*ಅರಮನೆ ಜಾಗ ಸರ್ಕಾರದ್ದು, ಅಂಬಾರಿಗೆ ಹಣ ಕೊಡುತ್ತೇವೆ*: *ಪ್ರಮೋದಾದೇವಿ ಆರೋಪಕ್ಕೆ ಯತೀಂದ್ರ ತಿರುಗೇಟು*

ಪ್ರಗತಿವಾಹಿನಿ ಸುದ್ದಿ: ಮೈಸೂರು ದಸರಾ ಆಚರಣೆ ವಿಚಾರವಾಗಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ವ್ಯಕ್ತಪಡಿಸಿರುವ ಅಸಮಾಧಾನಕ್ಕೆ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅರಮನೆ ಬೋರ್ಡ್ ಮತ್ತು ಅರಮನೆ ಜಾಗ ಸರ್ಕಾರಕ್ಕೆ ಸೇರಿದ್ದು, ರಾಜಮನೆತನದ ವಾಸ್ತವ್ಯಕ್ಕೆ ಒಂದಿಷ್ಟು ಜಾಗ ನೀಡಲಾಗಿದೆ ಎಂದು ಹೇಳಿದ್ದಾರೆ. ಅಂಬಾರಿಯನ್ನು ಉಚಿತವಾಗಿ ಪಡೆಯುತ್ತಿಲ್ಲ, ಅದಕ್ಕೂ ಸರ್ಕಾರ ಹಣ ಪಾವತಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಮೋದಾದೇವಿ ಒಡೆಯರ್ಗೆ ಏನಾದರೂ ಸಮಸ್ಯೆಗಳಿದ್ದರೆ ಸರ್ಕಾರದ ಗಮನಕ್ಕೆ ನೇರವಾಗಿ ತರಬಹುದಿತ್ತು. ಸರ್ಕಾರ ನಿರಂತರವಾಗಿ ರಾಜಮನೆತನದ ಸಂಪರ್ಕದಲ್ಲಿತ್ತು. ಸಮಸ್ಯೆಗಳನ್ನು ತಿಳಿಸದೆ ಏಕಾಏಕಿ ಮಾಧ್ಯಮಗಳಿಗೆ ಪತ್ರ ನೀಡಿದ್ದು ಸರಿಯಲ್ಲ ಎಂದು ಯತೀಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಗತ್ಯವಿದ್ದರೆ ಸರ್ಕಾರದ ಪ್ರತಿನಿಧಿಗಳನ್ನು ಕಳುಹಿಸಿ ಸಮಸ್ಯೆಗಳ ಕುರಿತು ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.
ಅಂಬಾರಿ ಹೊರುವ ಆನೆಯ ಆಯ್ಕೆ ವಿಚಾರವಾಗಿ ಮಾತನಾಡಿದ ಯತೀಂದ್ರ, ಪ್ರಮೋದಾದೇವಿ ಒಡೆಯರ್ ವ್ಯಕ್ತಪಡಿಸಿರುವ ಎಲ್ಲ ಅಭಿಪ್ರಾಯಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ. ಏಳು ದಿನಗಳ ಕಾಲ ದಸರಾ ಆಚರಣೆಯನ್ನು ರಾಜಮನೆತನದ ಆಶಯದಂತೆ ನಡೆಸಲು ಸಾಧ್ಯವಿಲ್ಲ. ಸರ್ಕಾರಿ ದಸರೆಗೆ ಯಾವುದೇ ಮಹತ್ವವಿಲ್ಲ ಎಂಬ ರೀತಿಯ ಹೇಳಿಕೆಯನ್ನೂ ಒಪ್ಪಲಾಗದು. ಸರ್ಕಾರದ ದಸರಾಕ್ಕೂ ತನ್ನದೇ ಆದ ಇತಿಹಾಸವಿದೆ ಎಂದು ಹೇಳಿದ್ದಾರೆ.
ಅಂಬಾರಿ ಆನೆಯ ಆಯ್ಕೆ ಕೊನೆಯ ಕ್ಷಣದಲ್ಲಿ ನಡೆದಿದ್ದರಿಂದ ಸ್ವಲ್ಪ ಗೊಂದಲ ಉಂಟಾಗಿತ್ತು ಎಂದು ಯತೀಂದ್ರ ವಿವರಿಸಿದ್ದಾರೆ. ಆರಂಭದಲ್ಲಿ ಮಹೇಂದ್ರ ಮತ್ತು ಧನಂಜಯ ಆನೆಗಳ ಹೆಸರು ಪ್ರಸ್ತಾಪವಾಗಿತ್ತು. ಬಳಿಕ ಪ್ರಶಾಂತ್ ಹೆಸರನ್ನು ಅಂತಿಮಗೊಳಿಸಲಾಯಿತು. ಈ ಪ್ರಕ್ರಿಯೆಯಲ್ಲಿ ಗೊಂದಲ ಇದ್ದ ಕಾರಣ ಆನೆ ಆಯ್ಕೆ ವಿಳಂಬವಾಯಿತು ಎಂದು ತಿಳಿಸಿದ್ದಾರೆ.
ಇತ್ತ ಪ್ರಮೋದಾದೇವಿ ಒಡೆಯರ್ ಅಸಮಾಧಾನದ ಕುರಿತು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಕೂಡ ಪ್ರತಿಕ್ರಿಯಿಸಿದ್ದಾರೆ. ರಾಜಮನೆತನವನ್ನು ಧಿಕ್ಕರಿಸಿ ಸರ್ಕಾರ ಯಾವುದೇ ಕಾರ್ಯಕ್ರಮ ನಡೆಸಿಲ್ಲ. ಹಿಂದಿನಿಂದ ನಡೆದುಬಂದ ಸಂಪ್ರದಾಯವನ್ನೇ ಮುಖ್ಯಮಂತ್ರಿ ಪಾಲಿಸಿದ್ದಾರೆ. ಸಂಪ್ರದಾಯ ಮೀರಿ ಯಾವುದೇ ಕಾರ್ಯಕ್ರಮ ಆಯೋಜಿಸಿಲ್ಲ ಎಂದು ಹೇಳಿದ್ದಾರೆ.
ಪ್ರಮೋದಾದೇವಿ ಒಡೆಯರ್ ಬೇಸರಪಡುವ ಅಗತ್ಯವಿಲ್ಲ. ಏನಾದರೂ ಅಸಮಾಧಾನವಿದ್ದರೆ ಸರ್ಕಾರದ ಪರವಾಗಿ ಭೇಟಿ ನೀಡಿ ಮಾತುಕತೆ ನಡೆಸುತ್ತೇವೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಇದಕ್ಕೂ ಮೊದಲು ಪ್ರಮೋದಾದೇವಿ ಒಡೆಯರ್, ಕಳೆದ 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಂಬಾರಿ ಹೊರುವ ಆನೆಯ ಆಯ್ಕೆ ಬಗ್ಗೆ ಕೊನೆಯ ಕ್ಷಣದವರೆಗೂ ಮಾಹಿತಿ ನೀಡಿರಲಿಲ್ಲ ಎಂದು ಆರೋಪಿಸಿದ್ದರು. ಒಂದು ವಾರ ಮುಂಚಿತವಾಗಿ ಮಾಹಿತಿ ನೀಡುವಂತೆ ಕೇಳಿದ್ದರೂ ತಿಳಿಸಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಜೊತೆಗೆ, ಮೊದಲ ದಿನದಿಂದ ಏಳನೇ ದಿನದವರೆಗೆ ಸರ್ಕಾರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ, ಆಯುಧ ಪೂಜೆ ಮತ್ತು ವಿಜಯದಶಮಿ ದಿನ ಅರಮನೆಯ ಆವರಣವನ್ನು ರಾಜಮನೆತನದ ಆಚರಣೆಗಳಿಗೆ ಮುಕ್ತವಾಗಿಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



