*ನಾಳೆಯಿಂದ ಮತ್ತೆ ಪಂಚಮಸಾಲಿಮೀಸಲಾತಿ ಹೋರಾಟ ಆರಂಭ; ನಿಪ್ಪಾಣಿಯಲ್ಲಿ ಇಷ್ಟಲಿಂಗ ಪೂಜೆಯೊಂದಿಗೆ ಬೃಹತ್ ರ್ಯಾಲಿಗೆ ಸಿದ್ಧತೆ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪಂಚಮಸಾಲಿ 2A ಮೀಸಲಾತಿಗೆ ಆಗ್ರಹಿಸಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮತ್ತೊಮ್ಮೆ ಹೋರಾಟಕ್ಕೆ ಮುಂದಾಗಿದ್ದು, ಸೆ.10ರಿಂದ ನಿಪ್ಪಾಣಿಯಿಂದ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಲಿಂಗಾಯತ ಪಂಚಮಸಾಲಿ 2A ಹಾಗೂ ಲಿಂಗಾಯತರಿಗೆ obc ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಸೆಪ್ಟೆಂಬರ್ 10 ಭಾನುವಾರ ನಿಪ್ಪಾಣಿಯಲ್ಲಿ ಬೆಳಿಗ್ಗೆ 10 ಕ್ಕೆ ಬೆಳಗಾವಿ ಜಿಲ್ಲಾ ಮಟ್ಟದ ಸಾಮೂಹಿಕ ಇಷ್ಟಲಿಂಗ ಪೂಜೆಯೊಂದಿಗೆ ಹೋರಾಟ ಆರಂಭವಾಗಲಿದೆ.
ಕೂಡಲ ಸಂಗಮದ ಪಂಚಮಸಾಲಿ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಹೋರಾಟಕ್ಕೆ ಕರೆ ನೀಡಲಾಗಿದೆ.
ಪಂಚಮಸಾಲಿ- ಚತುರ್ಥ ಲಿಂಗಾಯತರಿಗೆ ರಾಜ್ಯ ಸರ್ಕಾರವು 2A ಮೀಸಲಾತಿ ಅನುಷ್ಠಾನಕ್ಕೆ ಹಾಗೂ ಲಿಂಗಾಯತ ಉಪ ಸಮಾಜಗಳನ್ನು ಕೇಂದ್ರ ಸರ್ಕಾರದ OBC ಮೀಸಲಾತಿಗೆ ಸೇರ್ಪಡೆಗೊಳಿಸಿ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯಿಸಿ ಗಡಿನಾಡು ನಿಪ್ಪಾಣಿಯಿಂದ ರಾಜ್ಯಾದ್ಯಂತ ಹೋರಾಟ ಆರಂಭವಾಗಲಿದ್ದು, ಇದು ಪಂಚಮಸಾಲಿ 6 ನೇ ಹಂತದ ಚಳವಳಿಯಾಗಿದೆ.
ನಿಪ್ಪಾಣಿಯ ಛತ್ರಪತಿ ಶಿವಾಜಿ ಮಹಾರಾಜರ ಸಂಸ್ಕೃತಿ ಭವನದಿಂದ ಬೃಹತ್ ರ್ಯಾಲಿ ಯೊಂದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಾವಿ ಜಿಲ್ಲಾ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಶ್ರಾವಣ ಮಾಸದ ಪ್ರಯುಕ್ತ ಸಾಮೂಹಿಕ ಇಷ್ಟಲಿಂಗ ಮಹಾಪೂಜೆಯೊಂದಿಗೆ ಹೋರಾಟಕ್ಕೆ ಸಿದ್ಧತೆ ನಡೆಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ