Kannada NewsKarnataka NewsLatestPolitics

*ಛಲವಾದಿ ನಾರಾಯಣಸ್ವಾಮಿಗೆ ಚಾಕು ಕಳುಹಿಸಿದ ಪ್ರಕರ*: *ನಮ್ಮವರೇ ಮಾಡಿದ್ದರೂ ತಪ್ಪು ಎಂದ ಪರಮೇಶ್ವರ್*

ಪ್ರಗತಿವಾಹಿನಿ ಸುದ್ದಿ: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಗೆ ಚಾಕು ಮತ್ತು ಚೂರಿ ಕಳುಹಿಸಿದ ಪ್ರಕರಣ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಘಟನೆ ಬಗ್ಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜಕೀಯದಲ್ಲಿ ಟೀಕೆ-ಟಿಪ್ಪಣಿಗಳು ಸಹಜ. ಆದರೆ ಇಂತಹ ಬೆದರಿಕೆ ಕೃತ್ಯಗಳಿಗೆ ಅವಕಾಶ ಇರಬಾರದು ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಪರಮೇಶ್ವರ್, ಜನರು ನಮ್ಮನ್ನು ಆಯ್ಕೆ ಮಾಡಿರುವುದು ಕೆಲಸ ಮಾಡುವುದಕ್ಕಾಗಿ. ರಾಜಕೀಯ ಟೀಕೆಗಳು ಒಂದೆರಡು ದಿನ ನಡೆಯಬಹುದು. ಆದರೆ ಅದನ್ನು ಮುಂದುವರಿಸಿ ಇಂತಹ ಕೃತ್ಯಗಳಿಗೆ ಇಳಿಯುವುದು ಸರಿಯಲ್ಲ ಎಂದಿದ್ದಾರೆ. ನಾರಾಯಣಸ್ವಾಮಿ ಅವರ ಮಾತಿನ ಶೈಲಿ ಸರಿಯಿಲ್ಲದಿರಬಹುದು. ಆದರೆ ನಮ್ಮ ಪಕ್ಷದವರೇ ಈ ಕೃತ್ಯ ಮಾಡಿದ್ದರೂ ಅದನ್ನು ತಪ್ಪು ಎಂದೇ ಪರಿಗಣಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಬರ ಪರಿಹಾರದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಎರಡು ವಾರಗಳಾದರೂ ಈವರೆಗೆ ಉತ್ತರ ಬಂದಿಲ್ಲ ಎಂದು ಪರಮೇಶ್ವರ್ ತಿಳಿಸಿದ್ದಾರೆ. ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಚರ್ಚೆಗೆ ಸಮಯ ಕೇಳುವುದು ಕಷ್ಟ. ಮತ್ತೆ ಮನವಿ ಮಾಡುತ್ತೇವೆ. ಸಮಯ ಸಿಕ್ಕ ಬಳಿಕ ಮುಖ್ಯಮಂತ್ರಿ ಜೊತೆ ಹೋಗಬೇಕೇ ಅಥವಾ ಸರ್ವಪಕ್ಷಗಳ ನಿಯೋಗ ಕರೆದೊಯ್ಯಬೇಕೇ ಎಂಬುದನ್ನು ತೀರ್ಮಾನಿಸುತ್ತೇವೆ ಎಂದಿದ್ದಾರೆ.

ರೈತರಿಗೆ ಕಡಿಮೆ ಪರಿಹಾರ ಹಣ ಜಮೆಯಾಗಿರುವ ವಿಚಾರಕ್ಕೂ ಸ್ಪಷ್ಟನೆ ನೀಡಿದ್ದಾರೆ. ಸದನದಲ್ಲಿ ಘೋಷಿಸಿದಂತೆ ಪ್ರತಿ ರೈತ ಕುಟುಂಬಕ್ಕೆ ಮೊದಲ ಕಂತಿನಲ್ಲಿ 2,500 ರೂಪಾಯಿ ನೀಡಬೇಕಿತ್ತು. ಆದರೆ ಅಧಿಕಾರಿಗಳು ಎನ್‌ಡಿಆರ್‌ಎಫ್ ಮಾರ್ಗಸೂಚಿಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ಕೆಲವರಿಗೆ 1,500 ರೂಪಾಯಿ ಮಾತ್ರ ಜಮೆಯಾಗಿದೆ ಎಂದು ತಿಳಿಸಿದ್ದಾರೆ.

ಈ ತಪ್ಪನ್ನು ಸರಿಪಡಿಸಲು ಸೂಚನೆ ನೀಡಲಾಗಿದ್ದು, ಒಟ್ಟು ಎರಡು ಕಂತುಗಳಲ್ಲಿ ಪ್ರತಿ ರೈತ ಕುಟುಂಬಕ್ಕೆ 5,000 ರೂಪಾಯಿ ಪರಿಹಾರ ನೀಡಲಾಗುವುದು. ಡಿಸೆಂಬರ್ ಒಳಗೆ ಎರಡೂ ಕಂತುಗಳ ಹಣ ಪಾವತಿಸುವ ಗುರಿ ಹೊಂದಲಾಗಿದೆ ಎಂದು ಪರಮೇಶ್ವರ್ ಭರವಸೆ ನೀಡಿದ್ದಾರೆ.

Related Articles

Back to top button