ಪಾದರಾಯನಪುರದ ಕೈದಿಗಳಲ್ಲೂ ಕೊರೊನಾ ಸೋಂಕು; 35 ಪೊಲೀಸರ ಕ್ವಾರಂಟೈನ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಮನಗರ ಜೈಲಿನಲ್ಲಿರುವ ಬೆಂಗಳೂರಿನ ಪಾದರಾಯನಪುರದ ಕೈದಿಗಳಲ್ಲಿ ಐವರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಈ ವರೆಗೆ ರಾಮನಗರದಲ್ಲಿ ಒಂದೇ ಒಂದು ಕೊರೊನಾ ಸೋಂಕು ಪ್ರಕರಣ ಇರಲಿಲ್ಲ. ಇದೀಗ ಪಾದರಾಯನಪುರದ ಬಂಧಿತ ಆರೋಪಿಗಳಿಂದ ಗ್ರೀನ್ ಝೋನ್ ಆಗಿದ್ದ ರಾಮನಗರಕ್ಕೂ ಕೊರೊನಾ ಹರಡುವಂತಾಗಿದೆ.

ಇಬ್ಬರು ಬಂಧಿತರನ್ನು ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತರನ್ನು ಬೆಂಗಳೂರಿಗೆ ಶಿಫ್ಟ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ಬೆಂಗಳೂರು ಹಾಗೂ ರಾಮನಗರದಲ್ಲಿ ಮಳೆಯಾಗುತ್ತಿರುವುದರಿಂದ ಶಿಫ್ಟ್ ಮಾಡುವುದು ವಿಳಂಬವಾಗುತ್ತಿದೆ.

ಇನ್ನು ಈಗಾಗಲೇ ಆರೋಗ್ಯ ಅಧಿಕಾರಿಗಳು ಜೈಲಿಗೆ ಭೇಟಿ ನೀಡಿದ್ದು ಎಲ್ಲರನ್ನು ಪರೀಕ್ಷೆಗೆ ಒಳಪಡಿಸಲು ಮುಂದಾಗಿದ್ದಾರೆ. ಅಲ್ಲದೇ ಪಾದರಾಯನಪುರದ ಗಲಭೆಕೋರರನ್ನು ಬಂಧಿಸಿ, ರಾಮನಗರ ಜೈಲಿಗೆ ಶಿಫ್ಟ್ ಮಾಡಿರುವ ಸುಮಾರು 35 ಪೊಲೀಸರು ಹಾಗೂ ಅವರ ಕುಟುಂಬದವರನ್ನು ಕ್ವಾರಂಟೈನ್ ಮಾಡಲಾಗಿದೆ.

ಬೆಂಗಳೂರಿನ ಪಾದರಾಯನಪುರದಲ್ಲಿ ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯಕೀಯ ಸಿಬ್ಬಂದಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣ ಸಂಬಂಧ 125 ಆರೋಪಿಗಳನ್ನು ಬಂಧಿಸಲಾಗಿತ್ತು.

ಇವರೆಲ್ಲನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡಿ 25 ಜನರಿಗೆ ಒಂದು ಸೆಲ್ ನಂತೆ ಇರಿಸಲಾಗಿತ್ತು. ಇವರಲ್ಲಿ ಇಬ್ಬರಿಗೆ ಕೊರೊನಾ ಸೋಂಕು ಇರುವುದು ಖಚಿತಗೊಂಡಿದ್ದು, ಒಂದೇ ಸೆಲ್ ನಲ್ಲಿದ್ದ ಎಲ್ಲರಿಗೂ ಹರಡಿರುವ ಸಾಧ್ಯತೆಯಿದೆ.

ಶಂಕಿತ ಪಾದರಾಯನಪುರದ ಜನರನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಸರಕಾರದ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅವರು, ಪೊಲೀಸ್ ಅಧಿಕಾರಿ ಅಲೋಕ್ ಮೋಹನ್ ನನ್ನ ಮೇಲಿನ ಸಿಟ್ಟಿನಿಂದ ಹೀಗಿ ಮಾಡಿದ್ದಾರೆ. ನನ್ನ ಮೇಲೆ ಸಿಟ್ಟಿದ್ದರೆ ಜನರಿಗೇಕೆ ತೊಂದರೆ ಕೊಡಬೇಕು ಎಂದು ಪ್ರಶ್ನಿಸಿದ್ದಾರೆ.

ಇದೀಗ ಪಾದರಾಯನಪುರದ ಕೈದಿಗಳನ್ನು ಹಜ್ ಭವನಕ್ಕೆ ಸ್ಥಳಾಂತರಿಸಲು ಸರಕಾರ ಕ್ರಮ ತೆಗೆದುಕೊಂಡಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button