ಜಿ.ಪಿ. ಘೋರ್ಪಡೆ, ತಾಳಿಕೋಟೆ – ಬುಧವಾರ ರಾತ್ರಿ ಸುರಿದ ರಭಸದ ಮಳೆಗೆ ಡೋಣಿ ನದಿಯು ಮೈದುಂಬಿ ಹರಿಯುತ್ತಿದ್ದು, ಹಡಗಿನಾಳ ಗ್ರಾಮದ ಮುಖಾಂತರ ತೆರಳುವ ಡೋಣಿ ನದಿಯ ಮುಖ್ಯ ರಸ್ತೆಗೆ ಅಡ್ಡಲಾಗಿ ನಿರ್ಮಿಸಲಾದ ಕೆಳಮಟ್ಟದ ಸೇತುವೆಯೂ ಸಂಪೂರ್ಣ ಜಲಾವೃತಗೊಂಡಿದೆ.
ವರ್ಷವಿಡಿ ನೀರಿನ ಹರಿವಿನ ಮೂಲಕ ಹರಿಯುತ್ತಿದ್ದ ಡೋಣಿ ನದಿಯಲ್ಲಿ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆಯಾಗುತ್ತಾ ಬಂದಿದ್ದರಿಂದ ಡೋಣಿ ನದಿಯು ನೀರಿಲ್ಲದೇ ಬತ್ತಿಹೋಗಿತ್ತು. ಕಳೆದ ಮೂರ‍್ನಾಲ್ಕು ದಿನಗಳಿಂದ ಜಿಲ್ಲೆಯ ವಿವಿಧಡೆ ಸುರಿದ ಮಳೆಯಿಂದ ಡೋಣಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದೆ.
ಗುರುವಾರ ಬೆಳಿಗ್ಗೆ ಹೊತ್ತಿಗೆ ಸೇತುವೆಯ ಮೇಲೆ ನೀರು ಹರಿಯುತ್ತಿದ್ದರೂ ಬಸ್, ಟ್ರ್ಯಾಕ್ಟರ್, ಟಂಟಂ ಗಳಂತಹ ವಾಹನಗಳು ಸಂಚರಿಸುತ್ತಿದ್ದವು. ಮಧ್ಯಾಹ್ನ ೧೨ ಘಂಟೆಯ ನಂತರ ನೀರಿನ ಪ್ರಮಾಣ ಸಂಪೂರ್ಣ ಏರಿಕೆ ಕಂಡು, ಕೆಳಮಟ್ಟದ ಸೇತುವೆ ಮುಳಗಿಹೋಗಿದ್ದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.
ಕಳೆದ ವರ್ಷ ಈ ಕೆಳಮಟ್ಟದ ಸೇತುವೆಯ ಪಕ್ಕದಲ್ಲಿ ೨೦ ಕೋಟಿ ರೂ. ವೆಚ್ಚದಲ್ಲಿ ಮೇಲ್ಮಟ್ಟದ ಸೇತುವೆ ನಿರ್ಮಾಣಕ್ಕೆ ಅಂದಿನ ಲೋಕೋಪಯೋಗಿ ಸಚಿವ ಎಚ್.ಸಿ.ಮಹಾದೇವಪ್ಪ ಅವರು ಚಾಲನೆ ನೀಡಿದ್ದರು. ಕಾಮಗಾರಿಯು ಬೇಸಿಗೆಯ ಸಮಯದಲ್ಲಿ ಪಾಯವನ್ನು ದಾಟಿ ಮೇಲ್ಮಟ್ಟಕ್ಕೇರಬೇಕಿತ್ತು. ಆದರೆ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದರಿಂದ ಸದ್ಯ ಕೇವಲ ಸೇತುವೆ ನಿರ್ಮಾಣಕ್ಕೆ ಪಾಯಗಳನ್ನು ಅಗೆಯಲಾಗಿದೆ. ಈಗ ಡೋಣಿ ನದಿಯು ಮೈದುಂಬಿ ಹರಿಯುತ್ತಿದ್ದರಿಂದ ಸೇತುವೆ ನಿರ್ಮಾಣಕ್ಕೆ ಅಗೆಯಲಾದ ಪಾಯಗಳ ಗುಂಡಿಗಳು ಮುಚ್ಚಿಕೊಂಡು ಹೋಗಿವೆ. ನದಿಯೊಳಗೆ ಸೇತುವೆ ನಿರ್ಮಾಣ ಮಾಡಬೇಕಾದ ಬೇಸಿಗೆಯಲ್ಲಿ ಗುತ್ತಿಗೆದಾರರು ಸಮಯವನ್ನು ಕಾಲಹರಣ ಮಾಡಿ ಮಳೆಗಾಲದ ಅವದಿಯಲ್ಲಿ ಡೋಣಿ ನದಿಯಲ್ಲಿ ನೀರು ಹರಿಯುತ್ತದೆ ಎಂಬುದು ಗೊತ್ತಿದ್ದರೂ ಮಳೆಗಾಲದ ಸಮಯದಲ್ಲಿ ಕಾಮಗಾರಿ ಪ್ರಾರಂಭಿಸಿರುವುದು ಏಷ್ಟು ಸರಿ ಎಂಬ ಪ್ರಶ್ನೆ ನಾಗರಿಕರದ್ದಾಗಿದೆ.
ರೈತರ ಮೊಗದಲ್ಲಿ ಹರ್ಷ
ವರುಣ ಕೃಪೆಯಿಂದ ಸತತವಾದ ಬರಗಾಲದಿಂದ ತತ್ತರಿಸಿಹೋಗಿದ್ದ ಈ ಭಾಗದ ರೈತರ ಮೊಗದಲ್ಲಿ ಈ ಎರಡ್ಮೂರು ದಿನಗಳು ಸುರಿದ ಮಳೆಯು ಹರ್ಷವನ್ನುಂಟು ಮಾಡಿದೆ. ಈಗಾಗಲೇ ಈ ಭಾಗದ ರೈತರು ತಮ್ಮ ತಮ್ಮ ಜಮೀನುಗಳಲ್ಲಿ ತೊಗರಿ, ಹತ್ತಿ, ಒಳಗೊಂಡಂತೆ ಇನ್ನಿತರ ಬೆಳೆಗಳನ್ನು ಬಿತ್ತಿದ್ದಾರೆ. ಬೆಳೆಯೂ ಸಹ ಮೊಣಕಾಲಹತ್ತಿರ ಬೆಳೆದು ನಿಂತಿದ್ದು ವರಣನ ಕೃಪೆಗೆ ಕಾಯುತ್ತಿದ್ದ ರೈತರಿಗೆ ಈ ಮಳೆಯು ಸಂತಸ ಮೂಡಿಸುವುದರೊಂದಿಗೆ ವರ್ಷಧಾರೆ ಹರ್ಷವನ್ನು ತಂದಿದೆ.
ಸೋಗಲಿಹಳ್ಳದಲ್ಲಿ ಭಾರೀಪ್ರಮಾಣದ ನೀರು
ಪಟ್ಟಣದ ಹತ್ತಿರವೇ ಹರಿಯುವ ಸೋಗಲಿಹಳ್ಳದಲ್ಲಿಯೂ ಕೂಡಾ ಮಳೆಯಿಂದ ಭಾರಿಪ್ರಮಾಣದ ನೀರು ಹರಿಯತೊಡಗಿದೆ. ಮಳೆ ಇಲ್ಲದೇ ಸೋಗಲಿಹಳ್ಳವು ಬತ್ತಿಹೋಗಿತ್ತು. ಎರಡ್ಮೂರುದಿನ ತಾಲೂಕಿನಲ್ಲಿ ಸುರಿದ ಮಳೆಯಿಂದ ಸೋಗಲಿಹಳ್ಳದಲ್ಲಿ ದಿನವಿಡಿ ಭಾರಿ ಪ್ರಮಾಣದ ನೀರು ಹರಿಯತೊಡಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ