
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಜೂನ್ 27 ರಂದು ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿರುವ ಮುಖ್ಯಮಂತ್ರಿ ನಿವಾಸದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಹಲವಾರು ಬಾರಿ ಹೋರಾಟ ಮಾಡಿದರೂ ಮುಖ್ಯಮಂತ್ರಿಗಳು ಭರವಸೆ ನೀಡಿ ವಿನಾಕಾರಣ ಕಾಲಹರಣ ಮಾಡುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ನಮ್ಮ ನಾಯಕರನ್ನು ಕರೆಸಿ ಮಾತುಕತೆ ಮಾಡಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಉತ್ತರವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದರು.



ಹಿಂದುಳಿದ ಆಯೋಗ ಸಮೀಕ್ಷೆ ಮಾಡಿ ವರದಿ ನೀಡಿದ್ದರೆ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಸಿಗುತ್ತಿತ್ತು. ಅವರು ಚುನಾವಣೆ, ಕೊರೊನಾ ಸೋಂಕಿನ ಭೀತಿಯಿಂದ ವಿಳಂಬ ಮಾಡಿದ್ದಾರೆ ಎಂದರು.
ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ, ಮಾಜಿ ಸಚಿವರಾದ ಎ.ಬಿ.ಪಾಟೀಲ, ವಿನಯ ಕುಲಕರ್ಣಿ, ಎಂ.ಬಿ.ಜಿರಲಿ, ರೋಹಿಣಿ ಪಾಟೀಲ, ಅಡಿವೇಶ ಇಟಗಿ ಮೊದಲಾದವರು ಉಪಸ್ಥಿತರಿದ್ದರು.