ಜೇನು ದನಿಯ ನೆನಪಿನಲ್ಲಿ…

ಸೆ.22 ಗಾನಗಂಧರ್ವ ಡಾ.ಪಿ.ಬಿ.ಶ್ರೀನಿವಾಸ ಅವರ ಹುಟ್ಟುಹಬ್ಬ. ತನ್ನಿಮಿತ್ತ ಈ ಲೇಖನ

 

-ನೂತನ ಕುಲಕರ್ಣಿ      
  ” ಬಾರೆ ಬಾರೆ ಚೆಂದದ ಚೆಲುವಿನ ತಾರೆ
     ಬಾರೆ ಬಾರೆ ಒಲವಿನ ಚಿಲುಮೆಯ ಧಾರೆ “
ಈ ಹಾಡು ಕಿವಿಗೆ ಬಿದ್ದ ಕೂಡಲೇ ರಸ್ತೆಯಲ್ಲಿ  ಸುಮ್ಮನೆ  ಹೋಗುತ್ತಿದ್ದ ನಾನು ಒಮ್ಮೆಲೇ ಆವಾಹನೆಯಾದಂತೆ  ಧಡಧಡನೆ ಓಡುತ್ತಿದ್ದೆ. ನಮ್ಮ ಅಟ್ಟದ ಮನೆಯ  ಮೆಟ್ಟಿಲೇರಿ, ಲಗುಬಗೆಯಿಂದ ರೇಡಿಯೋ ಹಚ್ಚಿ,, ಅದರ ಮುಂದೆಯೇ ನಿಂತು, ಹಾಡಿನ ಉಳಿದ ಭಾಗವನ್ನು  ಕಣ್ಮುಚ್ಚಿ  ಪರವಶತೆಯಿಂದ ಕೇಳುತ್ತಿದ್ದೆ. “ಈ ಹಾಡು ಹತ್ತಿದ ಕೂಡ್ಲೇ ತಲಿ ಕೆಟ್ಟಹಂಗ ಮಾಡತದವಾ  ನಮ್ಮ ಪುಟ್ಟಿ ” ಅಂತ  ಅಮ್ಮ ಗೊಣಗುತ್ತಿದ್ದಳು. “ಅಯ್ಯ, ಸಾಕ ಮಾಡ ನಮ್ಮವ್ವಾ. ಈ ಹಾಡಿನ ಹುಚ್ಚ ಹಿಡದದ ಇಕಿಗೆ. ಎಷ್ಟ ಸಲಾ ಕೇಳಿದ್ರೂ  ಸಮಾಧಾನ ಇಲ್ಲ. ” ಅಂತ ಅಜ್ಜಿ ಬೈತಿದ್ದಳು. ಯಾರು ಏನರೆ ಅನ್ಲಿ, ನಾ ಮಾತ್ರ ಕೇಳಿಸಿಕೊಳ್ಳೋದೊಂದ  :ಅದ – “ಬಾರೆ ಬಾರೆ “ಹಾಡು.
               ಮುಂದ  ನನ್ನ ತಲ್ಯಾಗ ಇನ್ನೊಂದು ಗುಂಗೀ ಹುಳಾ ಹೊಕ್ಕಿತು. “ಇಂಥಾ ಛಂದದ ಹಾಡು ಅಂದಾವ್ರು ಯಾರಿರಬಹುದು?”ರೇಡಿಯೋ ಮುಂದ ಕೂತು ಕೂತು, ಎಲ್ಲಾ ಪ್ರೋಗ್ರಾಮ್ಸ್  ಕೇಳಿ ಕೇಳಿ, ಅದನ್ನೂ ಕಂಡ ಹಿಡದಬಿಟ್ಟೆ. “ಮುಂದಿನ ಹಾಡು ನಾಗರಹಾವು ಚಿತ್ರದ್ದು, ಸಂಗೀತ ವಿಜಯ್ ಭಾಸ್ಕರ ಅವರದು, ಗಾಯಕರು ಪಿ ಬಿ ಶ್ರೀನಿವಾಸ “ಅಂತ ಇಂಚರ ಕಾರ್ಯಕ್ರಮದಲ್ಲಿ ಹೇಳಿದಾಗ, “ಪಿಬಿಶ್ರೀ ” ಹೆಸರು ಕಿವಿಯಿಂದ  ನೇರ ಎದೆಯೊಳಗೆ ಇಳಿದು ನಿಂತುಬಿಟ್ಟಿತು, ಇಟ್ಟಿಗೆಯ ಮೇಲೆ ವಿಠ್ಠಲ ನಿಂಥಾಂಗ!  ಅಂದಿನಿಂದ ಅವರ  ಯಾವ ಹಾಡನ್ನೂ ನನ್ನ ಕಿವಿ ತಪ್ಪಿಸಿಕೊಳ್ಳಲಿಲ್ಲ. ಅವರ ಎಲ್ಲ ಹಾಡುಗಳನ್ನು  ಮೈಮರೆತು ಮನಸೋತು ಕೇಳುತ್ತಿದ್ದೆ. ಸುರಲೋಕದ  ಪಾರಿಜಾತದ ಕೇಸರಿ ತೊಟ್ಟಿನಿಂದ ಸುರಿದು, ಧರೆಗಿಳಿದ  ಜೇನು -ಜಾಹ್ನವಿ ಅವರ ಇನಿದನಿ.!
                ಹಾಡಿನ ಭಾವ ಯಾವುದೇ ಇರಲಿ ಪಿ ಬಿ ಎಸ್ ತಮ್ಮ ದನಿಯಿಂದ ಅದರಲ್ಲಿ  ಜೀವ ತುಂಬುವ ಪರಿ ಅನನ್ಯ. ಮೊಟ್ಟ ಮೊದಲಿಗೆ  ಹೆಸರು ತಂದು ಕೊಟ್ಟದ್ದು ಭಕ್ತಿ ಪ್ರಧಾನ ಚಿತ್ರಗಳಲ್ಲಿಯ ಭಕ್ತಿ ಗೀತೆಗಳು. “ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ, ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು,  ಈತನೀಗ ವಾಸುದೇವನು, ಶ್ರೀಧರ ಕೇಶವ ನಾರಾಯಣ, ಜಯತು ಜಯ ವಿಠ್ಠಲ, ಬೊಂಬೆಯಾಟವಯ್ಯಾ, ಇಂದು ಎನಗೆ ಗೋವಿಂದ, ತಿರುಪತಿ ಗಿರಿವಾಸಾ….. ” ಹೀಗೆ  ನೂರಾರು ಗೀತೆಗಳನ್ನು  ಕೇಳಿದರೆ ದೇವನೊಲಿದು  ಪ್ರತ್ಯಕ್ಷನಾದ ಪ್ರಸನ್ನ  ಭಾವ ಮೈದುಂಬುತ್ತದೆ.
                 ಅವರು ಹಾಡಿದ ಪ್ರೇಮಗೀತೆಗಳೋ ಸಾವಿರ ಸಾವಿರದ ಸರಮಾಲೆ ! “ಆಕಾಶವೇ ಬೀಳಲಿ ಮೇಲೆ, ಆ ಮೊಗವು ಎಂಥಾ ಚೆಲುವು, ಓಡುವ ನದಿ ಸಾಗರವಾ, ನೀ ಬಂದು ನಿಂತಾಗ, ನನ್ನವಳು ನನ್ನೆದೆಯ, ನಿನ್ನೊಲುಮೆಯಿಂದಲೇ, ಹೃದಯ ವೀಣೆ ಮಿಡಿಯೆ ತಾನೇ, ಮಧುಮಯ ಚಂದ್ರನ ಮಧುಮಯ, ಹಾಡೋಣ ಒಲವಿನ ರಾಗಮಾಲೆ, ಮಧುರ ಮಧುರವೀ  ಮಂಜುಳ ಗಾನ., ಜೇನಿರುಳು ಜೊತೆಗೂಡಿರಲು, ಆಹಾ ಮೈಸೂರು ಮಲ್ಲಿಗೆ, ಸಂಗಮಾ ಸಂಗಮಾ ., ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ, ನೀರಿನಲ್ಲಿ ಅಲೆಯ ಉಂಗುರ …. ” ಒಂದೇ ಎರಡೇ? ಶಾಂತ ಸಂಯಮದ ಪ್ರೇಮ ಭಾವ ಒಸರುವ ಈ ಗೀತೆಗಳು ಚಿರ ನೂತನ !
                  ಇನ್ನು ಶೋಕಗೀತೆಗಳಿಗೇನು ಕೊರತೆ? “ಬರೆದೆ ನೀನು ನಿನ್ನ ಹೆಸರ, ವೈದೇಹಿ ಏನಾದಳು?, ಎಲ್ಲಿಗೆ ಪಯಣ?, ಹಾಡೊಂದ ಹಾಡುವೆ ನೀ ಕೇಳು ಮಗುವೇ, ಒಡೆಯಿತು ಒಲವಿನ ಕನ್ನಡಿ, ನಾನೇ ತಾಯಿ ನಾನೇ ತಂದೆ, ಆಡಿಸಿ ನೋಡು ಬೀಳಿಸಿ ನೋಡು..” ಇನ್ನೂ ಎಷ್ಟೋ? ಯಾವುದೇ ಒಂದು ಶಬ್ದದ ಮೇಲೆಯೋ ಅಥವಾ ಒಂದು ಸಾಲಿನ ಮೇಲೆಯೋ ಗಿಮಿಕ್ಸ್ ತೋರಿಸದೇ, ಇಡೀ ಹಾಡಿನ ವಾತಾವರಣವನ್ನೇ ಭಾವಮಯ ಮಾಡುವ ಶಕ್ತಿ ಪಿ ಬಿ ಶ್ರೀ ಯವರ ದನಿಗಲ್ಲದೇ ಮತ್ತಾವ ದನಿಗೆ ಸಾಧ್ಯ?
                   “ಅಮ್ಮಾ ಅಮ್ಮಾ, ನಾ ಅಮ್ಮಾ ಎಂದಾಗ, ಕಾಣದ ದೇವರು ಊರಿಗೆ ನೂರು, ಅಮ್ಮಾ ಎಂದರೆ ಏನೋ ಹರುಷವು, ತಾರೆ ಸಾವಿರ ಸೇರಿ ಚಂದಿರಗೆ ಸಾಟಿಯೇ “ಅಂತಹ ಮಮತೆ ಉಕ್ಕುವ ಹಾಡುಗಳು, “ಏನೇ ಸುಬ್ಬಿ ತುಂಬಾ ಕೊಬ್ಬಿ, ಮೆಲ್ಲಗೆ ನಡೆ ಮೆಲ್ಲಗೆ, ಹೋದರೆ ಹೋಗು ನನಗೇನು…. ” ಇಂಥ ಛೇಡಿಸುವ ಹಾಡುಗಳು, “ನಾವಾಡುವ ನುಡಿಯೇ ಕನ್ನಡ ನುಡಿ, ಅಪಾರ ಕೀರ್ತಿ ಗಳಿಸಿ, ಕನ್ನಡವೇ ತಾಯ್ನುಡಿಯು,… “ಈ ಥರದ ನಾಡಭಕ್ತಿ ಗೀತೆಗಳು ಅವಿಸ್ಮರಣೀಯ !
                     ನಾನು ಅತೀ ವಿಶೇಷವಾಗಿ ಮೆಚ್ಚುವ ಕೆಲವು ಹಾಡುಗಳಿವೆ. ಅವೆಂದರೆ :”ಕನ್ನಡದ ಕುಲದೇವಿ ಕಾಪಾಡು ಬಾ ತಾಯಿ, ಬಾ ತಾಯೆ ಭಾರತಿಯೆ ಭಾವ ಭಾಗೀರಥಿಯೆ, ತೂಗುವೆ ರಂಗನ ತೂಗುವೆ ಕೃಷ್ಣನ ಹಾಗೂ ಜಯತು ಜಯ ವಿಠ್ಠಲ.”ಹೆಚ್ಚು ಗಮನ ಕೊಡದೇ ಕೇಳಿದಾಗ ಈ ಹಾಡುಗಳು ಅತೀ ಸುಲಭ ಧಾಟಿಯ, ಯಾರೂ ಅನ್ನಬಹುದೇನೋ ಅನಿಸುತ್ತವೆ. ಆದರೆ ಒಮ್ಮೆ ಲಕ್ಷ್ಯಗೊಟ್ಟು ಕೇಳಿ. ಈ ಹಾಡುಗಳು ಅಷ್ಟು ಸರಳವಲ್ಲ . ಆ ಧ್ವನಿಯಲ್ಲಿನ ಶಾಂತಿ ಸಮಾಧಾನ, ಯಾವುದೇ ಉದ್ವೇಗ -ತಳಮಳ -ವಿಕಾರವಿಲ್ಲದ ಆಳವಾದ ಸ್ಥಿರತೆ ಮತ್ತು ನಿಖರ ಸ್ವರ ಸ್ಥಾನ…. ಸುಲಭ ಸಾಧ್ಯದ ಮಾತಲ್ಲ.
                     ಅವರ ಕೆಲವು ಅಪರೂಪದ ಹಾಡುಗಳಿವೆ, ಬಹಳ ಜನ ಬಹಳ ಸಲ ಕೇಳಿರದಂಥ ಹಾಡುಗಳಿವು. “ಸಾಕೆಲೇ ಬಿಂಕದ ನೋಟವು ಹರಿಣಿ, ಪ್ರಿಯತಮೆ ಮಧುಮಯಿ ಮಧುಮಾಲತಿ, ಒಲುಮೆಯ ಹೂವೇ, ಮಲ್ಲಿಕಾರ್ಜುನನು ನೆಲೆಸಿದ ಶ್ರೀ ಶೈಲ  ಗಿರಿಯ ಮಹಿಮೆ,.. “ತುಂಬಾ ಸುಂದರ ಮಧುರಗೀತೆಗಳಿವು. ಲತಾ ಮಂಗೇಶ್ಕರ ಅವರ ಜೊತೆ ಹಿಂದಿಯಲ್ಲಿ ಹಾಡಿದ “ಚಂದಾಸೆ ಹೋಗಾ ವೋ ಪ್ಯಾರಾ” (ಮೈಂ ಭೀ ಲಡಕಿ ಹೂ ಚಿತ್ರದ್ದು ), ಗೀತೆಯಲ್ಲಿ ಪಿ ಬಿ ಶ್ರೀ ಯವರ ದನಿ ಬೆಣ್ಣೆಯಂತೆ ಮೃದುವಾಗಿ ಮೂಡಿ ಬಂದಿದೆ. ಅಲ್ಲದೇ ಪಿ. ಸುಶೀಲಾ ಅವರ ಜೊತೆ ಹಾಡಿದ “ನೈನಾ ಜೋ ನೈನೋಸೆ ಮಿಲೇ ” (ಡಾಕು ಭೂಪತ ಚಿತ್ರ) ಹಾಡು ಕೂಡ ಅಪರೂಪದ ಸುಂದರ ಹಿಂದಿ ಹಾಡು.
                     ಸಿನಿ ಸಂಗೀತ ಪ್ರಿಯರು ಹುಚ್ಚೆದ್ದು ಮೆಚ್ಚುವ ಕೆಲ
ತೆಲುಗು ಹಾಗೂ ತಮಿಳು ಹಾಡುಗಳಿವೆ. ” ಓಹೋ ಗುಲಾಬಿ ಬಾಲಾ ಅಂದಾಲ ಪ್ರೇಮ ಮಾಲಾ “, ” ನೀಲಿ ಮೇಘ ಮಾಲವೋ ” ಇತ್ಯಾದಿ ತೆಲುಗು ಹಾಡುಗಳಲ್ಲಿನ ಅವರ ಮಖಮಲಿ ದನಿಗೆ ಮರುಳಾಗದವರಿಲ್ಲ . ತಮಿಳಿನ ಜೆಮಿನಿ ಗಣೇಶನ್ ಹಾಗೂ ಪಿ ಬಿ ಶ್ರೀ ಯವರ ಕೊಂಬಿನೇಶನ್ ಕೂಡ ಜಬರದಸ್ತ ಆಗಿತ್ತು. ಅವರ ಜೋಡಿಯಲ್ಲಿ ಬಂದ ರಾಮು ಚಿತ್ರದ ” ನಿಲವೇ ಎನ್ನಿಡಮ್
ನೆರಂಗಾದೆ ” ಹಾಡಂತೂ ತಮಿಳಿನ ಗಝಲ್! ನಿಜವಾಗಿಯೂ ಅದೊಂದು ಕ್ಲಾಸಿಕ್ ಹಾಡು.ದಕ್ಷಿಣ ಭಾರತದ ಹಳೆಯ ಹೆಸರಾಂತ
ಗಾಯಕರಿಂದ ಹಿಡಿದು ಇಂದಿನ ಶ್ರೇಷ್ಠ ,ಜೇಷ್ಠ ,ಹಿರಿ , ಮರಿ ಗಾಯಕ
ಗಾಯಕಿಯರೂ ಈ ಹಾಡನ್ನು ಹಾಡಿ ತಮ್ಮ ತಮ್ಮ ಗಾಯಕಿಯ ಮಟ್ಟವನ್ನು ಪರೀಕ್ಷಿಸಿಕೊಂಡಿದ್ದಾರೆಂದೇ ನನ್ನ ಭಾವನೆ . ಅಲ್ಲದೇ
“ಕಾಲಂಗಳಿಲ್ ಅವಳ್ ವಸಂದಮ್ ” , “ಮೌನಮೇ ಪಾರ್ವಯಿಲ್
ಒರು ಪಾಟ ” , “ಅನುಭವ  ಪುದುಮೈ ” ….. ಈ ಎಲ್ಲ ಹಾಡುಗಳು
ಐದು ದಶಕಗಳ ನಂತರವೂ ಅದೇ ಪುಳಕ ತರುತ್ತವೆ.
                     ಪಿ ಬಿ ಶ್ರೀ ಈ ಪರಿಯಾಗಿ ನೆನಪಾಗಲು ಕಾರಣ ಇಂದು ಮತ್ತೆ “ಬಾರೆ ಬಾರೆ ಚೆಂದದ…. “ಹಾಡು ಕೇಳಿದೆ. ಕೂಡಲೇ ಬಿಳಿ ಜುಬ್ಬಾ ಧರಿಸಿ, ತೋಳು ಚಾಚಿ, ತೀವ್ರ passionate ಆಗಿ “ಬಾರೆ  ಬಾರೇ “ಎಂದು ಹಾಡುವ ಜೇನುಗಣ್ಣಿನ ವಿಷ್ಣುವರ್ಧನ್  ಹಾಗೂ ಕೇಸರಿ ಸೀರೆ, ಕೇಸರಿ ಬಳೆಗಳು, ಕೇಸರ ಕನಕಾಂಬರ ಮಾಲೆ ಧರಿಸಿದ ಅಪ್ಸರೆ ಆರತಿ ತೇಲಿ ತೇಲಿ ಬಂದು, ಪ್ರಿಯಕರನ ಮೈ ಮನ ಸವರಿ ದೂರಾಗುವ ಮತ್ತೆ ಹೊರಳಿ ಬರುವ ಮಾರ್ದವ ದೃಶ್ಯ ಕಣ್ಣ ಪಟಲ ಮೇಲೆ ಅಚ್ಚೊತ್ತಿ ನಿಂತಿತು. ಈ ಹಾಡು, ಈ ದೃಶ್ಯ, ಈ ಭಾವಕ್ಕೆ ಜೀವ ಬಂದದ್ದೇ” ಆ ದನಿ”ಯಿಂದ. ಮೊದಲ ಸಲ ‘ಬಾರೆ  ಬಾರೆ ಎಂದಾಗ ಪ್ರೇಮವೇ ದನಿಯಾಗಿ, ಗೀತೆಯಾಗಿ ಕೂಗಿ ಕರೆಯುವ ಅಮೃತ ಭಾವ! ಮಗದೊಮ್ಮೆ’ ಬಾರೆ ಬಾರೆ ‘ ಎಂದು ತೂಗಿ ತೂಗಿ ಹಾಡಿದಾಗ  ಮನಗಳ ಮಿಲನದ ಪರವಶತೆಯೇ  ತಾನಾದ ಅನುರಾಗ ಭಾವ ! ಪ್ರತಿ ನುಡಿಯ ಕೊನೆಗೆ ‘ಬಾ   ರೆ,  ಬಾ    ರೆ ‘ ಎಂದಾಗ  ಸಾಗರದ ಅಲೆಗಳು ಏರಿ ಇಳಿದು ತೀರ ಸೇರುವ ತವಕ ಸಂಭ್ರಮ ಭಾವ !ಹಾಡಿನ ಕೊನೆಗೆ ಮತ್ತೊಮ್ಮೆ ‘ಬಾರೆ ಬಾರೆ ‘ ಎಂದು ಹಾಡಿದಾಗ ಪ್ರಿಯ ಪ್ರೇಯಸಿ ಬಂದರೂ ಬಾರದೇ ಹೋಗುವ, ದೀಪ ನಂದಿದ ವಿಷಣ್ಣ ಭಾವ ! (ವಿಜಯ ಭಾಸ್ಕರರ ಅಲೌಕಿಕ ಆನಂದಾನುಭೂತಿ ನೀಡುವ ಸಂಗೀತಕ್ಕೂ,, ವಿಜಯ ನಾರಸಿಂಹರ ಅದ್ಭುತ ಪದ ಲಾಲಿತ್ಯದಿಂದ ಕೂಡಿದ ಗೀತ ರಚನೆಗೂ ಸಾಟಿಯೇ ಇಲ್ಲ !) ಪ್ರೇಮ -ವಿರಹ, ಆಸೆ -ನಿರಾಸೆ, ಸೌಂದರ್ಯ -ಗಾಂಭೀರ್ಯಗಳ ಸಂಗಮ ಭಾವಗಳೆಲ್ಲ ಯಾವುದೋ ಒಂದು ವಿಷಾದದ ಅಂಚಿನಲ್ಲಿ ಸಾಗಿ ಮುಗಿಯುವ ಈ ಹಾಡು ತರುವ ತವಕ ತಲ್ಲಣ, ಖುಷಿ -ನೋವು ಅಷ್ಟಿಷ್ಟಲ್ಲ ! (ಇದು ನನಗಾಗುವ ಅನುಭವ.) ಹಲವಾರು  ಸಂಗೀತ ಪ್ರಿಯರ /ವಿಮರ್ಶಕರ ಪ್ರಕಾರ ಈ ಹಾಡಿನಲ್ಲಿ  ಪಿ ಬಿ ಶ್ರೀಯವರು ರಫಿಯವರ ಮಾಧುರ್ಯ, ಹೇಮಂತ್ ಕುಮಾರರ ಗಾಂಭೀರ್ಯ ಹಾಗೂ ತಲತ ಮೆಹಮೂದರ ನವಿರು ಗಝಲಿನ ಝಲಕುಗಳನ್ನು ನಾಜೂಕಾಗಿ  ಕಾಣಿಸಿದ್ದಾರೆ. ಅದಕ್ಕೇ ಅಲ್ಲವೇ “ಸ್ವಾತಿ  ಮಳೆಯ ಕೋಟಿ ಹನಿಯಲಿ ಎಲ್ಲೋ ಒಂದು ಮುತ್ತಾಗಿ “ಎಂಬಂತಿದೆ ಈ ಹಾಡು!!

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button