
ಎಂ.ಕೆ.ಹೆಗಡೆ, ಬೆಳಗಾವಿ – ಇಲ್ಲಿಯ ಯುವ ಅಧಿಕಾರಿಗಳಿಬ್ಬರ ಸಹಯೋಗದಲ್ಲಿ ನಡೆದ ವ್ಯವಸ್ಥಿತ, ಅಚ್ಚುಕಟ್ಟಾದ ಕೆಲಸ ಇಡೀ ದೇಶಕ್ಕೇ ಮಾದರಿಯಾಗಿ, ಕರ್ನಾಟಕಕ್ಕೆ ಮತ್ತು ಬೆಳಗಾವಿಗೆ ಕೀರ್ತಿ ತಂದಿದೆ.

ಕೊರೋನಾ ಸಂಕಷ್ಟದಿಂದಾಗಿ ಇಡೀ ವಿಶ್ವವೇ ಸಂಕಷ್ಟದಲ್ಲಿ ಸಿಲುಕಿರುವ ಸಂದರ್ಭದಲ್ಲಿ ಬೆಳಗಾವಿಯ ಅಧಿಕಾರಿಗಳಿಬ್ಬರು ವಿಶಿಷ್ಟ ಮತ್ತು ಯೋಜಿತ ರೀತಿಯಲ್ಲಿ ಮಾಡಿದ ಕೆಲಸ ಕೊರೋನಾ ಹೆಮ್ಮಾರಿ ದೊಡ್ಡ ಪ್ರಮಾಣದಲ್ಲಿ ಅಪ್ಪಳಿಸುವುದನ್ನು ತಡೆದಿದೆ. ಜೊತೆಗೆ ಜನರೂ ಹೆಚ್ಚಿನ ಸಂಕಷ್ಟವಿಲ್ಲದೆ ತಮ್ಮ ಕೆಲಸ ಪೂರ್ಣಗೊಳಿಸಲು ಕಾರಣವಾಗಿದೆ.

ಬೆಳಗಾವಿ ಮೂಲಕ ಹಾಯ್ದು ಹೋಗುವ ರಾಷ್ಟ್ರೀಯ ಹೆದ್ದಾರಿ 4ರ ಕೊಗನೋಳಿ (ಬೆಳಗಾವಿ- ಮಹಾರಾಷ್ಟ್ರ ಗಡಿ) ಚೆಕ್ ಪೋಸ್ಟ್ ಅತ್ಯಂತ ಪ್ರಮುಖವಾದ ಸ್ಥಳ. ಹೈದರಾಬಾದ್ ಕರ್ನಾಟಕ ಹೊರತುಪಡಿಸಿದರೆ ಇಡೀ ರಾಜ್ಯಕ್ಕೆ ಮತ್ತು 3 -4 ರಾಜ್ಯಗಳನ್ನು ಹೊರತುಪಡಿಸಿದರೆ ಕೇರಳ, ತಮಿಳುನಾಡು, ಉತ್ತರ ಭಾರತ ಸೇರಿದಂತೆ ಬಹುತೇಕ ಇಡೀ ದೇಶಕ್ಕೇ ಇದು ಹೆಬ್ಬಾಗಿಲಿನಂತಿದೆ.
200ಕ್ಕೂ ಹೆಚ್ಚು ಸಿಬ್ಬಂದಿ

ಎರಡನೇ ಹಂತದ ಲಾಕ್ ಡೌನ್ ಮುಗಿದು ಯಾವಾಗ ಅಂತಾರಾಜ್ಯ ಪ್ರವೇಶ ಆರಂಭವಾಯಿತೋ ಅಂದಿನಿಂದ ನಿರಂತರವಾಗಿ ವಾಹನ ಮತ್ತು ಜನರ ಪ್ರವೇಶ ಹೆಚ್ಚತೊಡಗಿತು. ದಿನವೊಂದಕ್ಕೆ 300ರ ವರೆಗೆ ವಾಹನಗಳು, 2 ಸಾವಿರಕ್ಕಿಂತ ಹೆಚ್ಚು ಜನರು ಗಡಿ ಪ್ರವೇಶಿಸಲು ಬರುತ್ತಿದ್ದಾರೆ. ಇದರಲ್ಲಿ ರಾಜ್ಯದವರಷ್ಟೇ ಅಲ್ಲ ಉತ್ತರ ಭಾರತದ ಜನರೂ, ವಾಹನಗಳೂ ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ.
ಇವುಗಳ ನಿಯಂತ್ರಣ ಸುಲಭವಲ್ಲ. ಆದರೆ ಈ ಇಬ್ಬರು ಅಧಿಕಾರಿಗಳ ನೇತೃತ್ವದಲ್ಲಿ ಮಾಡಿದ ಅಚ್ಚುಕಟ್ಟು ವ್ಯವಸ್ಥೆ ಎಲ್ಲೆಡೆ ಪ್ರಶಂಸೆಗೆ ಕಾರಣವಾಗಿದ್ದಲ್ಲದೆ, ಪ್ರಯಾಣಿಕರೂ ದೊಡ್ಡ ಪ್ರಮಾಣದಲ್ಲಿ ತೊಂದರೆ ಅನುಭವಿಸದಂತೆ ಮಾಡಿದೆ. ಇದು ಇಡೀ ದೇಶಕ್ಕೇ ಮಾದರಿ ವ್ಯವಸ್ಥೆ ಎನಿಸಿದೆ. ತಮಿಳುನಾಡು ಸೇರಿದಂತೆ ಕೆಲವು ರಾಜ್ಯಗಳು ಇದೀಗ ಇಲ್ಲಿ ಮಾಡಿದ ವ್ಯವಸ್ಥೆಯನ್ನೇ ಅನುಸರಿಸುತ್ತಿವೆ.
ಕಮಲ್ ಪಂತ್ ತಮ್ಮ ಪತ್ರದಲ್ಲಿ, ಕೇವಲ ಸಾಮಾಜಿಕ ಅಂತರ ಕಾಪಾಡುವ ವಿಷಯದಲ್ಲಷ್ಟೇ ಅಲ್ಲ, ಪ್ರಯಾಣಿಕರು ಯಾವುದೇ ಪರದಾಟವಿಲ್ಲದೆ ತಮ್ಮ ನೊಂದಣಿ ಪ್ರಕ್ರಿಯೆ ನಡೆಸುವುದಕ್ಕೂ ಸುಲಲಿತವಾದ ವ್ಯವಸ್ಥೆ ಪ್ರಶಂಸನೀಯ ಎಂದಿದ್ದಾರೆ. ಗುಪ್ತ ವಾರ್ತೆ ವಿಭಾಗದವರು ಈ ರೀತಿ ಬಹಿರಂಗವಾಗಿ ಪ್ರಶಂಸಿಸುವುದು ಅಪರೂಪ.
3 ಚೆಕ್ ಪೋಸ್ಟ್

3ನೇ ಚೆಕ್ ಪೋಸ್ಟ್ ನಲ್ಲಿ 3 ಸಾಲು ವ್ಯವಸ್ಥೆ ಮಾಡಿ ಕಾರವಾರ, ಬೆಂಗಳೂರು ಕಡೆ ಹೋಗುವ ವಾಹನಕ್ಕೆ ಒಂದು ಸಾಲು, ಮಂಗಳೂರು ಕಡೆ ಹೋಗುವ ವಾಹನಕ್ಕೆ ಒಂದು ಸಾಲು ಮತ್ತು ಬಳ್ಳಾರಿ ಭಾಗಕ್ಕೆ ಸೀಮಿತವಾದ ವಾಹನಗಳಿಗೆ ಒಂದು ಸಾಲು ವ್ಯವಸ್ಥೆ ಮಾಡಲಾಗಿದೆ.
ಪ್ರತಿ 10 -15 ವಾಹನಕ್ಕೆ ಒಂದೊಂದು ಎಸ್ಕಾರ್ಟ್ ವಾಹನದ ವ್ಯವಸ್ಥೆ ಮಾಡಿ ಜಿಲ್ಲೆಯ ಗಡಿವರೆಗೂ ಹೋಗು ಮತ್ತೊಂದು ಜಿಲ್ಲೆಗೆ ಹಸ್ತಾಂತರಿಸುವವರೆಗೂ ಕೆಲಸ ನಿರ್ವಹಿಸಲಾಗುತ್ತಿದೆ. ಇಲ್ಲಿಂದ ಹೊರಟವರು ಬೇರೆ ಎಲ್ಲೂ ಡೈವರ್ಟ್ ಆಗಂದತೆ ನಿಗಾವಹಿಸಲಾಗುತ್ತಿದೆ. ಇದಕ್ಕೆ ಸಾರಿಗೆ, ಕಂದಾಯ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳೂ ಸಾಥ್ ನೀಡುತ್ತಿದ್ದಾರೆ.
ಇದರ ಜೊತೆಗೆ ಗೋವಾ ರಾಜ್ಯದಿಂದ ಪ್ರವೇಶಿಸುವ ಕಣಕುಂಬಿ ಚೆಕ್ ಪೋಸ್ಟ್ ನಲ್ಲಿ ಕೂಡ ವಲಸೆ ಕಾರ್ಮಿಕರ ದೊಡ್ಡ ದಂಡೇ ರಾಜ್ಯವನ್ನು ಪ್ರವೇಶಿಸುತ್ತಿತ್ತು. ಇಲ್ಲಿ ಕೂಡ ಬೈಲಹೊಂಗಲ ಡಿವೈಎಸ್ಪಿ ನೇತೃತ್ವದಲ್ಲಿ 150ಕ್ಕಿಂತ ಹೆಚ್ಚಿನ ಸಿಬ್ಬಂದಿ ಪಾಳಿ ಪ್ರಕಾರ ದಿನದ 24 ಗಂಟೆ ಕೆಲಸ ನಿರ್ವಹಿಸುತ್ತಿದ್ದಾರೆ.
ಕರ್ತವ್ಯದೊಂದಿಗೆ ಮಾನವೀಯತೆ

ಮೇ 3ರಂದು ಆಜ್ಮೀರ್ ದಿಂದ 38 ಜನರು ಪ್ರವೇಶಿಸಲು ಯತ್ನಿಸಿ, ನಂತರ ಕಳ್ಳ ಮಾರ್ಗದಲ್ಲಿ ಬಂದು ಅನಾಹುತ ಸೃಷ್ಟಿಸಿದ ನಂತರವಂತೂ ಅಧಿಕಾರಿಗಳು ಕಣ್ಣಿನಲ್ಲಿ ಕಣ್ಣಿಟ್ಟು ಕಾಯತೊಡಗಿದ್ದಾರೆ.
ಇದರ ಜೊತೆಗೆ ಇಂತಹ ಸಂದರ್ಭದಲ್ಲಿ ಮಾನವೀಯತೆಯೂ ಬಹಳ ದೊಡ್ಡದು. ಕೆಲವು ಗರ್ಭಿಣಿಯರು, ವಯೋವೃದ್ದರು, ಕಾಯಿಲೆ ಉಳ್ಳವರು, ವಿಕಲಚೇತನರು, ಎಳೆಯ ಮಕ್ಕಳೂ ಬರುತ್ತಿದ್ದರು. ಅವರಿಗೆಲ್ಲ ಮಾನವೀಯತೆ ತೋರಿಸಿ, ಸ್ವಲ್ಪವೂ ತೊಂದರೆಯಾಗದಂತೆ ಬಹಳ ವ್ಯವಸ್ಥಿತವಾಗಿ, ವಿವಾದಕ್ಕೂ ಆಸ್ಪದವಾಗದಂತೆ ನೋಡಿಕೊಳ್ಳುವಲ್ಲಿ ಪೊಲೀಸ್ ತಂಡ ಬಹಳ ದೊಡ್ಡ ಕೆಲಸ ಮಾಡಿದೆ.

ರಾಜ್ಯ ಗುಪ್ತ ಇಲಾಖೆಯ ಹೆಚ್ಚುವರಿ ಆರಕ್ಷಕ ಮಹಾನಿರ್ದೇಶಕ ಕಮಲ್ ಪಂತ್ ಅವರ ಪ್ರಶಂಸೆಗೆ ಇಲ್ಲಿನ ಅಧಿಕಾರಿಗಳು ನಿಜಕ್ಕೂ ಪಾತ್ರರಾಗಿದ್ದಾರೆ. ಇವರ ಕಾರ್ಯವನ್ನು ಅವರು ಗುರುತಿಸಿರುವುದು ಕೂಡ ಮೆಚ್ಚುವಂತದ್ದೇ.
ನಮ್ಮ ತಂಡ ಎಲ್ಲಿಯೂ ಎಡವದಂತೆ ಕಾರ್ಯ ನಿರ್ವಹಿಸುತ್ತಿದೆ. ಇದು ಬೇರೆ ಬೇರೆ ರಾಜ್ಯಗಳಿಗೆ ಮಾದರಿಯಾಗಿರುವುದು ನಮಗೆ ಸಂತೃಪ್ತಿ ತಂದಿದೆ. ನಮ್ಮ ಕಾರ್ಯಕ್ಕೆ ಕಮಲ್ ಪಂತ್ ಅವರ ಪ್ರಶಂಸೆ ಸಿಕ್ಕಿರುವುದು ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಅವರಿಗೆಲ್ಲ ಮತ್ತು ಸಹಕರಿಸುತ್ತಿರುವ ಜನರಿಗೆ ನಾವು ಧನ್ಯವಾದ ಸಲ್ಲಿಸುತ್ತೇವೆ. ಇನ್ನು ಮುಂದೆಯೂ ಇಂತಹ ಸಹಕಾರವನ್ನು ಬಯಸುತ್ತೇವೆ.-ಲಕ್ಷ್ಮಣ ನಿಂಬರ್ಗಿ, ಎಸ್ಪಿ-ಅಮರನಾಥ ರೆಡ್ಡಿ, ಎಎಸ್ಪಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ