*20 ನಿಮಿಷದಲ್ಲಿ ಬರ್ತೀನಿ ಎಂದು ಚೇಂಬರ್ ಗೆ ಹೋದವರು ಬರಲೇ ಇಲ್ಲ: ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ದಕ್ಷಿಣ ಭಾರತದ ದೈತ್ಯ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೆಲ ಮಾಹಿತಿಗಳನ್ನು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮತನಾಡಿದ ಗೃಹ ಸಚಿವ ಪರಮೇಶ್ವರ್,ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಆಘಾತ ತಂದಿದೆ. ಮೂರು ದಿನಗಳ ಹಿಂದೆ ಅವರು ದುಬೈನಿಂದಬೆಂಗಳೂರಿಗೆ ಬಂದಿದ್ದರು ಎಂದು ತಿಳಿಸಿದ್ದಾರೆ.
ಸಿ.ಜೆ.ರಾಯ್ ಅವರ ಕಂಪನಿ ಮೇಲೆ ಡಿಸೆಂಬರ್ ನಲ್ಲಿ ಐಟಿ ದಾಳಿ ನಡೆದಿತ್ತು. ರಾಯ್ ದುಬೈನಿಂದ ಬೆಂಗಳೂರಿಗೆ ಬಂದು ಮೂರುದಿನಗಳಾಗಿತ್ತು. ಫೆಬ್ರವರಿ 4ರೊಳಗೆ ಎಲ್ಲವನ್ನೂ ಅಂತಿಮ ಮಾಡಲು ಅವರನ್ನು ಕರೆದಿದ್ದರು. ಐಟಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಳ್ಳಲು ನಿರ್ಧರಿಸಿದ್ದರು. ನಿನ್ನೆ ಅವರ ಕಚೇರಿಯಲ್ಲಿಯೇ ಐಟಿ ಅಧಿಕಾರಿಗಳ ಜೊತೆ ಮಾತನಾಡಿದ್ದರು. ಬಳಿಕ 20 ನಿಮಿಷದಲ್ಲಿ ಬರುತ್ತೇನೆ ಎಂದು ಸಿ.ಜೆ.ರಾಯ್ ತಮ್ಮ ಚೇಂಬರ್ ಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. 20 ನಿಮಿಷವಾದರೂ ಬಾಗಿಲು ತೆರೆದಿಲ್ಲ. ಬಾಗಿಲು ಒಡೆದು ನೋಡಿದಾಗ ಸಿ.ಜೆ.ರಾಯ್ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ.
ಅಶೋಕನಗರ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ. ಐಟಿ ಅಧಿಕಾರಿಗಳಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ತನಿಖೆ ಬಳಿಕ ಈ ಬಗ್ಗೆ ಸ್ಪಷ್ಟನೆ ತಿಳಿಯಲಿದೆ ಎಂದರು.



