
ಪ್ರಗತಿವಾಹಿನಿ ಸುದ್ದಿ: ವೃತ್ತಿಯಲ್ಲಿ ಬಡ್ತಿಗಾಗಿ ಪೂಜೆ, ವರ್ಗಾವಣೆ ವಿಚಾರವಾಗಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಪಡೆದು, ವಂಚಿಸಿದ್ದ ಗಿಳಿಶಾಸ್ತ್ರದವನನ್ನು ಬೆಗಳೂರಿನ ಭಾರತೀನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಶೇಖರ್ ಬಂಧಿತ ಆರೋಪಿ. ಪೂಜೆ ಮಾಡುವುದಾಗಿ 194 ಗ್ರಾಂ ತೂಕದ ಚಿನ್ನಾಭರಣ ಹಾಗೂ 1 ಕೆ.ಜಿ 300 ಗ್ರಾಂ ಬೆಳ್ಳಿ ಆಭರಣಗಳನ್ನು ಪಡೆದುಕೊಂಡಿದ್ದ ಆರೋಪಿ ಪರಾರಿಯಾಗಿದ್ದ. ವಂಚನೆಗೊಳಗಾದ 55 ವರ್ಷದ ಹಿರಿಯ ಅಧಿಕಾರಿ ನೀಡಿದ್ದ ದೂರಿನ ಮೇರೆಗೆ ಭಾರತೀನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೆಂಗಳೂರಿನ ಐಟಿ ಕಚೇರಿಯಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರು ಗಿಳಿಶಾಸ್ತ್ರದವನ ವಂಚನೆಗೆ ಬಲಿಯಾದವರು. ಕಳೆದ ಡಿಸೆಂಬರ್ನಲ್ಲಿ ಭಾರತೀನಗರದ ಶ್ರೀ ಸರ್ಕಲ್ ಬಳಿ ಹೋಗುತ್ತಿದ್ದ ಅಧಿಕಾರಿಗೆ ರಸ್ತೆ ಬದಿ ಕುಳಿತಿದ್ದ ಗಿಳಿಶಾಸ್ತ್ರ ಹೇಳುವ ಶೇಖರ್ ಎಂಬಾತನ ಪರಿಚಯವಾಗಿದೆ. ನಿಮ್ಮ ಮುಖ ನೋಡಿ ಜಾತಕ ಹೇಳ್ತೀನಿ, ಜೀವನ ಸುಧಾರಿಸಬೇಕಾದರೆ ಪೂಜೆ ಮಾಡಿಸಬೇಕು” ಎಂದು ನಂಬಿಸಿದ್ದ ಶೇಖರ್, ಮೊದಲಿಗೆ 50 ಸಾವಿರ ರೂಪಾಯಿ ಪಡೆದು ಸಣ್ಣದೊಂದು ಪೂಜೆ ಮಾಡಿದ್ದ. ಇದಾದ ಬಳಿಕ ಪುನಃ ಕರೆ ಮಾಡಿದ್ದ ಶೇಖರ್, ನಿಮಗೆ ವೃತ್ತಿಯಲ್ಲಿ ಬಡ್ತಿ, ವರ್ಗಾವಣೆಯಾಗಬೇಕು ಎಂದರೆ ದೊಡ್ಡ ಪೂಜೆಯೊಂದನ್ನು ಮಾಡಬೇಕು, ಮನೆಯಲ್ಲಿರುವ ಚಿನ್ನಾಭರಣ ತಗೊಂಡು ಬನ್ನಿ ಎಂದು ತಿಳಿಸಿದ್ದ ಅದರಂತೆ ಅಧಿಕಾರಿ ಚಿನ್ನಾಭರಣವನ್ನು ತೆಗೆದುಕೊಂಡು ಹೋಗಿ ಕೊಟ್ಟಿದ್ದರು.
ಆರೋಪಿಯ ಮಾತನ್ನ ನಂಬಿದ್ದ ಅಧಿಕಾರಿ ಸುಮಾರು 3.10 ಲಕ್ಷ ರೂಪಾಯಿ ಮೌಲ್ಯದ 194 ಗ್ರಾಂ ಚಿನ್ನ ಮತ್ತು 1 ಕೆಜಿ 300 ಗ್ರಾಂ ಬೆಳ್ಳಿಯನ್ನು ಪೂಜೆಗಾಗಿ ಆತನಿಗೆ ನೀಡಿದ್ದರು. ಒಂದೇ ದಿನದಲ್ಲಿ ಪೂಜೆ ಮುಗಿಸಿ ಚಿನ್ನಾಭರಣ ವಾಪಸ್ ಕೊಡುತ್ತೇನೆ ಎಂದಿದ್ದ ಶೇಖರ್, ನಂತರ ನಾಳೆ, ನಾಡಿದ್ದು ಎಂದು ಮುಂದೂಡುತ್ತಿದ್ದ. ಅನುಮಾನಗೊಂಡ ಅಧಿಕಾರಿ ಆರೋಪಿ ಕುಳಿತಿರುತ್ತಿದ್ದ ಶ್ರೀ ಸರ್ಕಲ್ ಬಳಿ ಹೋಗಿ ನೋಡಿದಾಗ ಅಲ್ಲಿಂದ ಆತ ಪರಾರಿಯಾಗಿದ್ದ. ವಂಚನೆಯಾಗಿದ್ದು ಅರಿವಾಗುತ್ತಿದ್ದಂತೆ ಅಧಿಕಾರಿ ಪೊಲಿಸರಿಗೆ ದೂರು ನೀಡಿದ್ದರು. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.




