
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಗಂದಿಗವಾಡ ಗ್ರಾಮದಲ್ಲಿ ಪಂಚಮಸಾಲಿ ಸಮುದಾಯಕ್ಕೆ “೨ ಎ” ಮೀಸಲಾತಿಯನ್ನು ಒದಗಿಸುವ ನಿಟ್ಟಿನಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯದ ಹಕ್ಕೊತ್ತಾಯ ಸಮಾವೇಶ ಸಡಗರ ಸಂಭ್ರಮಗಳಿಂದ ಸಂಪನ್ನಗೊಂಡಿತು.
ಸಮಾವೇಶದ ಅಂಗವಾಗಿ ಗಂದಿಗವಾಡ ಗ್ರಾಮದ ಬಸವೇಶ್ವರ ವೃತ್ತದಿಂದ ಪರಂಜ್ಯೋತಿ ಪ್ರೌಢಶಾಲೆಯ ಮೈದಾನದವರೆಗೆ ಬಸವೇಶ್ವರರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ವಾದ್ಯ ಮೇಳಗಳು, ಪೂರ್ಣಕುಂಭ ಹೊತ್ತ ಸುಮಂಗಲೆಯರು, ಪಂಚಮಸಾಲಿ ಸಮುದಾಯದ ನಾಗರಿಕರು, ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಗಂದಿಗವಾಡ ಮತ್ತು ಸುತ್ತಮುತ್ತಲಿನ ಭಾಗಗಳ ನಾಗರಿಕರು ಬಹುಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಮೆರವಣಿಗೆ ವೇದಿಕೆ ತಲುಪಿದ ಬಳಿಕ ಸಮಾವೇಶವನ್ನು ರಾಣಿ ಚನ್ನಮ್ಮ, ಅಕ್ಕಮಹಾದೇವಿ, ರಾಯಣ್ಣನ ಪಾತ್ರಧಾರಿ ಪುಟಾಣಿಗಳು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಸಮಾವೇಶದ ಸಾನಿಧ್ಯ ವಹಿಸಿ ಮಾತನಾಡಿದ ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಮಹಾಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಲು ರಾಜ್ಯ ಸರ‍್ಕಾರಕ್ಕೆ ಡಿ.೧೯ರ ಗಡಿಯನ್ನು ನೀಡಲಾಗಿದೆ. ಈಗಾಗಲೇ ಹಲವು ಬಾರಿ ರಾಜ್ಯದ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸಮುದಾಯಕ್ಕೆ ೨ ಎ ಮೀಸಲಾತಿ ನೀಡುವಂತೆ ಆಗ್ರಹಿಸಲಾಗಿದೆ. ಕಳೆದ ೨ ವರ್ಷಗಳಿಂದ ಈ ಹೋರಾಟ ನಿರಂತರವಾಗಿ ನಡೆದಿದ್ದು, ಡಿ.೧೯ರ ಒಳಗೆ ರಾಜ್ಯ ಸರ‍್ಕಾರ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಘೋಷಿಸದಿದ್ದರೆ ಡಿ.೨೨ರಂದು ಸುವರ್ಣವಿಧಾನಸೌಧದ ಎದುರು ಬ್ರಹತ್ ಹೋರಾಟ ಕೈಗೊಳ್ಳಲಾಗುತ್ತದೆ. ಸಮುದಾಯಕ್ಕೆ ಮೀಸಲಾತಿಯನ್ನು ನೀಡಲು ಹಕ್ಕೊತ್ತಾಯ ಮಾಡುವ ಸಲುವಾಗಿ ಪಂಚಮಸಾಲಿ ಬಂಧುಗಳು ಸಂಘಟಿತರಾಗಲು ಮೊದಲ ಬಾರಿ ಖಾನಾಪುರ ತಾಲ್ಲೂಕಿನಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ, ಪಂಚಮಸಾಲಿಗಳು ಮೂಲತಃ ರೈತರು, ನಿರುಪದ್ರವಿಗಳು. ಯಾರಿಗೂ ತೊಂದರೆ ಕೊಡುವವರಲ್ಲ. ಆದರೆ ಇದನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ನಮ್ಮ ಸಮುದಾಯದಲ್ಲಿ ಯಾರೂ ದೊಡ್ಡ ಹುದ್ದೆಗೇರಿಲ್ಲ. ಹಾಗಾಗಿ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿಗಾಗಿ ಹೋರಾಯ ಮಾಡಲಾಗುತ್ತಿದೆ. ಮೀಸಲಾತಿ ಸಿಗೋವರೆಗೂ ಪಕ್ಷಾತೀತವಾಗಿ ಹೋರಾಟ ಮುಂದುವರಿಯುತ್ತದೆ. ಸದನದಲ್ಲಿ ಈಗಾಗಲೆ ಹೋರಾಟ ಮಾಡಲಾಗಿದೆ. ಡಿ.19ರ ವರೆಗೆ ಗಡುವು ನೀಡಲಾಗಿದೆ. ಅಷ್ಟರೊಳಗೆ ಮೀಸಲಾತಿ ಘೋಷಿಸಬೇಕು ಎಂದು ಆಗ್ರಹಿಸಿದರು.
ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ ಎಚ್.ಎಸ್ ಶಿವಶಂಕರ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಸಚಿವರಾದ ಎ.ಬಿ ಪಾಟೀಲ ಮತ್ತಿತರರು ಮಾತನಾಡಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ದೊರೆಯುವರೆಗೆ ಪಕ್ಷಾತೀತವಾಗಿ ಹೋರಾಟ ನಡೆಸುತ್ತಿದ್ದು, ಮೀಸಲಾತಿ ದೊರೆಯುವರೆಗೆ ಹೋರಾಟ ಮುಂದುವರೆಯಲಿದೆ ಎಂದು ಘೋಷಿಸಿದರು.
ವೇದಿಕೆಯಲ್ಲಿ ಮಾಜಿ ಸಚಿವ ಶಶಿಕಾಂತ ನಾಯಕ, ಪಂಚಮಸಾಲಿ ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ ಪಾಟೀಲ, ಕಾರ‍್ಯಾಧ್ಯಕ್ಷ ನಿಂಗಪ್ಪ ಪೀರೊಜಿ, ತಾಲ್ಲೂಕು ಉಸ್ತುವಾರಿ ಅಡಿವೇಶ ಇಟಗಿ, ತಾಲ್ಲೂಕು ಘಟಕದ ಅಧ್ಯಕ್ಷ ಸಂಗಮೇಶ ವಾಲಿ, ಹಿರಿಯ ವಕೀಲ ಆರ್.ಎನ್ ಪಾಟೀಲ, ರೈತ ಮುಖಂಡ ಅಶೋಕ ಯಮಕನಮರಡಿ, ರಾಣಿ ಚನ್ನಮ್ಮನ ವಂಶಸ್ಥ ಉದಯ ದೇಸಾಯಿ, ಮುಖಂಡರಾದ ವಿಠ್ಠಲ ಹಲಗೇಕರ, ಸಂಜಯ ಕುಬಲ, ಅಪ್ಪಯ್ಯ ಕೊಡೋಳಿ, ಸಂತೋಷ ಹಂಜಿ, ಸುಭಾಸ ಗುಳಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಗಂದಿಗವಾಡದ ಪರಂಜ್ಯೋತಿ ಪ್ರೌಢಶಾಲೆಯ ವಿದ್ಯಾರ‍್ಥಿನಿಯರು ಸ್ವಾಗತಿಸಿದರು. ಶಿಕ್ಷಕ ಪುಲಕೇಶಿ ಗಿರಿಯಾಲ ರೈತಗೀತೆ ಪ್ರಸ್ತುತಪಡಿಸಿದರು. ಅಡಿವೇಶ ಇಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರುದ್ರಪ್ಪ ಕುಂಕೂರ ವಂದಿಸಿದರು.
1.40 ಕೋಟಿ ರೂ. ವೆಚ್ಚದಲ್ಲಿ ಬೆಳಗುಂದಿ- ಬೆಳಗಾವಿ ರಸ್ತೆ : ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ
https://pragati.taskdun.com/construction-work-started-in-belagavi-rural/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ