*ಬೆಳಗಾವಿ ಅಭಿವೃದ್ಧಿಗೆ ಸಂಘಟಿತ ಹೋರಾಟ : ವಾಣಿಜ್ಯೋದ್ಯಮ ಸಂಘ ನಿರ್ಧಾರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯ ಸಮಗ್ರ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಎಲ್ಲ ಸಂಘಟನೆಗಳು ಹಾಗೂ ನಾಗರಿಕರೊಂದಿಗೆ ಸಂಘಟಿತ ಹೋರಾಟ ನಡೆಸಲು ವಾಣಿಜ್ಯೋದ್ಯಮ ಸಂಘ ನಿರ್ಧರಿಸಿದೆ.
ಸೋಮವಾರ ಧ್ವಜಾರೋಹಣ ಕಾರ್ಯಕ್ರಮದ ನಂತರ ಚೆಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಸಭಾಭವನದಲ್ಲಿ ನಡೆದ ಉದ್ಯಮಿಗಳ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು.
ಬೆಳಗಾವಿಯಲ್ಲಿ ಅಭಿವೃದ್ಧಿ ವೇಗ ಪಡೆಯುತ್ತಿಲ್ಲ. ಯಾವುದೇ ಕೆಲಸ ಮುಂದೆ ಹೋಗುವುದಿಲ್ಲ. ಸಮಸ್ಯೆಗಳು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಇಂಡಸ್ಟ್ರಿ ಆರಂಭಿಸಬೇಕೆಂದರೆ ಜಾಗವೂ ಇಲ್ಲ, ಮೂಲಭೂತ ಸೌಲಭ್ಯಗಳೂ ಇಲ್ಲ. ಹಾಗಾಗಿ ಜಿಲ್ಲೆಯ ಇಬ್ಬರು ಸಚಿವರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳನ್ನು ಒಂದೇ ವೇದಿಕೆಗೆ ಕರೆತರುವ ಪ್ರಯತ್ನ ಮಾಡಬೇಕು. ಜೊತೆಗೆ ಆಗಬೇಕಿರುವ ಕೆಲಸಗಳ ಕುರಿತು ಗಮನ ಸೆಳೆಯಲು ಶೀಘ್ರದಲ್ಲಿ ರ್ಯಾಲಿಯೊಂದನ್ನು ಆಯೋಜಿಸಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳಲಾಯಿತು.
ವಿಕಾಸ ಕಲಘಟಗಿ, ಶಶಿ ಚಂದಗಡಕರ್, ಬಸವರಾಜ ಜವಳಿ. ರೋಹನ್ ಜುವಳಿ, ಸುಧೀರ ಕಾರ್ಲೆಕರ್, ಸಂದೀಪ್ ಬಾಗೇವಾಡಿ, ವೈಭವ ವೆರ್ಣೇಕರ್, ಸಾಗರ್ ಮೊದಲಾದವರು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು.
ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ ಮಾತನಾಡಿ, ಈಗಾಗಲೆ ಒಂದು ಬಾರಿ ಮಂತ್ರಿಗಳು ಸೇರಿದಂತೆ ಎಲ್ಲ ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ಇನ್ನೊಮ್ಮೆ ಎಲ್ಲರನ್ನೂ ಕರೆಸಲಾಗುವುದು. ಇಂಡಸ್ಟ್ರಿಯಲ್ ಕಾರಿಡಾರ್, ಮೂಲಭೂತ ಸೌಲಭ್ಯ ಹಾಗೂ ಜಾಗದ ಕೊರತೆ ಸೇರಿದಂತೆ ಎಲ್ಲ ಬೇಡಿಕೆಗಳ ಕುರಿತು ಗಮನ ಸೆಳೆಯಲಾಗುವುದು. ಆದಷ್ಟು ಬೇಗ ಬೃಹತ್ ರ್ಯಾಲಿಯೊಂದನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಕಾರ್ಯದರ್ಶಿ ಸತೀಶ್ ಕುಲಕರ್ಣಿ ಸ್ವಾಗತಿಸಿದರು. ಉಪಾಧ್ಯಕ್ಷ ಉದಯ ಜೋಶಿ, ಖಜಾಂಚಿ ಸಂಜಯ ಪೋತದಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ಉಪಾಧ್ಯಕ್ಷ ಸ್ವಪ್ನಿಲ್ ಶಹ ವಂದಿಸಿದರು.



