Belagavi NewsBelgaum NewsKannada NewsKarnataka NewsNational

ಬೆಳಗಾವಿ ವಿಧಾನ ಮಂಡಲ‌ ಚಳಿಗಾಲ‌ದ ಅಧಿವೇಶನ: ಅಗತ್ಯ ಸಿದ್ಧತೆಗೆ ಡಿಸಿ ಮೊಹಮ್ಮದ್ ರೋಷನ್ ಸೂಚನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುಂಬರುವ ಡಿಸೆಂಬರ್ ಮಾಹೆಯಲ್ಲಿ ಜರುಗಲಿರುವ  ಚಳಿಗಾಲದ ಅಧಿವೇಶನವನ್ನು ಕಳೆದ ಬಾರಿಯಂತೆ ಅಚ್ಚುಕಟ್ಟಾಗಿ ನಡೆಸಲು ಅನುಕೂಲವಾಗುವಂತೆ ಉಪಸಮಿತಿಗಳನ್ನು ರಚಿಸಲಾಗಿದ್ದು, ಉಪ‌ಸಮಿತಿಗಳು ತಮ್ಮ‌ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವುದರ ಮೂಲಕ ಯಾವುದೇ ಲೋಪಗಳಾಗದಂತೆ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸೂಚಿಸಿದರು.

ಸುವರ್ಣ ವಿಧಾನಸೌಧದಲ್ಲಿ ಬುಧವಾರ (ನ.12) ಜರುಗಿದ ಚಳಿಗಾಲ ಆಧಿವೇಶನ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Home add -Advt

ಅಧಿವೇಶನಕ್ಕೆ ಆಗಮಿಸುವ ಅಧಿಕಾರಿ ಸಿಬ್ಬಂದಿಗಳಿಗೆ ಪಾಸ್ ವಿತರಣೆಯನ್ನು ಭದ್ರತಾ ದೃಷ್ಟಿಯಿಂದ ಪೋಲಿಸ್ ಇಲಾಖೆ ಸಮನ್ವಯದೊಂದಿಗೆ ವಿತರಿಸಲು ಕ್ರಮವಹಿಸಬೇಕು.

ಅಧಿವೇಶನಕ್ಕೆ ಆಗಮಿಸುವ  ಅಧಿಕಾರಿ, ಸಿಬ್ಬಂದಿ, ಮಾರ್ಷಲ್ ಗಳಿಗೆ ಸುವರ್ಣವಿಧಾನ ಸೌಧದ ನೆಲಮಹಡಿಯಲ್ಲಿ ಕಳೆದ ಬಾರಿಯಂತೆ ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಮಾಡಬೇಕು ಹಾಗೂ ಸುವರ್ಣ ಸೌಧದ ಹೊರಗಡೆ ಪಾವತಿ(ಪೇಡ್) ಕ್ಯಾಂಟಿನ್ ಸ್ಥಾಪಿಸಲು ಕ್ರಮ ವಹಿಸಬೇಕು. 

ಅಧಿವೇಶನ ಸಂದರ್ಭದಲ್ಲಿ ನಡೆಯುವ ಪ್ರತಿಭಟನೆಗಳಿಗಾಗಿ ಸೂಕ್ತ ಸ್ಥಳವನ್ನು ಗುರುತಿಸುವ ಕಾರ್ಯ ಶೀಘ್ರವೆ ಆಗಬೇಕು. ಪ್ರತಿಭಟನೆಗಾಗಿ ಗುರುತಿಸಲಾದ ಸ್ಥಳಗಳಲ್ಲಿ ಕುಡಿಯುವ‌ ನೀರು ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಲು ತಿಳಿಸಿದರು.

ಪ್ರತಿಭಟನೆ ಸ್ಥಳ, ಮುಖ್ಯಮಂತ್ರಿಗಳು, ಸಚಿವರು, ಶಾಸಕರುಗಳು ತಂಗುವಂತಹ‌ ಸ್ಥಳಗಳಲ್ಲಿ ಅಂಬ್ಯುಲನ್ಸ್ ಸೇರಿದಂತೆ ವೈದ್ಯರ ತಂಡವನ್ನು ನಿಯೋಜಿಸಬೇಕು. ಅದೇ ರೀತಿ ಸುವರ್ಣ ವಿಧಾನಸೌಧ ಹಾಗೂ ಆವರಣದಲ್ಲಿಯೂ ವೈದ್ಯಕೀಯ ಸಿಬ್ಬಂದಿಗಳ ಜೊತೆಗೆ ಅಂಬ್ಯುಲನ್ಸ್ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು. ಇದರ ಜೊತೆಗೆ ಆಹಾರ ಸುರಕ್ಷಾ ಅಧಿಕಾರಿಗಳನ್ನು ನಿಯೋಜಿಸಬೇಕು.

ಅಧಿವೇಶನಕ್ಕೆ ಆಗಮಿಸುವ ಸಚಿವರು, ಶಾಸಕರು,ಅಧಿಕಾರಿ, ಸಿಬ್ಬಂದಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಮಾಡಿಟ್ಟುಕೊಳ್ಳುವುದರ ಜೊತೆಗೆ  ವಾಹನಗಳು ಸುಸ್ಥಿತಿಯಲ್ಲಿರುವುದನ್ನು ಖಾತರಿಪಡಿಸಿಕೊಳ್ಳಬೇಕು.  

ಅಧಿವೇಶನದ ಸಂದರ್ಭದಲ್ಲಿ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಸಿದ್ದತೆ ಮಾಡಿಟ್ಟುಕೊಳ್ಳಬೇಕು. 

ಅಧಿವೇಶನದ ಸಂದರ್ಭದಲ್ಲಿ ದೂರವಾಣಿ‌ ಹಾಗೂ ಇಂಟರನೆಟ್ ವ್ಯವಸ್ಥೆಯಲ್ಲಿ ಅಡತಡೆ ಆಗದಂತೆ ಮುಂಜಾಗೃತೆ ವಹಿಸಿಕೊಳ್ಳಬೇಕು. ಸುವರ್ಣವಿಧಾನ ಸೌಧದಲ್ಲಿ ಯಾವುದೇ ಕಾರಣಕ್ಕೂ ನೆಟವರ್ಕ್ ತೊಂದರೆ ಆಗದಂತೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್ ಅವರು ತಿಳಿಸಿದರು.

ಪೋಲಿಸ್ ಆಯುಕ್ತರಾದ ಗುಲಾಬರಾವ್ ಭೂಷಣ ಭೋರಸೆ ಅವರು ಮಾತನಾಡಿ, ಅಧಿವೇಶನ ವೀಕ್ಷಣೆಗೆ ಆಗಮಿಸುವಂತಹ ಸಾರ್ವಜನಿಕರಿಗೆ ಪಾಸ್ ವಿತರಣೆ ಸಮಯದಲ್ಲಿ ಸುರಕ್ಷತೆ ದೃಷ್ಟಿಯಿಂದ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಬೇಕು. ಸುವರ್ಣಸೌಧಕ್ಕೆ ಆಗಮಿಸುವಂತಹ ವಾಹನಗಳಿಗೆ ನೀಡಲಾಗಿರುವ ಪಾಸ್ ಗಳನ್ನು‌ ಪರಿಕ್ಷೀಸಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ, ಪ್ರಶಿಕ್ಷಣಾರ್ಥಿ ಆಯ್ಎ.ಎಸ್.ಅಧಿಕಾರಿ‌ ಅಭಿನವ ಜೈನ್,‌ ಅಪರ‌ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಾರಿಗೆ, ಊಟೋಪಹಾರ, ವಸತಿ ಸೇರಿದಂತೆ ಎಲ್ಲ ಉಪ ಸಮಿತಿಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Related Articles

Back to top button