ಮಠ ಮಾನ್ಯಗಳನ್ನು ಬೆಳೆಸುವಂಥ ಸಂಸ್ಕೃತಿ ನಮ್ಮ ದೇಶದ್ದು -ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಠ ಮಾನ್ಯಗಳನ್ನು ಬೆಳೆಸುವಂಥ ಸಂಸ್ಕೃತಿ ನಮ್ಮ ದೇಶದ್ದು. ಮಠಗಳನ್ನು ಬೆಳೆಸಿದರೆ ನಾವು ಉಳಿಯುತ್ತೇವೆ ಎನ್ನುವ ಸತ್ಯಾಂಶ ನನಗೆ ಗೊತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಭಾನುವಾರ ನಗರದ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖಾ ಮಠದಲ್ಲಿ ಜರುಗುವ 68ನೇ ಮಾಸಿಕ ಸುವಿಚಾರ ಚಿಂತನೆಯ ಅಂಗವಾಗಿ ಗುರು ಪೂರ್ಣಿಮೆ ಹಾಗೂ ದಿವ್ಯ ಸತ್ಸಂಗ ಕಾರ್ಯಕ್ರಮದಲ್ಲಿ ಹುಕ್ಕೇರಿ ಹಿರೇಮಠ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಾಡಿನಲ್ಲಿ ಮಠಗಳು ಇದ್ದರೆ ಸಮಾಜ ಸದೃಢವಾಗುತ್ತದೆ. ನಮ್ಮ ಸಮಾಜದಲ್ಲಿ ಯುವಕರು ನಮ್ಮನ್ನು ಸುಧಾರಿಸಲು ಸಿದ್ಧವಾಗುತ್ತಾರೆ ಎನ್ನುವ ಸಾಮಾನ್ಯ ಪರಿಕಲ್ಪನೆ ನನಗೆ ಇದೆ. ನಮ್ಮ ಸರಕಾರದ ಪ್ರಣಾಳಿಕೆಯಲ್ಲಿ ತಿಳಿಸಿದ್ದೇವೆ. ಮಠಗಳನ್ನು ಬೆಳೆಸಲು ಕೋಟ್ಯಂತರ ರೂ. ಮೀಸಲಿಟ್ಟಿದ್ದೇವೆ. ಹುಕ್ಕೇರಿ ಹಿರೇಮಠ ಹಾಗೂ ಬೇರೆ ಮಠಗಳ ಜೀರ್ಣೋದ್ಧಾರಕ್ಕೆ ನಾನು ಟೊಂಕ ಕಟ್ಟಿ ನಿಲ್ಲುತ್ತೇನೆ. ವಿಶೇಷವಾಗಿ ಹುಕ್ಕೇರಿ ಹಿರೇಮಠದ ಶಾಖಾ ಮಠದ ಕಟ್ಟಡ ಕಟ್ಟುವಲ್ಲಿ ಯಶಸ್ವಿಯಾಗುತ್ತೇನೆ. ಆದಷ್ಟು ಬೇಗ ಎಲ್ಲರೂ ಸೇರಿಕೊಂಡು ಈ ಮಠವನ್ನು ಪೂರ್ಣಗೊಳ್ಳಿಸುತ್ತೇವೆ ಎಂದು ಶ್ರೀಗಳಿಗೆ ಮಾತು ನೀಡಿದರು.
ಬಿಡುವಿಲ್ಲದ ಸಂದರ್ಭದಲ್ಲಿ ಮಠ ಮಾನ್ಯಗಳ ಸ್ವಾಮೀಜಿ, ಸಂತರು ಹೇಳಿದ ಮಾತುಗಳನ್ನು ಎಂದಿಗೂ ನಾನು ಪಾಲಿಸಿಕೊಂಡು ಬಂದಿದ್ದೇನೆ. ಬಹುಶಃ ನಾನು ಜೀವನದಲ್ಲಿ ಯಶಸ್ಸು ಕಾಣಲು ಅದು ಒಂದು ಕಾರಣ. ತಾವುಗಳು ಕೂಡ ಬಿಡುವಿನ ಸಮಯದಲ್ಲಿ ತಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ಹೇಳುತ್ತಾ ಹೋದರೆ ನಮ್ಮ ಸಮಾಜ ಸಡೃಢವಾಗಿ ನಿಲ್ಲುತ್ತದೆ. ಎಲ್ಲರೂ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯೋಣ ಎಂದರು.

ಸಾನಿದ್ಯ ವಹಿಸಿದ್ದ ಹುಕ್ಕೇರಿ ಹಿರೇವ್ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತಾಳ್ಮೇಯ ಪ್ರತೀಕವೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಗಿದ್ದಾರೆ. ಅಧಿಕಾರ, ಅಧಿಕಾರ ಮಾಡಲು ಅಲ್ಲ. ಅಧಿಕಾರ ಮಾಡಿದರೆ ಒಮ್ಮೊಮ್ಮೆ ಬೇಸರವಾಗುತ್ತದೆ. ಅಧಿಕಾರ ಅನ್ನುವುದು ಒಂದು ಅವಕಾಶ. ಈ ಅವಕಾಶವನ್ನು ಬಳಕೆ ಮಾಡಿಕೊಳ್ಳುವುದು ಹೇಗೆ ಎಂದರೆ ತಾಳ್ಮೆಯಿಂದ ಇರುವುದು. ಇಂದಿನಿಂದಲೇ ಯಾವುದೇ ಒತ್ತಡದಲ್ಲಿ ಕೆಲಸ ಮಾಡಬೇಡಿ. ಸದಾ ಲವಲವಿಕೆಯಿಂದ ಮಾಡಿ. ಲವಲವಿಕೆಯಿಂದ ಮಾಡಿದರೆ ಎಲ್ಲ ಕೆಲಸ ಸುಲಭವಾಗಿ ಮಾಡಬಹುದು. ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೆಬ್ಬಾಳ್ಕರ್ ಗೆ ಶ್ರೀಗಳು ಕಿವಿಮಾತು ಹೇಳಿದರು.

ಕಲಿಯುಗದಲ್ಲಿ ಒಂದೇ ನೆಮ್ಮದಿ ಕೊಡಬಹುದು. ಸತ್ಸಂಗತ್ವೈ, ನಿತ್ಸಂಗತ್ವಂ, ನಿತ್ಸಂಗತ್ವೈ, ನಿರ್ಮೋಹತ್ವಂ, ನಿರ್ಮೋಹತ್ವೈ ನಿಶ್ಚಲ ತತ್ವಂ. ಇವತ್ತು ಮಹಾ ಸತ್ಸಂಗದಲ್ಲಿ ಭಾಗಿಯಾದ ಎಲ್ಲರಿಗೂ ಇದು ಅನ್ವಯವಾಗುತ್ತದೆ ಎಂದರು.
ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು ಸುಮಾರು 3 ಕೋಟಿ ರೂ. ವೆಚ್ಚವಾಗಿದೆ. 13 ಕೋಟಿ ಅಂದಾಜಿಲಾಗಿದೆ. ಸರಕಾರದ ಗಮನ ಸೆಳೆದು ಈ ಮಠವನ್ನು ಪೂರ್ಣ ಮಾಡುವುದು ನಿಮ್ಮ ಜವಾಬ್ದಾರಿ ಎಂದರು.
ರಾಜ್ಯ ಸರಕಾರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಿದೆ. ರಾಜ್ಯದ ಅಭಿವೃದ್ಧಿ ಮಾಡುವುದರ ಜೊತೆ ಜೊತೆಗೆ ಬೆಳಗಾವಿ ಜಿಲ್ಲೆಗೆ ಹೆಸರು ತಂದು ಕೊಡುವ ಕೆಲಸವನ್ನು ಹೆಬ್ಬಾಳ್ಕರ್ ಅವರು ಮಾಡಲಿ ಎಂದು ಶ್ರೀಗಳು ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ಅರವಿಂದ ಅವರಿಗೆ ಹುಕ್ಕೇರಿ ಹಿರೇಮಠದ ಗುರುಕಾರುಣ್ಯ ಪ್ರಶಸ್ತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಧಾನ ಮಾಡಿದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ಹುಕ್ಕೇರಿ ಹಿರೇಮಠದಿಂದ ಗೌರವಿಸಲಾಯಿತು.
ಯುವರಾಜ ಕದಂ, ವೀರುಪಾಕ್ಷಯ್ಯ ನೀರಲಗಿಮಠ, ಚಂದ್ರಶೇಖರ ಸಾಲಿಸವಡಿಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ