Kannada NewsKarnataka NewsLatest

ವಿರೋಧ ಪಕ್ಷದವರ ಒತ್ತಡಕ್ಕೆ ಮಣಿದು ಪ್ಯಾಕೇಜ್ ಘೋಷಣೆ:  ಸತೀಶ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ವಿರೋಧ ಪಕ್ಷದವರ ಒತ್ತಡದಿಂದ ಮತ್ತು ಜನರಿಗೆ ಪ್ಯಾಕೇಜ್ ಕೊಟ್ಟಿದ್ದೇವೆ ಎಂದು ಬಿಂಬಿಸಿಕೊಳ್ಳುವುದಕ್ಕಾಗಿ ಮಾತ್ರ ರಾಜ್ಯ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿದೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸರ್ಕಾರ ಘೋಷಣೆ ಮಾಡಿರುವ ಕೋವಿಡ್ ಪ್ಯಾಕೇಜ್ ನಲ್ಲಿ ಜನರಿಗೆ ಅನುಕೂಲವಾಗುವ ಯೋಜನೆಗಳು ಇಲ್ಲ. ಕೇವಲ ಕಾಟಾಚಾರಕ್ಕಾಗಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
“ತಮಿಳುನಾಡಿನಲ್ಲಿ ಪ್ರತಿಯೊಬ್ಬರಿಗೂ 4,000 ರೂ. ಘೋಷಣೆ ಮಾಡಿದ್ದಾರೆ. ಆಂಧ್ರಪ್ರದೇಶದಲ್ಲಿ ಸರ್ಕಾರಿ ಹಾಗೂ ಖಾಸಗಿ ಸೇರಿ ಎಲ್ಲ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಿದ್ದಾರೆ. ಆದರೆ, ನಮ್ಮಲ್ಲಿ ಅಂತಹ ಯಾವುದೇ ಯೋಜನೆಗಳನ್ನು ಘೋಷಿಸಿಲ್ಲ ಎಂದು ಸತೀಶ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ, ಆಕ್ಸಿಜನ್ ಕೊರತೆ

ಕೋವಿಡ್ ಮೂರನೇ ಅಲೆ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸಲಹೆ
  ಜಿಲ್ಲೆಯ ಸರ್ಕಾರಿ  ಆಸ್ಪತ್ರೆಗಳಲ್ಲಿ ಸಾಕಷ್ಟು ಬೆಡ್ ಗಳಿವೆ. ಆದರೆ, ಸಿಬ್ಬಂದಿ ಹಾಗೂ ಆಕ್ಸಿಜನ್ ಕೊರತೆ ಇದ್ದು,  ಸರ್ಕಾರ ತಕ್ಷಣ ಸಿಬ್ಬಂದಿ ನೇಮಿಸಿ, ಆಕ್ಸಿಜನ್ ಪೂರೈಸಬೇಕು ಎಂದು  ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ಸರ್ಕಾರ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿದೆ. ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಖಬೇಕೆಂದರು.
ಸರ್ಕಾರಕ್ಕೆ ಸೋಂಕು ತಡೆಗಟ್ಟುವ ಇಚ್ಛಾಶಕ್ತಿಯೇ ಇಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಹಾಗೂ ಆಕ್ಸಿಜನ್ ನೀಡದ ಹೊರತು ಯಾವುದೇ ರೀತಿ ಸೌಲಭ್ಯಗಳನ್ನು ಪಡೆಯಲು ಆಗುವುದಿಲ್ಲ. ಆದ ಕಾರಣ ತಕ್ಷಣ ಸಿಬ್ಬಂದಿ, ಆಕ್ಸಿಜನ್ ನೀಡಬೇಕು ಎಂದು ತಿಳಿಸಿದರು.
ಕೋವಿಡ್ ಎರಡನೇ ಅಲೆ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದೆ.  ಗ್ರಾಮೀಣ ಪ್ರದೇಶಗಳಲ್ಲಿನ ಜನರ ಜಾಗೃತಿ ಮೂಡಿಸದೇ ಇರುವುದು, ಮದುವೆ, ಜಾತ್ರೆ, ಅಂತ್ಯಕ್ರಿಯೆ ಅಂತಹ ಕಾರ್ಯಗಳಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ಕಾರಣವಾಗಿದೆ. ಆದ ಕಾರಣ ಸರ್ಕಾರ ಇವುಗಳನ್ನು ತಡೆಯುವ ನಿಟ್ಟಿನಲ್ಲಿಯೂ ಕ್ರಮ ತೆಗೆದುಕೊಳ್ಳಬೇಕು ಎಂದರು.
 ತಜ್ಞರು ಕೋವಿಡ್ ಮೂರನೇ ಅಲೇ ಇದೆ ಎಂದು ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಆದ ಕಾರಣ 3ನೇ ಅಲೆ  ತಡೆಯಲು ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು.ಕೊರೊನಾ ಸೋಂಕು ನಗರಗಳಲ್ಲಿ ಕ್ರಮೇಣ ಕಡಿಮೆಯಾಗುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಾಗುತ್ತಿದೆ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಜನರ ಜೀವನದ ಬಗ್ಗೆ ಚಿಂತಿಸಬೇಕು ಎಂದು ತಿಳಿಸಿದರು
ಸರ್ಕಾರ ಎಲ್ಲ ಕೆಲಸಗಳನ್ನು ಬಿಟ್ಟು ಕೋವಿಡ್ ನಿಯಂತ್ರಣಕ್ಕೆ ಹೆಚ್ಚು ಒತ್ತು ಕೋಡಬೇಕು. ಜಿಲ್ಲಾಸ್ಪತ್ರೆಗಳು ಅಷ್ಟೇ ಅಲ್ಲದೆ ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಬೆಡ್ ಗಳನ್ನು ಹೆಚ್ಚಿಸಿ, ಆಕ್ಸಿಜನ್ ಪೂರೈಕೆ ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರು,  ಜಿಲ್ಲೆಯ ವಿರೋಧ ಪಕ್ಷದ ಶಾಸಕರು , ಮಾಜಿ ಶಾಸಕರು ಹಾಗೂ ಇನ್ನಿತರ ಚುನಾಯಿತ ಜನಪ್ರತಿನಿಧಿಗಳ ಸಭೆ ಕರೆದು, ಕೊರೊನಾ ನಿಯಂತ್ರಣಕ್ಕೆ ಪರಿಹಾರ ಕಂಡುಕೊಳ್ಳಬೇಕು. ನಾವು ಸಹ ಎಲ್ಲ ರೀತಿಯ ಸಹಕಾರ ನೀಡಲಿದ್ದೇವೆ. ಕೇವಲ ಅಧಿಕಾರಿಗಳೊಂದಿಗೆ ಸಭೆ ಮಾಡುವುದರಿಂದ ಪ್ರಯೋಜನೆ ಆಗುವುದಿಲ್ಲ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button