕೌನ್ಸಿಲರ್‌ಗಳು ಪರೋಕ್ಷವಾಗಿ ಮಹಾನಗರ ಪಾಲಿಕೆಯಿಂದ ಲಾಭ ಪಡೆಯುತ್ತಿದ್ದಾರೆ. ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ-1976 ಕಲಂ ಅಡಿಯಲ್ಲಿ ಇಬ್ಬರೂ ನಗರಸೇವಕರ ವಿರುದ್ಧ ಪ್ರಾದೇಶಿಕ ಆಯುಕ್ತರು ಕ್ರಮ ತೆಗೆದುಕೊಂಡಿದ್ದಾರೆ.

ಮಾಧ್ಯಮಗಳ ಜೊತೆಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳುಗುಂದ, 1976 1ಕೆ ಮತ್ತು ಸಿ ಪ್ರಕಾರ ಮಳಿಗೆಗಳನ್ನು ಬಿಟ್ಟು ಕೊಡಬೇಕಿತ್ತು. ಬಡ ಜನರಿಗೆ ಸಿಗಬೇಕಾದ ಮಳಿಗೆಗಳನ್ನು ತಾವು ತೆಗೆದಕೊಂಡಿದ್ದರು. ಹಾಗಾಗಿ, ನಾನು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದೆ. ಅವರು ಜಿಲ್ಲಾಧಿಕಾರಿ ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ವರದಿ‌ ಕೊಡುವಂತೆ ತಿಳಿಸಿದ್ದರು. ಆ ವರದಿಯಲ್ಲಿ ಅವರು ತಪ್ಪು ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆ ನಿಟ್ಟಿನಲ್ಲಿ ಪ್ರಾದೇಶಿಕ ಆಯುಕ್ತರು ಇಬ್ಬರ ಸದಸ್ಯತ್ವ ರದ್ದುಪಡಿಸಿದ್ದಾರೆ. ಈ ಮೂಲಕ ಬೆಳಗಾವಿಯ ನಿರ್ಗತಿಕರು, ಬಡವರು, ಮಹಿಳೆಯರಿಗೆ ನ್ಯಾಯ ಸಿಕ್ಕಂತೆ ಆಗಿದೆ. ಇದನ್ನು ಇಷ್ಟಕ್ಕೆ ನಿಲ್ಲಿಸುವುದಿಲ್ಲ. ಇಬ್ಬರೂ ನಗರಸೇವಕರು ಪಡೆದುಕೊಂಡ ಸೌಲಭ್ಯಗಳನ್ನು ಮರುಕಳಿಸುವವರೆಗೂ ಹೋರಾಟ ಮುಂದುವರಿಸುತ್ತೇನೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button