Latest

*ಪಂಚಮಸಾಲಿ ಸಮುದಾಯದ ಹೋರಾಟಕ್ಕೆ ತೆರೆ; ಭಾವುಕರಾಗಿ ಕಣ್ಣೀರಿಟ್ಟ ಬಸವಜಯ ಮೃತ್ಯುಂಜಯ ಸ್ವಾಮೀಜಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 2ಎ ಮೀಸಲಾತಿಗಾಗಿ ಆಗ್ರಹಿಸಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದ ಪಂಚಮಸಾಲಿ ಸಮುದಾಯದ ಹೋರಾಟ ಕೊನೆಗೊಂಡಿದೆ.

ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರ್ಕಾರ 2D ಅಡಿಯಲ್ಲಿ ಶೇ.7ರಷ್ಟು ಮೀಸಲಾತಿಯನ್ನು ನೀಡಿ ಆದೇಶ ಹೊರಡಿಸಿದೆ. ಆದರೆ ಸಮುದಾಯದ ಮುಖಂಡರು ಶೇ.15ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸಿದ್ದಾರೆ. ಚುನಾವಣೆ ತಂತ್ರಕ್ಕಾಗಿ ಸರ್ಕಾರ 2Dಹೆಸರಲ್ಲಿ ಶೇ.7ರಷ್ಟು ಮೀಶಲಾತಿ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಸಮುದಾಯದ ಜನರು ಪ್ರಮುಖವಾಗಿ ಇಡೀ ಉತ್ತರ ಕರ್ನಾಟಕದ ಭಾಗದ ಜನರು ಕಳೆದ ಎರಡು ವರ್ಷಗಳಿಂದ ಊಟದ ಬುತ್ತಿ ತೆಗೆದುಕೊಂಡು ಮನೆ ಮಠ ಬಿಟ್ಟು ಮೀಸಲಾತಿಗಾಗಿ ಆಗ್ರಹಿಸಿ ನನ್ನೊಂದಿಗೆ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯದ ಯಾವ ಸ್ವಾಮೀಜಿಗೂ ಸಿಗದ ದೊಡ್ಡ ಮಟ್ಟದಲ್ಲಿ ಜನ ನನ್ನ ಬೆಂಬಲಿಸಿದ್ದಾರೆ. ಕಾರಣ ನಮ್ಮ ಸಮುದಾಯದ ಸ್ವಾಮೀಜಿ ಪ್ರಾಮಾಣಿಕವಾಗಿ ಹೋರಾಟ ನಡೆಸುತ್ತಿದ್ದಾರೆ ಎಂಬುದನ್ನು ಅರಿತು ನನ್ನೊಂದಿಗೆ ಹೋರಾಟ ನಡೆಸಿದ್ದಾರೆ ಎಂದು ಕಣ್ಣೀರಾದರು.

ಇಷ್ಟು ವರ್ಷಗಳ ನಿರಂತರ ಹೋರಾಟದ ಪರಿಣಾಮವಾಗಿ ಪಂಚಮಸಾಲಿ ಸಮುದಾಯಕ್ಕೆ ಸ್ವಲ್ಪಮಟ್ಟಿನ ಮೀಸಲಾತಿ ನೀಡಿದ್ದಾರೆ. ನಮ್ಮ ಹೋರಾಟಕ್ಕೆ ಮೊದಲ ಹೆಜ್ಜೆಯ ಸಾಧನೆಯಾಗಿ ಶೇ.7ರಷ್ಟು ಮೀಸಲಾತಿ ಸಿಕ್ಕಿದೆ. ಸರ್ಕಾರ ಶೇ.7ರಷ್ಟು ಮೀಸಲಾತಿ ಘೋಷಿಸಿದೆ. ಮುಂದಿನ ದಿನಗಳಲ್ಲಿ ಯಾವ ಸರ್ಕಾರ ಬರಲಿದೆ ಎಂಬುದನ್ನು ನೋಡಿಕೊಂಡು ಎಲ್ಲರೂ ಚರ್ಚೆ ನಡೆಸಿ ಮತ್ತೆ ಹೋರಾಟ ನಡೆಸೋಣ ಸಧ್ಯಕ್ಕೆ ಹೋರಾಟ ಇಲ್ಲಿಗೆ ನಿಲ್ಲುಸೋಣ ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button