
ಪ್ರಗತಿವಾಹಿನಿ ಸುದ್ದಿ: ಮನೆ ಕೆಲಸದ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದ್ದು, ಇದೊಂದು ಐತಿಹಾಸಿಕ ತೀರ್ಪು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆಯಾಗಿದೆ. ಮೊದಲು ಸಿಐಡಿ, ಎಸ್ ಐಟಿ ತಂಡವನ್ನು ಅಭಿನಂದಿಸುತ್ತೇನೆ. ಇಂತಹ ಪ್ರಜರಣಗಳಲ್ಲಿ ವರ್ಷಾನುಗಟ್ಟಲೆ ವಿಚಹರಣೆ ನಡೆಯುತ್ತಿರುತ್ತವೆ. ಆದರೆ ನಮ್ಮ ಪೊಲೀಸರು ಸೂಕ್ತವಾಗಿ ಹಾಗೂ ವೇಗವಾಗಿ ತನಿಖೆ ನಡೆಸಿ ಕೋರ್ಟ್ ಗೆ ಸಮರ್ಪಕ ದಾಖಲೆಗಳನ್ನು ಸಲ್ಲಿಸಿದ್ದರು. ಕೋರ್ಟ್ ಶೀಘ್ರವಾಗಿ ತೀರ್ಪು ನೀಡಿದೆ ಎಂದರು.
ಈ ತೀರ್ಪಿನಿಂದ ಪೊಲೀಸ್ ಇಲಾಖೆಗೂ ಕೀರ್ತಿ ಬಂದಂತಾಗಿದೆ. ಸರ್ಕಾರ ವಿಶೇಷ ತಂಡವನ್ನು ಪ್ರಶಿಂಸುತ್ತದೆ. ವಿಶೇಷ ತಂಡಕ್ಕೆ ಸಿಎಂ ಪದಕ ನೀಡಲಿದೆ. ಅಲ್ಲದೇ ರಾಷ್ಟ್ರಪತಿ ಪದಕಕ್ಕೂ ಶಿಫಾರಸು ಮಾಡುತ್ತೇವೆ ಎಂದರು.