Kannada NewsKarnataka NewsLatest

*ಬ್ರೈನ್ ಡೆಡ್ ವ್ಯಕ್ತಿಯ ಅಂಗಾಂಗ ದಾನ*: *ಆರು ಮಂದಿಗೆ ಹೊಸ ಬದುಕಿನ ಆಶಾಕಿರಣ*

ಪ್ರಗತಿವಾಹಿನಿ ಸುದ್ದಿ: ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬವೊಂದು ಆರು ಜನರ ಬದುಕಿಗೆ ಬೆಳಕಾಗಿದೆ. ದಾವಣಗೆರೆಯ ಆಂಜನೇಯ ಬಡಾವಣೆ ನಿವಾಸಿ ನರೇಶ್ ಎಚ್.ವಿ. (48) ಅವರ ಕುಟುಂಬ ದುಃಖದ ನಡುವೆಯೂ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದೆ. ಇದರಿಂದ ಅಂಗಾಂಗ ಕಸಿಗಾಗಿ ಕಾಯುತ್ತಿದ್ದ ರೋಗಿಗಳಿಗೆ ಹೊಸ ಬದುಕಿನ ಭರವಸೆ ಸಿಕ್ಕಂತಾಗಿದೆ.

ಮೂಲತಃ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ರಾಗಿಮಸಲವಾಡ ಗ್ರಾಮದ ನರೇಶ್ ಸಕ್ಕರೆ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದರು. ಪತ್ನಿ ಮತ್ತು 12 ವರ್ಷದ ಪುತ್ರನನ್ನು ಹೊಂದಿದ್ದ ನರೇಶ್‌ಗೆ ಮೊದಲು ಪಾರ್ಶ್ವವಾಯು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕ ಚೇತರಿಕೆ ಕಂಡಿದ್ದರಿಂದ ಕುಟುಂಬದವರು ಮನೆಗೆ ಕರೆತಂದಿದ್ದರು.

ಆದರೆ, ಅಕ್ಟೋಬರ್ 23ರಂದು ಮತ್ತೆ ಪಾರ್ಶ್ವವಾಯು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನರೇಶ್ ಅವರನ್ನು ಪುನಃ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಿದುಳಿನ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿದ ಪರಿಣಾಮ ಮಿದುಳು ನಿಷ್ಕ್ರಿಯಗೊಂಡು ಬ್ರೈನ್ ಡೆಡ್ ಸ್ಥಿತಿ ತಲುಪಿದ್ದರು. ವೈದ್ಯರು ಈ ಬಗ್ಗೆ ತಿಳಿಸಿದ ಬಳಿಕ ಕುಟುಂಬದವರು ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದರು.

ನರೇಶ್ ಅವರ ಎರಡು ಮೂತ್ರಪಿಂಡಗಳನ್ನು ಬೆಂಗಳೂರಿನ ಐಸಿಯು ಆಸ್ಪತ್ರೆಗೆ, ಲಿವರ್‌ ಅನ್ನು ಆಸ್ಟರ್ ಆಸ್ಪತ್ರೆಗೆ, ಹೃದಯವನ್ನು ಆಸ್ಟರ್ ಸಿಎಂಐ ಆಸ್ಪತ್ರೆಗೆ ಹಾಗೂ ಕಣ್ಣುಗಳನ್ನು ಮಿಂಟೋ ಆಸ್ಪತ್ರೆಗೆ ದಾನ ಮಾಡಲಾಗಿದೆ. ಈ ಅಂಗಾಂಗಗಳು ಕಸಿ ಅಗತ್ಯವಿರುವ ರೋಗಿಗಳಿಗೆ ನೆರವಾಗಲಿವೆ. ಈ ಮೂಲಕ ದುಃಖದ ಸಂದರ್ಭದಲ್ಲಿಯೂ ಕುಟುಂಬ ಮಾನವೀಯ ನಿರ್ಧಾರ ಕೈಗೊಂಡಿದೆ.

ರಾಜ್ಯದಲ್ಲಿ ಅಂಗಾಂಗ ದಾನದ ಕುರಿತು ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಬೇಕೆಂಬ ಚರ್ಚೆಗಳ ನಡುವೆಯೇ ನರೇಶ್ ಕುಟುಂಬದ ನಿರ್ಧಾರ ಗಮನ ಸೆಳೆದಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡ ನೋವಿನಲ್ಲೂ ಅಂಗಾಂಗ ದಾನಕ್ಕೆ ಮುಂದಾಗಿರುವ ಕುಟುಂಬ, ಇತರರಿಗೆ ಬದುಕುವ ಅವಕಾಶ ಕಲ್ಪಿಸಿದೆ. ಈ ನಿರ್ಧಾರ ಅಂಗಾಂಗ ದಾನದ ಮಹತ್ವವನ್ನು ಮತ್ತೊಮ್ಮೆ ಸಾರಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button