-ವಿದ್ವಾನ್ ಅರುಣ ಹೆಗಡೆ
ಪ್ರಾಣಕ್ಕಿಂತಲೂ ಪ್ರಿಯವಾದ ವಸ್ತು ಬೇರೊಂದಿಲ್ಲ.
ತನಗೆ ಹೇಗೆ ತನ್ನ ಪ್ರಾಣದ ಮೇಲೆ ಹೆಚ್ಚಿನ ಪ್ರೀತಿ , ಮಮತೆಯಿದೆಯೋ ಹಾಗೇ ಇತರರಿಗೂ ಅವರವರ ಪ್ರಾಣಗಳ ಮೇಲೆ ಮಮತೆಯಿದೆಯಿದೆಯೆಂದು ಭಾವಿಸಬೇಕು.
ಇದೇ ನಿಜವಾದ ವ್ಯಕ್ತಿತ್ವ (Personality).
ಈ ವ್ಯಕ್ತಿತ್ವ ಅನ್ನೋದು ಸರಿಯಾದ ರೀತಿಯಲ್ಲಿ ವಿಕಸನಗೊಂಡರೆ ಅಥವಾ ವಿಕಸನಗೊಳ್ಳುತ್ತಿದ್ದರೆ, ತನ್ನನ್ನು ತಾನು ಅರಿತು, ಪರರನ್ನೂ ಅರಿತು , ಎಂತಹ ಸಮಯ ಸಂದರ್ಭಗಳಲ್ಲಿಯೂ, ಸಂದಿಗ್ಢತೆಗಳಲ್ಲಿಯೂ ಸರಿಯಾದ, ಉತ್ತಮ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾದೀತು.
ವಿಕಸನ ಅಂದರೆ ಬೆಳೆಯುವುದು.
ನಮ್ಮ ಜೊತೆ ನಮ್ಮವರನ್ನೂ ಬೆಳೆಸುವುದೂ ವಿಕಸನವೇ !
ಸದ್ಯ ಈ ಪ್ರಾಣಶಕ್ತಿಯನ್ನೇ ಕಾಪಾಡುವ ಶ್ವಾಸಕೋಶವನ್ನೇ ಹದಗೆಡಿಸುವ ರೋಗದಿಂದ ನಮ್ಮನ್ನೂ , ನಮ್ಮವರನ್ನೂ ಕಾಪಾಡುವುದು ಹೇಗೆ?
ಈ ಕೆಳಗಿನ ಕ್ರಮಗಳು ಅತ್ಯಂತ ಅವಶ್ಯಕವಾದುವುಗಳು.:
೧. ಆಶಾವಾದಿಗಳಾಗಿ (Optimism) : ದೇಹದ ಗುಣ ತಾಮಸಿಕ, ಮನಸ್ಸಿನ ಗುಣ ರಾಜಸಿಕ, ಆತ್ಮನ ಗುಣ ಸಾತ್ವಿಕವಾಗಿದೆ.
ಧನಾತ್ಮಕ ಚಿಂತನೆಗಳಿಂದ(Positive attitude) , ನಿರ್ದಿಷ್ಠವಾದ ಮನೋವೃತ್ತಿಗಳಿಂದ ದೇಹ ಸದಾ ಚುರುಕಾಗಿ , ಬುದ್ಧಿಯು ಸ್ಥಿರವಾಗಿರಲು ಪ್ರಯತ್ನಿಸಿ. ಸ್ವಲ್ಪ ಆಸನ, ನಡೆದಾಟ, ಒಟ್ಟು ಕನಿಷ್ಠ ೩೦ಸುತ್ತು ಪ್ರಾಣಾಯಾಮ ಮಾಡಿರಿ.
(ಪ್ರಾಣಾಯಾಮದ ಒಂದು ಸುತ್ತು ಅಂದರೆ ಪೂರಕ, ಕುಂಭಕ, ರೇಚಕ ಹಾಗೂ ಬಾಹ್ಯ ಕುಂಭಕ).
೨. ಶಿಸ್ತು, ವಿನಯತೆ, ನೀತಿ ಶಿಕ್ಷಣವನ್ನು ಸದಾ ಪಾಲಿಸಿ (Keeping Discipline).
ಪತಂಜಲಿ ಮುನಿಗಳು ಗುರುತಿಸಿರುವ ಹದಿಮೂರು ದೋಷಗಳಲ್ಲಿ ನಾಲ್ಕು –ಕಾಯಿಲೆ, ಸೋಮಾರಿತನ, ದೇಹದ ಚಂಚಲತೆ ಹಾಗೂ ಉಸಿರಾಟಕ್ಕೆ ತಡೆ ಇವು ದೇಹಕ್ಕೆ ಸಂಬಂಧಿಸಿದ್ದು.
ಮಿತಿಮೀರಿ ತಿನ್ನುವುದು, ಮಿತಿಮೀರಿದ ಆಯಾಸದ ಕೆಲಸ, ಶಿಸ್ತುರಹಿತ ಜೀವನ, ದುರಭ್ಯಾಸ, ಕಾಡುಹರಟೆ ಇವು ಜೀವನಕ್ಕೇ ದುಃಖ.
.
೩.ಸ್ವಕಾರ್ಯಗಳಲ್ಲಿ ಪೂರ್ಣ ನಂಬಿಕೆ (Self belief)
ನಿಮ್ಮ ಕರ್ತೃತ್ವ ಶಕ್ತಿಯನ್ನು ಹೆಚ್ಛಿಸಿಕೊಳ್ಳಿ. ಖ್ಯಾತ ಚಿತ್ರಕಾರ ಆಗಸ್ಟಿ ಕೆನ್ವಾಯರ್ ವೃದ್ಧರಾದಷ್ಟೂ ಅವರ ಕಲಾಪ್ರೇಮ ಅಧಿಕವಾಯಿತಂತೆ. ಯುವಾವಸ್ಥೆಯಲ್ಲೂ ಅವರು ಪ್ರಸಿದ್ಧ ಚಿತ್ರಕಾರರಾಗಿದ್ದರು. ವಯಸ್ಸಾದ ಹಾಗೆ ಅವರ ಕೈಕಾಲುಗಳಲ್ಲಿ ನಿತ್ರಾಣ -ನೋವು ಕಾಣಿಸಿಕೊಂಡರೂ ಗಾಲಿಕುರ್ಚಿಯಲ್ಲಿ ಕುಳಿತೇ ಚಿತ್ರ ಬಿಡಿಸುತ್ತಿದ್ದರು.
ಉನ್ನತಿ ಸಾಧಿಸಲು ಉತ್ಕಟ ವ್ಯಾಕುಲತೆ, ಸ್ವನಂಬಿಕೆ ಹಾಗೂ ಸತತ ಪರಿಶ್ರಮ ಬೇಕೇ ಬೇಕು.
“ಆತ್ಮವಿಶ್ವಾಸ ಎಂದೆಂದಿಗೂ ಫಲಕಾರಿ” ಅನ್ನೋದನ್ನ ಮರೆಯುವುದು ಬೇಡ.
೪. ಒತ್ತಡದ ಸಂದರ್ಭದಲ್ಲಿ ಸಹನೆಯೇ ಆಯುಧವಾಗಲಿ.
೫. ಅಸಹಾಯಕರನ್ನು ಸದಾ ಕಾಪಾಡುವ ಮನೋಭಾವವಿರಲಿ.
೬. “ಸರ್ವೇ ಜನಾಃ ಸುಖಿನೋ ಭವಂತು “ಎನ್ನುವ ವಿಶ್ವಪ್ರಾರ್ಥನೆಯನ್ನು ನಿತ್ಯ ಮಾಡಿರಿ.
ನಾಮಸ್ಮರಣದ ಮೂಲಕ ಭಗವಂತನ ಶಕ್ತಿಯನ್ನು ನಿಮ್ಮಲ್ಲಿ ಜಾಗೃತಗೊಳಿಸಿ.
ಕರೋನಾದಂತಹ ಮಹಾಮಾರಿ ಎಂಬ ದುಷ್ಟಶಕ್ತಿಯನ್ನು ದಮನ ಮಾಡಲು ಪ್ರಾರ್ಥಿಸೋಣ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ