Kannada NewsKarnataka NewsLatest

ಕಾರ್ಯಕಾರಿಣಿ ಹೊತ್ತಿನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ

ಶಂಕರಗೌಡ ಪಾಟೀಲ ವಿರುದ್ಧ ರಾಜ್ಯ, ರಾಷ್ಟ್ರ ನಾಯಕರಿಗೆ ದೂರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭಾರತೀಯ ಜನತಾ ಪಾರ್ಟಿಯ ರಾಜ್ಯ ಕೋರ್ ಕಮಿಟಿ ಮೀಟಿಂಗ್ ಮತ್ತು ಕಾರ್ಯಕಾರಿ ಸಮಿತಿ ಸಭೆ ನಡೆಯುವ ಹೊತ್ತಿನಲ್ಲೇ ಬೆಳಗಾವಿ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.

ವಿವಿಧ ನಿಗಮ, ಮಂಡಳಿ, ಸಮಿತಿಗಳ ನಾಮಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಆಕ್ರೋಶಗೊಂಡಿದ್ದು, ಬೆಳಗಾವಿಗೆ ಆಗಮಿಸುತ್ತಿರುವ ರಾಜ್ಯ ಉಸ್ತುವಾರಿ ಅರುಣ, ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ಅವರಿಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ.

ಕರ್ನಾಟಕ ಸರಕಾರದ ದೆಹಲಿ ಪ್ರತಿನಿಧಿಯಾಗಿರುವ ಬೆಳಗಾವಿಯ ಶಂಕರಗೌಡ ಪಾಟೀಲ ಅವರು ತಮ್ಮ ಮನಸ್ಸಿಗೆ ಬಂದಂತೆ ನಾಮಕರಣ ಮಾಡುತ್ತಿದ್ದಾರೆ. ಶಂಕರಗೌಡ ಪಾಟೀಲ ಹಠಾವೋ, ಬಿಜೆಪಿ ಬಚಾವೋ ಎನ್ನುವ ಬೇಡಿಕೆಯನ್ನು ರಾಜ್ಯ ನಾಯಕರ ಎದುರು ಇಡಲಾಗುತ್ತದೆ ಎಂದು ನಾಯಕರೊಬ್ಬರು ಪ್ರಗತಿವಾಹಿನಿಗೆ ತಿಳಿಸಿದರು.

ನಾಮನಿರ್ದೇಶನದ ವೇಳೆ ಜಿಲ್ಲೆಯ ಯಾವುದೇ ಶಾಸಕರನ್ನಾಗಲಿ, ಜಿಲ್ಲಾ ಪದಾಧಿಕಾರಿಗಳನ್ನಾಗಲಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಕಳೆದ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕೆಲಸ ಮಾಡಿದವರನ್ನು, ಪಕ್ಷಕ್ಕಾಗಿ ಯಾವುದೇ ಕೆಲಸ ಮಾಡದವರನ್ನು ನಾಮಕರಣ ಮಾಡಲಾಗಿದೆ. ತಕ್ಷಣ ಅದನ್ನೆಲ್ಲ ರದ್ದುಪಡಿಸಬೇಕು. ಜೊತೆಗೆ ಶಂಕರಗೌಡ ಪಾಟೀಲ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎನ್ನುವ ಬೇಡಿಕೆಯನ್ನು ಇಡಲಾಗುತ್ತಿದೆ ಎಂದು ಅವರು ಹೇಳಿದರು.

ಬಿಜೆಪಿಯ ಕರ್ನಾಟಕ ಉಸ್ತುವಾರಿ ಅರುಣ ಸಿಂಗ್ ಅವರನ್ನು ಬರಮಾಡಿಕೊಳ್ಳಲು ಗೋವಾಕ್ಕೆ ಹೋದ ಸಂದರ್ಭದಲ್ಲಿ ಪ್ರಮುಖರೊಬ್ಬರು ನಾಮನಿರ್ದೇಶನ ಮತ್ತು ಶಂಕರಗೌಡ ಪಾಟೀಲ ಅವರ ವರ್ತನೆ ಕುರಿತು ದೂರುಸಲ್ಲಿಸಿದ್ದಾರೆ. ಸಂಜೆ ಪುನಃ ಬೆಳಗಾವಿ ಮಹಾನಗರ ಪದಾಧಿಕಾರಿಗಳು ದೂರು ಸಲ್ಲಿಸಲಿದ್ದು, ಶಾಸಕರಿಬ್ಬರೂ ಜೊತೆಯಾಗುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರಿಗೆ ಆಪ್ತರಾಗಿರುವ ಶಂಕರಗೌಡ ಪಾಟೀಲ ಇತ್ತೀಚೆಗೆ ಜಿಲ್ಲೆಯ ಕಾರ್ಯಕರ್ತರನ್ನು ನಾಮನಿರ್ದೇಶನ ಮಾಡಿಸಿದ್ದರು. ಅದರ ವಿರುದ್ಧ ಈಗ ಜಿಲ್ಲಾ ಪದಾಧಿಕಾರಿಗಳು ಅಸಮಾಧಾನಗೊಂಡಿದ್ದಾರೆ. ಕೆಲವರು ರಾಜಿನಾಮೆಯ ಬೆದರಿಕೆಯನ್ನೂ ಇಟ್ಟಿದ್ದಾರೆ. ಜಿಲ್ಲಾ ಸಮಿತಿಯ ಗಮನಕ್ಕಿಲ್ಲದೆ ನಾಮನಿರ್ದೇಶನ ಮಾಡುವುದಾದರೆ ಜಿಲ್ಲಾ ಸಮಿತಿಯ ಅವಶ್ಯಕತೆ ಏನು ಎಂದು ಪ್ರಶ್ನಿಸಲು ಮುಂದಾಗಿದ್ದಾರೆ.

ಶನಿವಾರ ನಡೆಯಲಿರುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ವಿಷಯ ಗಂಭೀರತೆ ಪಡೆಯುವ ಸಾಧ್ಯತೆ ಇದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button