ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ಜಿಲ್ಲೆಯಲ್ಲಿ ೧೭ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿನ ಹಣವನ್ನು ಪಾವತಿ ಮಾಡಿದ್ದು, ಒಟ್ಟಾರೆ ಶೇ. ೯೬ರಷ್ಟು ಬಿಲ್ ಮೊತ್ತವನ್ನು ರೈತರಿಗೆ ನೀಡಲಾಗಿದೆ. ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿರುವ ರೈತರ ಕಬ್ಬಿನ ಹಣವನ್ನು ೧೫ ದಿನಗಳಲ್ಲಿ ರೈತರಿಗೆ ಪಾವತಿಸಬೇಕು ಎಂದು ಸಕ್ಕರೆ ಮತ್ತು ಕಾರ್ಮಿಕ ಇಲಾಖೆಯ ಸಚಿವ ಅರಬೈಲ್ ಶಿವರಾಮ ಹೆಬ್ಬಾರ ಸೂಚಿಸಿದರು.
ಸಕ್ಕರೆ ಮತ್ತು ಕಾರ್ಮಿಕ ಇಲಾಖೆಗೆ ಸಂಬಂದಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಜೂ.೨೨) ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಕ್ಕರೆ ಸಚಿವಾಲಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ ಮಾಡಬೇಕು ಎಂದು ಸಾಕಷ್ಟು ಮನವಿಗಳು ಬರುತ್ತಿದ್ದು, ಒಂದೇ ಇಲಾಖೆಯನ್ನು ಸ್ಥಳಾಂತರಿಸಲು ಆಗುವುದಿಲ್ಲ. ಹಾಗಾಗಿ ಇಲಾಖೆಗಳು ವಿಲೀನಗೊಳಿಸುವಾಗ ಸಕ್ಕರೆ ಇಲಾಖೆಯ ಕಚೇರಿಯನ್ನು ಸ್ಥಳಾಂತರಿಸುವ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.
ಜೋಳ ಬೆಳೆದ ರೈತರಿಗೆ ಪರಿಹಾರವಾಗಿ ೫೦೦೦ ಸಾವಿರ ನೀಡಲಾಗುತ್ತಿದ್ದು, ಈ ಯೋಜನೆಯಿಂದ ೪೦ ಲಕ್ಷ ರೈತರಿಗೆ ಅನುಕೂಲ ಆಗಲಿದೆ ಎಂದು ಎಂದು ತಿಳಿಸಿದರು.
ಸರ್ಕಾರಕ್ಕೆ ಮಾಹಿತಿ ನೀಡದೇ ಕಾರ್ಖಾನೆ ಬಂದ್ ಮಾಡುವಂತಿಲ್ಲ:
೧೦೦ ಕ್ಕಿಂತ ಹೆಚ್ಚು ಕಾರ್ಮಿಕರು ಇರುವ ಕಾರ್ಖಾನೆಯ ಮಾಲೀಕರು ಸರ್ಕಾರಕ್ಕೆ ತಿಳಿಸದೇ ತಮ್ಮ ಕಾರ್ಖಾನೆಗಳನ್ನು ಮುಚ್ಚುವಂತಿಲ್ಲ. ಈ ರೀತಿ ಸರ್ಕಾರಕ್ಕೆ ತಿಳಿಸದೆ ಇರುವ ಕಾರ್ಖಾನೆಗಳ ಬಗ್ಗೆ ಮಾಹಿತಿಯನ್ನು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ತಿಳಿಸಿದರು.
ಕೋವಿಡ್-೧೯ ಪರಿಣಾಮವಾಗಿ ಅನೇಕ ಕಾರ್ಖಾನೆಗಳು ಕಾರ್ಮಿಕರಿಗೆ ಸಂಬಳ ನೀಡದೆ ಕಾರ್ಮಿಕ ಮೇಲೆ ಅನ್ಯಾಯ ಮಾಡುತ್ತಿದ್ದಾರೆ ಎಂಬ ದೂರುಗಳು ಬರುತ್ತಿದ್ದು, ಅದರ ಬಗ್ಗೆ ಮಾಹಿತಿ ಕಲೆ ಹಾಕಿ ಕಾರ್ಮಿಕರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಸೂಚಿಸಿದರು.
ಸರ್ಕಾರ ಈಗಾಗಲೇ ಘೋಷಣೆ ಮಾಡಿರುವಂತೆ ಕಾರ್ಮಿಕರಿಗೆ ೫,೦೦೦ ಪರಿಹಾರ ಧನ ವಿತರಣೆ ಮಾಡಲಾಗುತ್ತಿದ್ದು, ೨೦ ದಿನಗಳಲ್ಲಿ ಪರಿಹಾರ ಧನ ಕಾರ್ಮಿಕರಿಗೆ ಮುಟ್ಟಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಒಟ್ಟು ೨೦ ಲಕ್ಷ ೩೦ ಸಾವಿರ ಕಾರ್ಮಿಕರಿದ್ದು ಸರ್ಕಾರ ಘೋಷಣೆ ಮಾಡಿರುವ ಪರಿಹಾರವನ್ನು ೧೦ ದಿನಗಳಲ್ಲಿ ನೀಡುವ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ತಿಳಿಸಿದರು
ಕಾರ್ಮಿಕ ಕಾರ್ಡ್ ಹೊಂದಿರದ ೭ ಲಕ್ಷ ೮೦ ಸಾವಿರ ಕಾರ್ಮಿಕರಿದ್ದು, ೩ ಲಕ್ಷ ೩೪ ಸಾವಿರ ಕಾರ್ಮಿಕ ದತ್ತಾಂಶ ಸಂಗ್ರಹಿಸಲಾಗಿದೆ. ಉಳಿದ ಕಾರ್ಮಿಕರ ದತ್ತಾಂಶವನ್ನು ಸಂಗ್ರಹಿಸಿ ಅವರಿಗೂ ಪರಿಹಾರ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಕೋವಿಡ್ – ೧೯ ಸಂದರ್ಭದಲ್ಲಿ ಕ್ಷೌರಿಕ ಮತ್ತು ಅಗಸರಿಗೆ ಸಾಕಷ್ಟು ತೊಂದರೆಗಳು ಆಗಿದ್ದು, ಅವರಿಗೆ ಪರಿಹಾರವಾಗಿ ೫ ಸಾವಿರ ನೀಡಬೇಕು ಎಂದು ಸರ್ಕಾರ ಘೋಷಣೆ ಮಾಡಿದೆ. ಕ್ಷೌರಿಕರು ಮತ್ತು ಅಗಸರು ಪರಿಹಾರ ಧನ ಪಡೆಯಲು ಯಾವದೇ ದಾಖಲೆಗಳನ್ನು ನೀಡುವ ಅವಶ್ಯಕತೆ ಇಲ್ಲ ಸ್ಥಳೀಯ ಮಟ್ಟದಲ್ಲಿ ಅಥವಾ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಿ.ಡಿ.ಒ ಗಳ ನೇತೃತ್ವದಲ್ಲಿ ಪರಿಶೀಲನೆ ಮಾಡಿ ಅವರಿಗೆ ಪರಿಹಾರ ನೀಡಬೇಕು ಎಂದು ಸಿ.ಇ.ಓ ಡಾ. ರಾಜೇಂದ್ರ ಕೆ.ವಿ ಅವರಿಗೆ ಸಕ್ಕರೆ ಮತ್ತು ಕಾರ್ಮಿಕ ಇಲಾಖೆಯ ಸಚಿವ ಅರಬೈಲ್ ಶಿವರಾಮ ಹೆಬ್ಬಾರ ಅವರು ನಿರ್ದೇಶನ ನೀಡಿದರು.
ಅಸಂಘಟಿತ ವಲಯದ ಕಾರ್ಮಿಕರಿಗೆ ಮುಂದಿನ ಅಧಿವೇಶನದಲ್ಲಿ ಅನೇಕ ಮಸೂದೆಗಳನ್ನು ಜಾರಿಗೆ ತರುತ್ತಿದ್ದೆವೆ. ಅದರಿಂದಾಗಿ ಅಸಂಘಟಿತ ವಲಯದ ಕಾರ್ಮಿಕರಿಗೆ ನ್ಯಾಯ ಸಿಗಲಿದೆ ಎಂದು ತಿಳಿಸಿದರು.
ಇ.ಎಸ್.ಐ ಆಸ್ಪತ್ರೆ ಮೇಲ್ದರ್ಜೆಗೆ:
ನಗರದಲ್ಲಿ ಇರುವ ಇ.ಎಸ್.ಐ ಆಸ್ಪತ್ರೆಯು ೫೦ ಹಾಸಿಗೆವುಳ್ಳ ಆಸ್ಪತ್ರೆ ಆಗಿದ್ದು, ಮುಂದಿನ ದಿನಗಳಲ್ಲಿ ೧೦೦ ಹಾಸಿಗೆಯ ಆಸ್ಪತ್ರೆ ಮಾಡಲು ಯೋಜನೆ ರೂಪಿಸುತ್ತೇವೆ ಎಂದು ಸಚಿವ ಹೆಬ್ಬಾರ್ ತಿಳಿಸಿದರು.
ಕೋವಿಡ್ -೧೯ ನಿಯಂತ್ರಣಕ್ಕೆ ಅನೇಕ ಸಂಘ ಸಂಸ್ಥೆಗಳು ಸರ್ಕಾರಕ್ಕೆ ನೆರವು ನೀಡಿ, ರೋಗ ನಿಯಂತ್ರಣ ಮಾಡಲು ಸರ್ಕಾರದ ಜತೆ ಕೈಜೋಡಿಸಿವೆ ಎಂದು ತಿಳಿಸಿದರು.
ಲಾಕ್‌ಡೌನ್ ಸಂದರ್ಭದಲ್ಲಿ ಶ್ರಮಿಕರಿಗೆ ಅವರ ಮನೆಗಳಿಗೆ ತಲುಪಿಸಲು ರೇಲ್ವೆ ಇಲಾಖೆ ಮತ್ತು ಸಾರಿಗೆ ಇಲಾಖೆಯು ಬಹಳಷ್ಟು ಶ್ರಮ ಪಟ್ಟಿದೆ ಎಂದು ತಿಳಿಸಿದರು.
ಕಾರ್ಮಿಕರು, ಭಿಕ್ಷಕರು ಹಾಗೂ ಅನಾಥರಿಗಾಗಿ ಅಂಗನವಾಡಿ, ಹಾಸ್ಟೆಲ್ ಗಳ ಮೂಲಕ ಊಟದ ವ್ಯವಸ್ಥೆ ಮಾಡಲಾಗಿದ್ದು, ಬೆಳಗಾವಿಯಲ್ಲಿ ೪೬ ಸಾವಿರ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು ಎಂದು ತಿಳಿಸಿದರು.
ಶಾಸಕ ಅಭಯ ಪಾಟೀಲ ಮಾತನಾಡಿ, ಅಕ್ಕಸಾಲಿಗರಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಪರಿಹಾರ ನೀಡಬೇಕು ಮತ್ತು ನೇಕಾರರಿಗೆ ಘೋಷಣೆ ಮಾಡಿರುವ ೨ ಸಾವಿರ ಪರಿಹಾರ ಧನವನ್ನು ೫ ಸಾವಿರಕ್ಕೆ ಏರಿಕೆ ಮಾಡಬೇಕು ಎಂದು ಮನವಿ ಮಾಡಿದರು.
ರೇಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ, ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ಅನಿಲ ಬೆನಕೆ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ವಿವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸಚಿವ ಹೆಬ್ಬಾರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ