
ಪ್ರಗತಿವಾಹಿನಿ ಸುದ್ದಿ: ಮಣಿಪುರ ಹಿಂಸಾಚಾರದ ಎರಡು ವರ್ಷಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ಭೇಟಿ ನೀಡಿದರು. ಅವರು ಭೇಟಿ ನೀಡಿರುವ ಮರುದಿನವೇ ರಾಜ್ಯದಲ್ಲಿ ಮತ್ತೆ ಜನಾಂಗೀಯ ಘರ್ಷಣೆಗಳು ಭುಗಿಲೆದ್ದಿದೆ.
ಮೋದಿ ಮಣಿಪುರ ಭೇಟಿ ಹಿನ್ನೆಲೆಯಲ್ಲಿ ಅವರ ಬ್ಯಾನರ್ ಹಾಗೂ ಕಟೌಟ್‌ಗಳನ್ನು ಹಾಕಲಾಗಿತ್ತು. ಆದರೆ ಅವರ ಬ್ಯಾನರ್ ಹಾಗೂ ಕಟೌಟಗಳನ್ನು ಧ್ವಂಸಗೊಳಿಸಲಾಗಿದೆ.
ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡುವ ಮುನ್ನ ಚುರಚಂದಪುರ ಜಿಲ್ಲೆಯಾದ್ಯಂತ ನೂರಾರು ಕಟೌಟ್‌ಗಳನ್ನು ಹಾಕಲಾಗಿತ್ತು. ವರದಿಗಳ ಪ್ರಕಾರ ಪಿಯರ್ಸನ್‌ಮುನ್ ಮತ್ತು ಫೈಲಿಯನ್ ಬಜಾರ್‌ನಲ್ಲಿ ಹಾಕಲಾಗಿದ್ದ ಹಲವಾರು ಬ್ಯಾನರ್‌ಗಳು ಮತ್ತು ಕಟೌಟ್‌ಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.
ಪ್ರಧಾನಿಯವರ ಕಟೌಟ್‌ಗಳು ಮತ್ತು ಬ್ಯಾನರ್‌ಗಳನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅನೇಕ ವ್ಯಕ್ತಿಗಳನ್ನು ಬಂಧಿಸಿದ್ದಾರೆ. ನಂತರ ಅವರೆಲ್ಲರನ್ನೂ ಬಿಡುಗಡೆ ಮಾಡಲಾಗಿದ್ದರೂ, ಇಬ್ಬರು ವ್ಯಕ್ತಿಗಳನ್ನು ಮಾತ್ರ ಪೊಲೀಸರು ಬಂಧನದಲ್ಲೇ ಇರಿಸಿದ್ದಾರೆ.
ಇದರೊಂದ ರೊಚ್ಚಿಗೆದ್ದ ಗುಂಪು ಅವರ ಬಿಡುಗಡೆಗೆ ಒತ್ತಾಯಿಸಿ, ಚುರಾಚಂದ್‌ಪುರ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ನಂತರ ಸ್ಥಳದಲ್ಲಿ ಮತ್ತೆ ಉದ್ವಿಗ್ನತೆ ಉಂಟಾಗಿದೆ. ಗುಂಪು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿದೆ. ಸದ್ಯ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.