ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಆಧುನಿಕ ಭಾರತದ ನಿರ್ಮಾಣದಲ್ಲಿ ಪಂಡಿತ ದೀನ್ ದಯಾಳ್ ಉಪಾಧ್ಯಾಯರು ಸಲ್ಲಿಸಿದ ಸೇವೆ ಅವಿಸ್ಮರಣೀಯವಾದುದು. ದೇಶಿನೆಲೆಯಲ್ಲಿ ಭಾರತದ ಪ್ರಾಚೀನ ಸಂಸ್ಕೃತಿಯನ್ನು ಪುನರ್ ಕಟ್ಟುವ ಕಾರ್ಯವನ್ನು ಅವರು ಮಾಡಿದರು ಎಂದು ಸಾಮಾಜಿಕ ಕಾರ್ಯಕರ್ತ ರಘುನಂದನ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅಧ್ಯಯನ ಪೀಠದಲ್ಲಿ ಜರುಗಿದ ದೀನ್ ದಯಾಳರ ೧೦೩ನೇ ಜನ್ಮದಿನಾಚರಣೆ ನಿಮಿತ್ಯ ಕುವೆಂಪು ಸಭಾಂಗಣದಲ್ಲಿ ಅಕ್ಟೋಬರ ೩ ಗುರುವಾರ ರಂದು ’ಪಂಡಿತ ದೀನ್ ದಯಾಳ್ ಉಪಾಧ್ಯಾಯರ ಜೀವನ-ದರ್ಶನ’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಯುರೋಪಿನ್ ಮನಸ್ಸುಗಳಿಂದ ಭಾರತದ ಸಾಂಸ್ಕೃತಿಕ ಚರಿತ್ರೆಯೇ ಅಸ್ತವ್ಯಸ್ತವಾಗಿದ್ದ ಸಂದರ್ಭದಲ್ಲಿ ದೀನ್ ದಯಾಳರು ಏಕಾತ್ಮ ಮಾನವ ದರ್ಶನ ಎಂಬ ವಿನೂತನ ವಿಚಾರಧಾರೆಯ ಮೂಲಕ ಹೊಸ ಚಿಂತನೆಗಳನ್ನು ಭಾರತೀಯರಿಗೆ ನೀಡುವ ಕಾರ್ಯ ಮಾಡಿದರು ಎಂದರು.
ಕಮ್ಯುನಿಸಂ, ಸೋಸಿಯಾಲಿಜಂ, ಸೆಕ್ಯುಲರಿಸಂ ಮೊದಲಾದ ಇಸಂಗಳ ಮೂಲಕ ಭಾರತದಲ್ಲಿ ಮೊದಲು ಯಾವ ಚಿಂತನಧಾರೆಗಳು ಇರಲಿಲ್ಲ ಎಂಬ ಆರೋಪಗಳಿಗೆ ತಕ್ಕ ಉತ್ತರವನ್ನು ಕೊಡುವ ಕಾರ್ಯವನ್ನು ದೀನ್ ದಯಾಳರು ಮಾಡಿದರು. ಧರ್ಮಾಧಾರಿತ ರಾಜಕೀಯ ವ್ಯವಸ್ಥೆ ಇರಬೇಕು, ಜಾತ್ಯತೀತ ಎಂಬ ಪದ ಅಂಬೇಡ್ಕರ್ ಮೂಲಸಂವಿಧಾನದಲ್ಲಿ ಇರಲಿಲ್ಲ. ಅದನ್ನು ಇತ್ತೀಚೆಗೆ ಸೇರಿಸಲಾಯಿತು. ಹೀಗಾಗಿ ಏಕಾತ್ಮ ಮಾನವ ದರ್ಶನದ ನಿಜವಾದ ಚಿಂತನೆಗಳು ಈ ದೇಶದಲ್ಲಿ ಹೆಚ್ಚು ಹೆಚ್ಚು ನಡೆಯಬೇಕಾಗಿದೆ ಎಂದೂ ರಘುನಂದನ್ ಹೇಳಿದರು.
ಏಕಾತ್ಮ ಮಾನವ ದರ್ಶನವು ದೀನ್ ದಯಾಳರ ಅಪೂರ್ವ ಚಿಂತನೆಯ ಫಲವಾಗಿ ಮೂಡಿ ಬಂದ ಅಪರೂಪದ ವಿಚಾರಧಾರೆಯಾಗಿದೆ. ಧರ್ಮ ಬೇರೆ, ರಿಲಿಜನ್ ಬೇರೆ. ಇವೆರಡೂ ಒಂದೇ ಅಲ್ಲ ಎಂಬ ಭಾವ ದೀನ ದಯಾಳರಲ್ಲಿತ್ತು ಎಂದು ಹೇಳಿದರು. ಸ್ವದೇಶಿ ಬೀಜಮಂತ್ರವನ್ನು ಬಿತ್ತಿದ ದೀನ ದಯಾಳರು ದೇಶಿಯತೆಯಲ್ಲಿ ಅರಳಿದ ಅಪ್ರತಿಮ ಪ್ರತಿಭೆಯಾಗಿದ್ದರು ಎಂದು ಹೇಳಿದರು. ಇಂದು ದೇಶಿಯ ನೆಲೆಯಲ್ಲಿ ಕನ್ನಡವನ್ನು ಕಟ್ಟುವ ಕೆಲಸ, ಪರಿಸರ ಉಳವಿಗಾಗಿ ಪ್ಲ್ಯಾಸ್ಟಿಕ್ ಬಳಕೆ ನಿಷೇಧ ಕುರಿತು ಚಿಂತನೆ ಮಾಡಬೇಕಾಗಿದೆ ಎಂದರು.
ವಿಶೇಷ ಅನುದಾನ
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಶ್ರಾಂತ ಕುಲಪತಿಗಳಾದ ಪ್ರೊ. ಶಿವಾನಂದ ಹೊಸಮನಿ ಅವರು ಮಾತನಾಡುತ್ತ, ಇಡೀ ದಕ್ಷಿಣ ಭಾರತದಲ್ಲಿ ದೀನ್ ದಯಾಳ ಉಪಾಧ್ಯಾಯರನ್ನು ಕುರಿತು ಪೀಠ ಹೊಂದಿದ ಏಕೈಕ ವಿಶ್ವವಿದ್ಯಾಲಯವೆಂದರೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವಾಗಿದೆ. ದೀನ್ ದಯಾಳ್ ಅವರ ಜನ್ಮಶತಮಾನೋತ್ಸವ ಕಾಲದಲ್ಲಿ ಕೇಂದ್ರ ಸರಕಾರ ೫ ಕೋಟಿ ೭೮ ಲಕ್ಷ ರೂ.ಗಳ ವಿಶೇಷ ಅನುದಾನವನ್ನು ನೀಡಿದೆ. ಈ ಮೂಲಕ ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಕಾಶ ಗಿರಿಮಲ್ಲನವರ ಬರೆದ ’ನವ ಭಾರತದ ನಿರ್ಮಾಪಕ ದೀನ್ ದಯಾಳ್ ಉಪಾಧ್ಯಾಯ’ ಎಂಬ ಗ್ರಂಥವನ್ನು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಲಪತಿಗಳಾದ ಪ್ರೊ.. ಎಂ. ರಾಮಚಂದ್ರಗೌಡ ಅವರು ಲೋಕಾರ್ಪಣೆಗೊಳಿಸಿದರು. ಉತ್ತರ ಕರ್ನಾಟಕದಲ್ಲಿ ದೀನ್ ದಯಾಳರನ್ನು ಕುರಿತ ಮೊದಲ ಕೃತಿ ಇದಾಗಿದೆ ಎಂದು ಕುಲಪತಿಗಳು ಹೇಳಿದರು.
ಇದೇ ಸಂದರ್ಭದಲ್ಲಿ ಚರ್ಚಾ ಸ್ಪರ್ಧೆ, ನಿಬಂಧ ಸ್ಪರ್ಧೆ, ರಂಗೋಲಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ದೀನ್ ದಯಾಳ ಉಪಾಧ್ಯಾಯ ಅಧ್ಯಯನ ಪೀಠದ ನಿರ್ದೇಶಕರಾದ ಪ್ರೊ. ಕಮಲಾಕ್ಷಿ ತಡಸದ ಅವರು ಸರ್ವರನ್ನು ಸ್ವಾಗತಿಸಿದರು. ಅತಿಥಿಗಳಾಗಿ ರಾಘವೇಂದ್ರ ಕಾಗವಾಡ ಅವರು ಆಗಮಿಸಿದ್ದರು. ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿ, ಪ್ರೊ. ರಂಗರಾಜ ವನದುರ್ಗ, ಹಣಕಾಸು ಅಧಿಕಾರಿಗಳಾದ ಶಂಕರಾನಂದ ಬನಶಂಕರಿ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಪ್ರೊ. ಪ್ರಕಾಶ ಕಟ್ಟಿಮನಿ ನಿರೂಪಿಸಿದರು. ಪ್ರೊ. ಗೋರಪ್ಪ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ