ಪ್ರಗತಿವಾಹಿನಿ ಸುದ್ದಿ: ಪಟಾಕಿ ಕಾರ್ಖಾನೆಯಲ್ಲಿ ಭಾರೀ ದುರಂತ ಸಂಭವಿಸಿದ್ದು, ಭೀಕರ ಸ್ಫೋಟದಲ್ಲಿ ಐವರು ಮೃತಪಟ್ಟಿದ್ದು, ಹತ್ತು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಸಂಭವಿಸಿದೆ.
ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಬಳಿಯಿದ್ದ ಹತ್ತಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿವೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟದ ರಭಸಕ್ಕೆ ಮನೆ ಕುಸಿದು ಬಿದ್ದಿದೆ. ಅವಶೇಷಗಳಡಿ ಹಲವರು ಸಿಲುಕಿರುವ ಸಾಧ್ಯತೆಯೂ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಮೀರಾದೇವಿ (52), ಅಮನ್ (20), ಗೌತಮ್ ಕುಶ್ವಾಹ (18), ಇಚ್ಛಾ ಕುಮಾರಿ (03) ಮತ್ತು ಇಚ್ಛಾ ಅವರ ಸಹೋದರ ಕಾಲು (1.5 ವರ್ಷ) ಎಂದು ಗುರುತಿಸಲಾಗಿದೆ.
ಚಂದ್ರಪಾಲ್ ಎಂಬುವವರ ಖಾಲಿ ಮನೆಯನ್ನು ಪಟಾಕಿ ವ್ಯಾಪಾರಿಯೊಬ್ಬರು ಬಾಡಿಗೆಗೆ ಪಡೆದು ಅದೇ ಸ್ಥಳದಲ್ಲಿ ಪಟಾಕಿ ಕಾರ್ಖಾನೆ ನಡೆಸುತ್ತಿದ್ದರು. ಅದರಲ್ಲಿ ಭಾರಿ ಪ್ರಮಾಣದ ಗನ್ ಪೌಡರ್ ಶೇಖರಣೆ ಮಾಡಿ ಇಡಲಾಗಿತ್ತು, ಈ ವೇಳೆ ಏಕಾಏಕಿ ಗನ್ ಪೌಡರ್ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ತಂಡ ಬೀಡುಬಿಟ್ಟಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆ ಹಾಗೂ ಉಪ ಜಿಲ್ಲಾಸ್ಪತ್ರೆಗಳಲ್ಲಿ ರವಾನಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ