ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಗರದ ಪಾದುಕಾ ಸಮಾರಾಧನೆ ಸಮಿತಿಯಿಂದ ಇದೇ ದಿ. ೧೦ ರವಿವಾರದಿಂದ ದಿ. ೧೭ ರವರೆಗೆ ಶ್ರೀಮನ್ನ್ಯಾಯಸುಧಾ ಮಂಗಲ ಮಹೋತ್ಸವ ಹಾಗೂ ಶ್ರೀ ಸತ್ಯಪ್ರಮೋದತೀರ್ಥರ ೨೩ ನೇ ಪಾದುಕಾ ಸಮಾರಾಧನಾ ಮಹೋತ್ಸವ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸಂಘದ ಗೌರವಾಧ್ಯಕ್ಷ, ಬ್ರಾಹ್ಮಣ ಸಮಾಜದ ಮುಖಂಡರಾದ ಅನಿಲ ಪೋತದಾರ ಕಾರ‍್ಯಕ್ರಮ ಕುರಿತು ವಿವರಿಸುತ್ತ, ನೆರೆಹಾವಳಿಯಿಂದಾಗಿ ಕರ್ನಾಟಕ, ಕೇರಳ ಅಷ್ಟೇ ಅಲ್ಲದೇ ದೇಶದ ಹಲವು ಭಾಗಗಗಳು ತತ್ತರಿಸಿವೆ. ಇದು ಹೀಗೇಕೆ ಎಂಬುದೇ ಯಕ್ಷಪ್ರಶ್ನೆ. ನೂರಾರು ವರ್ಷಗಳ ಹಿಂದೆ ಇದೇ ರೀತಿಯಾಗಿತ್ತಂತೆ. ಬಹುಶಃ ಸೃಷ್ಟಿ ನಿಯಮದ ಒಂದು ಭಾಗವಿರಬಹುದು. ಈ ಹಿನ್ನೆಲೆಯಲ್ಲಿ ಲೋಕಕಲ್ಯಾಣವಾಗಲೆಂದು, ಶಾಂತಿ, ಪ್ರೇಮ, ನೆಲೆಸುವಂತಾಗಲೆಂದು ಈ ಸತ್ಸಂಗ ಕಾರ‍್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಸುಧಾ ಪದವಿಯನ್ನು ಪಡೆದಿರುವ ಜ್ಞಾನಿಗಳು ಈ ಸಂದರ್ಭದಲ್ಲಿ ಭಾಗವಹಿಸಿಲಿದ್ದು ಇವರನ್ನು ಪಂಡಿತರರೆಂದು ಕರೆಯುತ್ತಾರೆ. ತಮ್ಮ ಉಪನ್ಯಾಸಗಳ ಮೂಲಕ ಸದ್ವಿಚಾರಗಳನ್ನು ಪಂಡಿತರು ಹಂಚಿಕೊಳ್ಳಲಿದ್ದಾರೆ. ಭಜನಾ ಮಂಡಳಿಗಳಿಂದ ಸಾಂಸ್ಕೃತಿಕ ಕಾರ‍್ಯಕ್ರಮಗಳು ಜರುಗಲಿವೆ ಎಂದು ಅವರು ಹೇಳಿದರು.
ಯಾರಿಂದಲೂ ಧನಸಹಾವನ್ನು ಆಪೇಕ್ಷಿಸದೇ ಸಂಘದ ಸದಸ್ಯರಿಂದ ಕೂಡಿದ ಹಣದಿಂದ ಮಾತ್ರವೇ ಈ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪರಊರಿನಿಂದ ಬರುವ ಅತಿಥಿಗಳಿಗಾಗಿ ಸಮಾಜ ಬಾಂಧವರ ಮನೆಗಳಲ್ಲಿ ಹಾಗೂ ಬ್ರಾಹ್ಮಣ ಧರ್ಮಶಾಲೆಯಲ್ಲಿ ಹಾಗು ಬಿಕೆ ಮಾಡೆಲ್ ಶಾಲೆಯಲ್ಲಿ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ. ಒಟ್ಟಿನಲ್ಲಿ ಇಂದಿನ ಯುವ ಪಿಳಿಗೆಗೆ ಸತ್ಸಂಗ, ಸದ್ವಿಚಾರಗಳಿಂದ ಒಳ್ಳೆಯ ಸಂಸ್ಕಾರ ನೀಡುವುದೇ ಈ ಕಾರ‍್ಯಕ್ರಮಗಳ ಉದ್ದೇಶವಾಗಿದೆ. ಇದರಿಂದ ದೇಶಕ್ಕೆ ಸತ್ಪ್ರಜೆಯನ್ನು ನೀಡಿದಂತಾಗುತ್ತದೆ ಎಂದು ಅವರು ಹೇಳಿದರು.
ಪಂ. ಪ್ರಮೋದಾಚಾರ್ಯ ಕಟ್ಟಿ ಹಾಗೂ ಡಾ. ಶ್ರೀಧರ ಹುಕ್ಕೇರಿ ಇವರು ಮಾತನಾಡಿ, ಸಮಾಜದ ಎಲ್ಲ ಬಾಂಧವರಿಗೂ ಉಪಯುಕ್ತವಾಗುವಂತಹ ಅನೇಕ ವಿಚಾರಗಳ ಗೋಷ್ಠಿಗಳು, ವ್ಯಾಸಸಾಹಿತ್ಯ ಹಾಗೂ ದಾಸಸಾಹಿತ್ಯಗಳ ಅರ್ಥಪೂರ್ಣ ಚರ್ಚಾಕೂಟಗಳು, ಪ್ರವಚನಗಳು ಅಲ್ಲದೇ ಈಗ ದೇಶವು ವಿವಿಧ ಕಡೆಗಳಲ್ಲಿ ಎದುರಿಸುತ್ತಿರುವ ಪ್ರಕೃತಿ ವಿಕೋಪಗಳಿಂದ ತತ್ತರಿಸಿ ಹೋಗಿರುವ ಹಿನ್ನೆಲೆಯಲ್ಲಿ ಎಲ್ಲ ಜನರಿಗೆ ಸುಖ ಸಂತೋಷ ದೊರೆಯಲು, ಜನರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸಲು ವಿಶಿಷ್ಟ ಹೋಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ ಅವರು ಶ್ರೀ ನ್ಯಾಯಸುಧಾ ಮಂಗಲ ಮಹೋತ್ಸವ ಕುರಿತು ವಿವರಿಸಿದರು.
ಆರ್. ಎಸ್. ಜಕಾತಿ, ರಾಜೀವ ಜೋಶಿ, ರಾಜೇಂದ್ರ ಕುಲಕರ್ಣಿ. ಅರವಿಂದ ತೇಲಂಗ ಹಾಗೂ ಅರವಿಂದ ಹುನಗುಂದ ಉಪಸ್ಥಿತರಿದ್ದರು.
ಅಧ್ಯಕ್ಷರಾದ ಶ್ರೀನಿವಾಸ ಶಿವಣಗಿ ವಂದಿಸಿದರು. ಡಾ. ಶೈಲಜಾ ಕುಲಕರ್ಣಿ ನಿರೂಪಿಸಿದರು.
ನ. 10 ರಿಂದ 17 ರವರೆಗೆ ಪಾದುಕಾ ಮಹಾ ಸಮಾರಾಧನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ