Latest

ನಮ್ಮ ಊರೇ ನಮಗೆ ಚೆಂದ

ಗಿರೀಶ್ ಭಟ್
ಹಲವು ವರ್ಷಗಳ ಹಿಂದೆ ನನ್ನ ಗೆಳೆಯ ನಾನು ಧಾರವಾಡದಿಂದ ಬೆಂಗಳೂರಿಗೆ ಕೆಲಸಕ್ಕೆಂದು ತೆರಳಿದಾಗ ಒಂದು ಮಾತು ಹೇಳುತ್ತಿದ್ದ. ಅದೇನೆಂದರೆ ’ನಮ್ಮ ಊರೆ ನಮಗೆ ಚೆಂದಲೇ’ ಎಂದು. ಆಗ ನನಗೆ ಆ ಮಾತು ಅಷ್ಟೊಂದು ಹಿಡಿಸಿರಲಿಲ್ಲ. ಆದರೆ ಈಗ ಬೆಂಗಳೂರಿನಲ್ಲಿ ಕರೋನಾ ಆರ್ಭಟ ನೋಡಿದಾಗ ಆತ ಹೇಳಿದ್ದು ನಿಜವೆನಿಸುತ್ತಿದೆ. ಬೆಂಗಳೂರಿನಲ್ಲಿ ಕೊರೋನಾ ಕಡಿಮೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ. ಅಲ್ಲದೆ ನಮ್ಮ ರಾಜ್ಯ, ದೇಶದಲ್ಲಿ ಹಾಗೂ ಇಡೀ ವಿಶ್ವದಲ್ಲಿ ಕರೋನಾ ನಿಯಂತ್ರಣಕ್ಕೆ ಬರಲಿ ಎಂಬುದೇ ಎಲ್ಲರ ಬಯಕೆಯಾಗಿದೆ.
ಈಗ ಕೊರೋನಾ ಕಾಟದಿಂದ ಎಷ್ಟೋ ವರ್ಷದಿಂದ ಬೆಂಗಳೂರಿನಲ್ಲಿ ’ಸೆಟಲ್’ ಆದವರು ತಮ್ಮ ಸಾಮಾನು ಸರಂಜಾಮುಗಳನ್ನು (ಬೋರಿ-ಬಿಸ್ತರ್) ಕಟ್ಟಿಕೊಂಡು ಭಾಡಿಗೆ ಮನೆ ಖಾಲಿ ಮಾಡಿ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿರುವುದನ್ನು ನೋಡಿದರೆ ಸದ್ಯ ನಾನು ಬೆಂಗಳೂರಿನಿಂದ ಹಲವು ವರ್ಷಗಳ ಹಿಂದೆಯೇ ವಾಪಸ್ ಬಂದೆನಲ್ಲ ಎನ್ನುವ ಸಮಾಧಾನ ನನ್ನಲ್ಲಿ ಉಂಟಾಯಿತು. ’ಭಾಡಿಗೆ ಕಟ್ಟಲು ಹಣವಿಲ್ಲ, ಇಲ್ಲಿ ಇದ್ದು ಏನು ಮಾಡುವುದು, ಆದ್ದರಿಂದ ನಮ್ಮ ಊರಿಗೆ ತೆಳುತ್ತಿದ್ದೇವೆ’ ಎನ್ನುವುದು ವಾಪಸ್ ತಮ್ಮ ತಮ್ಮ ಊರುಗಳಿಗೆ ಹಿಂದಿರುಗಿ ಬಂದ ಬಹುತೇಕ ಮಾಜಿ ಬೆಂಗಳೂರಿಗರ ಅಭಿಪ್ರಾಯವಾಗಿತ್ತು.
ಉದ್ಯೋಗ ಅರಸಿಕೊಂಡು ಉತ್ತಮ ಅವಕಾಶವಿರುವ ನಗರಗಳಿಗೆ ತೆರಳುವುದು ತಪ್ಪಲ್ಲ. ಆದರೆ ಭೂಮಿತಾಯಿಗೆ ಭಾರವಾಗುಷ್ಟು ಜನಸಾಂದ್ರತೆ ಒಂದೇ ನಗರದಲ್ಲಿ ಉಂಟಾದರೆ ಅದೂ ಸಮಸ್ಯೆ ಅಲ್ಲವೆ? ಅಂದರೆ ಬೆಂಗಳೂರಿನಂತಹ ನಗರಗಳು ಮನುಷ್ಯತ್ವವನ್ನೇ ನೋಡಲು ಸಿಗದಷ್ಟು ಅಭಿವೃದ್ಧಿ ಹೊಂದುತ್ತಿವೆ. ಹೀಗೆ ಅಭಿಪ್ರಾಯ ಪಡಲು ಕಾರಣ ಮೊನ್ನೆ ಬೆಂಗಳೂರಿನ ಬೀದಿಯಲ್ಲಿ ಒಬ್ಬ ವ್ಯಕ್ತಿ ಮಳೆಯಲ್ಲೆ ಬಿದ್ದು ಮೃತ ಪಟ್ಟು ಮೂರು ಘಂಟೆಯಾದರೂ ಯಾರೂ ಅದನ್ನು ನೋಡದೇ ಇದ್ದಿದ್ದು. ಅಪಘಾತಗಳಾದಾಗ ಯಾರೂ ಗಾಯಾಳುಗಳಿಗೆ ಸಂಹಾಯ ಮಾಡದೇ ಇರುವಷ್ಟು ಬೆಂಗಳೂರಿನಲ್ಲಿ ಜನರು ’ಬಿಜಿ’ ಯಾಗಿರುತ್ತಾರೆ.
ಆದರೆ ಹಲವು ವರ್ಷಗಳಿಂದ ಬೆಂಗಳೂರಿಗೆ ಉದ್ಯೋಗ ಅರಸಿಕೊಂಡು ಬರುವವರ ಸಂಖ್ಯೆಯಲ್ಲಿ ಬಹಳ ಹೆಚ್ಚಳವಾಯಿತು. ಬೆಂಗಳೂರಿನಲ್ಲಿ ಕನ್ನಡಿಗನೇ ಅಲ್ಪಸಂಖ್ಯಾತ ಎನ್ನುವಷ್ಟರ ಮಟ್ಟಿಗೆ ಅನ್ಯ ರಾಜ್ಯದ ಭಾಷಿಗರು ಬೆಂಗಳೂರಿನ ತುಂಬೆಲ್ಲ ತುಂಬಿಕೊಂಡರು. ದೂರದ ನಗರಗಳಿಗೆ ಉದ್ಯೋಗ ಅರಸಿಕೊಂಡು ತೆರಳುವ ಬದಲು ನಮ್ಮ ಸ್ವಂತ ಊರಿನಲ್ಲೇ ಒಂದು ೨-೩ ಸಾವಿರ ಕಡಿಮೆ ವೇತನ ಸಿಕ್ಕರೂ ಚೆನ್ನಾಗಿರಬಹುದಲ್ಲವೆ? ಏಕೆಂದರೆ ಬೆಂಗಳೂರಿನಂತಹ ನಗರಗಳಿಗೆ ಉದ್ಯೋಗಕ್ಕೆಂದು ತೆರಳಿದಾಗ ಮೊದಲು ನಾವು ವಸತಿ ಸಮಸ್ಯೆ ಎದುರಿಸಬೇಕಾಗುತ್ತದೆ. ಆಹಾರ ಹೊಟೆಲ್‌ಗಳಲ್ಲಿ ದೊರೆಯುತ್ತದೆ. ಅದು ಮೊದ-ಮೊದಲು ಅಷ್ಟು ಸಮಸ್ಯೆ ಆಗದು. ಆದರೆ ನಂತರ ಹೊಟೆಲ್ ಆಹಾರ ಸಮಸ್ಯೆಯೇ. ಏಕೆಂದರೆ ಮೊದಲನೇಯದಾಗಿ ಹೊಟ್ಟೆ ತುಂಬುವುದಿಲ್ಲ. ಎರಡನೇಯದಾಗಿ ದುಡ್ಡು ಹೆಚ್ಚು ಖರ್ಚಾಗುತ್ತದೆ. ಆರೋಗ್ಯವೂ ಹೊಟೆಲ್ ಆಹಾರದಿಂದ ಕ್ರಮೇಣ ಹದಗೆಡುತ್ತದೆ. ಸ್ವಂತ ಮನೆ-ರೂಮಿನಲ್ಲಿ ಅಡಿಗೆ ಮಾಡಿಕೊಂಡರೆ ಅವೆಲ್ಲ ಸಮಸ್ಯೆ ಇರುವುದಿಲ್ಲ. ಆದರೆ ಅಡಿಗೆ ಮಾಡಿಕೊಳ್ಳಲು, ಪಾತ್ರೆ ತೊಳೆದುಕೊಳ್ಳಲು ಸಾಕಷ್ಟು ಸಮಯ ನೀಡಬೇಕಾಗುತ್ತದೆ. ಒಬ್ಬನೇ ವಾಸಿಸುತ್ತಿದ್ದರಂತೂ ಬೇಸರ ಪಟ್ಟುಕೊಳ್ಳದೇ ಮನೆ ಚಾಕರಿ ಮಾಡಬೇಕಾಗುತ್ತದೆ.
ಭಾರತದ ಐಟಿ -ಬಿಟಿ ರಾಜಧಾನಿ ಎಂದೇ ಖ್ಯಾತವಾಗಿರುವ ಬೆಂಗಳೂರು ಇಂದು ಬೃಹದಾಕಾರವಾಗಿ ಬೆಳೆದಿದೆ. ಈಗ ಬೆಂಗಳೂರು ೨೮೬ ಚದರ ಮೈಲಿ ವಿಸ್ತೀರ್ಣವನ್ನು ಹೊಂದಿದೆ. ೨೦೨೦ ರಲ್ಲಿ ಬೆಂಗಳೂರಿನ ಜನಸಂಖ್ಯೆ ೧,೨೩,೨೭,೦೦೦ ದಷ್ಟಾಗಿದೆ. ಬಿಹಾರಿಗಳು, ತಮಿಳಿಗರು, ಆಂಧ್ರದವರು, ಕೇರಳದವರು ಹೀಗೆ ಹಲವು ರಾಜ್ಯಗಳಿಂದ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು ಎಷ್ಟೋ ವರ್ಷಗಳಿಂದ ನೆಲೆಸಿದ್ದಾರೆ.
ನಮ್ಮ ಊರಿನಲ್ಲಿ ಒಂದು ದಿನ ಯಾರಲ್ಲಿಯಾದರು ಕೆಲಸ ಮಾಡಿದರೂ ನಮಗೆ ವೇತನದಲ್ಲಿ ಮೋಸವಿಲ್ಲ. ಆದರೆ ಬೆಂಗಳೂರಿನಂತಹ ನಗರಗಳಲ್ಲಿ ಗುರ್ತು-ಪರಿಚಯ ವಿಲ್ಲದಲ್ಲಿ ಕೆಲಸಕ್ಕೆ ಸೇರುತ್ತೇವಲ್ಲ. ತಿಂಗಳುಗಟ್ಟಲೆಯಾದರೂ ವೇತನ ದೊರೆಯುತ್ತದೆ ಎನ್ನುವುದು ಖಾತರಿ ಇರುವುದಿಲ್ಲ. ಮೊದಲು ಉದ್ಯೋಗ ಕೊಡಿಸುವ ಕನ್ಸಲ್‌ಟೆನ್ಸಿ ಕಂಪನಿಗಳಿಗೆ ದುಡ್ಡು ಪಾವತಿಸಬೇಕು. ರಿಜಿಸ್ಟ್ರೇಷನ್ ಫೀ ಎಂದು ಸಾವಿರಗಟ್ಟಲೆ ತೆಗೆದುಕೊಳ್ಳುವ ಅವರು ನಂತರ ನಮ್ಮ ಹೊಸ ಕೆಲಸದ ಮೊದಲ ವೇತನದಲ್ಲಿಯೂ ಕತ್ತರಿ ಹಾಕುತ್ತಾರೆ.
ನಗರ ಎಷ್ಟು ಬೃಹದಾಕಾರವಾಗಿ ಬೆಳೆಯುತ್ತದೆಯೋ ಅಲ್ಲಿ ಅಪರಾಧ-ಅಪಘಾತಗಳ ಸಂಖ್ಯೆಯೂ ಅಷ್ಟೇ ಹೆಚ್ಚುತ್ತಾ ಸಾಗುತ್ತದೆ. ಕಳೆದ ವರ್ಷ ಮಳೆಯಿಂದ ಕರ್ನಾಟಕದಲ್ಲಿ ಬಹಳ ಜಿಲ್ಲೆಗಳಲ್ಲಿ ಅನಾಹುತ ಸೃಷ್ಟಿಯಾಯಿತು. ಇದು ಶತಮಾನದ ಅತ್ಯಂತ ದೊಡ್ಡ ಪ್ರಕೃತಿ ವಿಕೋಪ ಎಂದೇ ಹೇಳಲಾಯಿತು. ಇದಕ್ಕೆಲ್ಲ ಕಾರಣ ಮನುಷ್ಯನೇ ಪರೋಕ್ಷವಾಗಿ ಕಾರಣನಾಗಿದ್ದಾನೆ. ಏಕೆಂದರೆ ನೀರು ಹರಿಯಲು ಜಾಗವೇ ಇಲ್ಲದಂತೆ ಮನೆ ಕಟ್ಟಿಕೊಳ್ಳುವುದು. ಕೆರೆಗಳನ್ನೂ ಬಿಡದೆ ಸೈಟ್ ಮಾಡಿ ಮಾರುವುದು. ಅರಣ್ಯನಾಶ ಮುಂತಾದವೇ ಕಾರಣವಾಗಿದೆ. ’ಅಧರ್ಮ ಹೆಚ್ಚಾದಾಗ ಆಗಾಗ ನಾನು ಅವತರಿಸುತ್ತೇನೆ’ ಎಂದು ಶ್ರೀ ಕೃಷ್ಣ ಪರಮಾತ್ಮ ಹೇಳಿದಂತೆ ಪ್ರಕೃತಿಯೂ ಆಗಾಗ ಮನುಷ್ಯನಿಗೆ ಪಾಠ ಕಲಿಸುತ್ತಲೇ ಇರುತ್ತದೆ. ಈಗ ನೋಡಿ ಕೊರೋನಾದಿಂದ ಇಡೀ ಜಗತ್ತೇ ತೊಂದರೆಗೊಳಗಾಗಿದೆ. ಹಲವು ದೇಶಗಳ ಎಷ್ಟೋ ವಿಜ್ಞಾನಿಗಳು ಹಗಲು-ರಾತ್ರಿ ಕೊರೋನಾಗೆ ಲಸಿಕೆ ಕಂಡುಹಿಡಿಯಲು ಹರಸಾಹಸ ಪಡುತ್ತಿದ್ದಾರೆ ಪಾಪ. ನಮ್ಮ ದೇಶದಲ್ಲಿ ಡಾಕ್ಟರ್‌ಗಳು, ನರ್ಸ್‌ಗಳು, ಆಶಾ ಕಾರ್ಯಕರ್ತೆಯರು, ಸೈನಿಕರು, ಪೊಲೀಸರಿಗಂತೂ ಕೊರೋನಾದಿಂದ ತಪ್ಪಿಸಿಕೊಂಡು ಬದುಕುವುದೇ ಒಂದು ಸವಾಲಾಗಿದೆ.
ಇತ್ತೀಚೆಗೆ ನಮ್ಮ ಜೀವನ ಎಷ್ಟು ಬದಲಾಗಿದೆ. ಜಂಕ್‌ಫುಡ್ ತಿಂದು ಚಿಕ್ಕ ವಯಸ್ಸಿನಲ್ಲಿಯೇ ಬಿಪಿ-ಶುಗರ್ ತಂದುಕೊಳ್ಳುವುದು. ಬೆಂಗಳೂರಿನಂತಹ ನಗರಗಳ ಐಟಿ-ಬಿಟಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಇದಕ್ಕೆ ಉತ್ತಮ ಉದಾಹರಣೆ. ಲಾಕ್‌ಡೌನ್ ಸಮಯದಲ್ಲಂತೂ ಚಿಕ್ಕಮಕ್ಕಳು ಶಾಲೆಗಳಿಗೆ ರಜೆ ಘೋಷಿಸಿದ್ದರಿಂದ ತಮ್ಮ ತಪ್ಪಿದ ಜೀವನ ಶೈಲಿಯಿಂದ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರ ಶಿಕ್ಷಣವಂತೂ ೨೦೨೦ ರಲ್ಲಿ ಹಳ್ಳ ಹಿಡಿದಂತಾಗಿದೆ.
ಆದರೆ ನಮ್ಮ ಸ್ವಂತ ಊರಿನಲ್ಲಿಯೇ ಎಲ್ಲರೂ ಕೆಲಸ ಮಾಡಿಕೊಂಡು ಜೀವನ ಕಟ್ಟಿಕೊಂಡರೆ ಕೊರೋನಾದಂತಹ ಇಂತಹ ಸಮಸ್ಯೆಯ ದಿನಗಳಲ್ಲಿ ಬೆಂಗಳೂರಿನಿಂದ ಎಲ್ಲ ಲಗೇಜು ಕಟ್ಟಿಕೊಂಡು ಬರುವುದು ತಪ್ಪುತ್ತಿತ್ತಲ್ಲವೇ? ಊರಿನಲ್ಲಿಯೇ ಮಕ್ಕಳು ಉದ್ಯೋಗ ಮಾಡಿದರೆ ವಯಸ್ಸಾದ ತಂದೆ-ತಾಯಿಗಳಿಗೂ ತಮ್ಮ ಕೊನೆಯ ಕಾಲದಲ್ಲಿ ಮಕ್ಕಳು ಆಸರೆಯಾದಂತಾಗುತ್ತದೆ. ಈಗಂತೂ ವಿಭಕ್ತ ಕುಟುಂಬಗಳೇ ಹೆಚ್ಚಿರುವ ಕಾಲ. ವಯಸ್ಸಾದ ತಂದೆ-ತಾಯಿ ಊರಿನಲ್ಲಿ, ಮಕ್ಕಳು ದೂರದ ಶಹರಗಳಲ್ಲಿ ಇದು ಸಾಮಾನ್ಯವಾಗಿಬಿಟ್ಟಿದೆ. ಕೊರೋನಾದಿಂದಾಗಿ ಎಲ್ಲರೂ ದೂರದ ದೊಡ್ಡ ದೊಡ್ಡ ಊರು ಬಿಟ್ಟು ತಮ್ಮ ಸ್ವಂತ ಊರು ಸೇರಿಕೊಳ್ಳುತ್ತಿರುವುದರಿಂದ ಮನೆಯಲ್ಲಿ ಎಲ್ಲರೂ ಒಟ್ಟಿಗೆ ಜೀವನ ನಡೆಸುವುದು ಅನಿವಾರ್ಯವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button