ಜನಪ್ರಿಯ ನಾಯಕರಿಗಿಂತ ಜನಪರ ನಾಯಕರನ್ನು ಜನ ಆಶಿಸುತ್ತಾರೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

 ಪ್ರಗತಿವಾಹಿನಿ ಸುದ್ದಿ, ಗದಗ  : ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಜಿಮ್ಸ್) ಗಾಂಧಿ ಮೈದಾನದಲ್ಲಿ  ಜಿಲ್ಲೆಯ ವಿವಿಧ ಕಟ್ಟಡ ಕಾಮಗಾರಿಗಳ ಉದ್ಘಾಟನೆ, ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೆ.26 ರಂದು ನೇರವೇರಿಸಿದರು. 
ಜೀಮ್ಸ್ ಆವರಣದಲ್ಲಿ ಇಂದು ಉದ್ಘಾಟನೆಗೊಂಡ ಕಾಮಗಾರಿಗಳ ವಿವರ ಇಂತಿದೆ. ಜಿಮ್ಸ್ ನಲ್ಲಿ 22.82 ಕೋಟಿ ರೂ.ಗಳ ಅನುಧಾನದ ವೆಚ್ಚದಲ್ಲಿ 6 ಅಂತಸ್ತಿನ ಬಾಲಕ ಮತ್ತು ಬಾಲಕಿಯರ ವಸತಿ ನಿಲಯ, ಆಮ್ಲಜನಕ ಉತ್ಪಾದನಾ ಘಟಕದ ಲೋಕಾರ್ಪಣೆ, 20 ಕೆ.ಎಲ್ ಸಾಮರ್ಥ್ಯದ ಆಮ್ಲಜನಕ ಸಂಗ್ರಹಗಾರದ ಘಟಕದ ಉದ್ಘಾಟನೆ. ಜಿಮ್ಸ್ ಆವರಣದಲ್ಲಿ 100 ಹಾಸಿಗೆಗಳ ಮಾಡ್ಯುಲರ್ ಆಸ್ಪತ್ರೆಯ ನಿರ್ಮಾಣ ಕಾಮಗಾರಿಗೆ ಚಾಲನೆ, 20 ಹಾಸಿಗೆಗಳ ಚಿಕ್ಕ ಮಕ್ಕಳ ತೀವ್ರ ನಿಗಾ ಘಟಕದ ಉದ್ಘಾಟನೆ ಮತ್ತು ಜಿಮ್ಸ್ ನಲ್ಲಿ ನೂತನವಾಗಿ ಮಂಜೂರಾಗಿರುವ 17 ವಿವಿಧ ವಿಭಾಗಗಳ ಪ್ರಾರಂಭಗೊಳ್ಳುತ್ತಿರುವ ಪೊಸ್ಟ್ ಫಿಜಿ ಫೆಲೋಷಿಪ್ ಕೋರ್ಸ್ಗಳ  ಪ್ರಾರಂಭೋತ್ಸವಕ್ಕೆ ಚಾಲನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದರು.
ಸಖಿ ಒನ್ ಸ್ಪಾಪ್ ಸೆಂಟರ್ ಕಟ್ಟಡ, ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ ಯೋಜನೆಯಡಿ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ನಿರ್ಮಿಸಲಾದ 50 ಹಾಸಿಗೆಗಳ ಆಯುಷ್ ಆಸ್ಪತ್ರೆಯ ಲೋಕಾರ್ಪಣೆಯನ್ನು ಸಿಎಂ ಮಾಡಿದರು. ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯ 12, ರೋಣ ಪೊಲೀಸ್ ಠಾಣಾ ವ್ಯಾಪ್ತಿಯ 12, ಹಾಗೂ ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ 12 ಪೊಲೀಸ್ ವಸತಿ ಗೃಹಗಳ ಕಾಮಗಾರಿಗಳ ಮತ್ತು ಗಜೇಂದ್ರಗಡ ಪೊಲೀಸ್ ಠಾಣಾ ಕಟ್ಟಡ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆಯನ್ನು ಮುಖ್ಯಮತ್ರಿ ಬಸವರಾಜ ಬೊಮ್ಮಾಯಿ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ, ಶಾಸಕ ಎಚ್.ಕೆ.ಪಾಟೀಲ, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕರಾದ ಕಳಕಪ್ಪ ಬಂಡಿ, ಸಂಸದರುಗಳಾದ ಶಿವಕುಮಾರ ಉದಾಸಿ, ಪಿ.ಸಿ.ಗದ್ದಿಗೌಡರ. ಶಾಸಕರಾದ ಎಸ್.ವಿ.ಸಂಕನೂರ, ರಾಮಣ್ಣ ಲಮಾಣಿ, ರಾಜ್ಯ ದ್ರಾಕ್ಷರಸ ಮಂಡಳಿಯ ಅಧ್ಯಕ್ಷ ಕಾಂತಿಲಾಲ್ ಬನ್ಸಾಲಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ್ ಮೊಹಸೀನ್, ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು, ಜಿ.ಪಂ. ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ, ಜಿಮ್ಸ್ ನಿರ್ದೇಶಕ ಡಾ.ಪಿ.ಎಸ್.ಬೂಸರಡ್ಡಿ, ಪ್ರಾಂಶುಪಾಲ ಡಾ.ರಾಜು.ಜಿ.ಎಮ್, ಜಿಲ್ಲಾ ಶಸ್ತçಚಿಕಿತ್ಸಕ ಡಾ.ಬಿ.ಸಿ. ಕರೆಗೌಡರ್, ವೈದ್ಯಕೀಯ ಅಧೀಕ್ಷಕ ಡಾ.ರಾಜಶೇಖರ ಮ್ಯಾಗೇರಿ, ಮುಖ್ಯ ಆಡಳಿತಾಧಿಕಾರಿ ಎಂ.ಸತೀಶ ಕುಮಾರ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಆರ್ಥಿಕ ಸಲಹೆಗಾರ ಜೆ.ಸಿ.ಪ್ರಶಾಂತ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಜನಪ್ರಿಯ ನಾಯಕರಿಗಿಂತ ಜನಪರ ನಾಯಕರನ್ನು ಜನ ಆಶಿಸುತ್ತಾರೆ  

ಪ್ರಗತಿವಾಹಿನಿ ಸುದ್ದಿ, ಗದಗ  : ಜನಪ್ರಿಯ ನಾಯಕರಿಗಿಂತ ಜನಪರ ನಾಯಕರನ್ನು ಜನ ಆಶಿಸುತ್ತಾರೆ. ಈ ನಿಟ್ಟಿನಲ್ಲಿ ಜನಪ್ರಿತಿನಿಧಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕಾಗಿದ್ದು ಅಭಿವೃದ್ಧಿ ಪರ ಕಾರ್ಯಗಳಲ್ಲಿನ ಎಲ್ಲ ಸಮಸ್ಯೆ ಸವಾಲು ಮೆಟ್ಟು ನಿಂತಲ್ಲಿ ಉತ್ತಮ ನಾಯಕನಾಗಲು ಸಾಧ್ಯ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ನುಡಿದರು.
ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ಸೆ.26 ರಂದು ಜರುಗಿದ ನೂತನ 3 ಅಂತಸ್ತಿನ ಬಾಲಕ ಮತ್ತು ಬಾಲಕಿಯರ ವಸತಿ ನಿಲಯ, ಆಮ್ಲಜನಕ ಉತ್ಪಾದನಾ ಘಟಕ, 20 ಕೆ.ಎಲ್. ಆಮ್ಲಜನಕರ ಸಂಗ್ರಹಣ ಘಟಕ, ಹೈ ಎಂಡೆಡ್ ವೆಂಟಿಲೇಟರ್ಸ ಹಾಗೂ 250 ಹಾಸಿಗೆಗಳ ಮೀಸಲು ಆಸ್ಪತ್ರೆ, ಆಯುಷ ಕಟ್ಟಡ, ಧ್ವನಿ ನಿಯಂತ್ರಿತ ಭೋಧನಾ ಕೊಠಡಿ, ಅಲ್ಟ್ರಾ ಮಾಡರ್ನ ಮ್ಯೂಸಿಯಂ, ಸಖಿ ಒನ್ ಸ್ಟಾಫ್ ಸೆಂಟೆ ಕಟ್ಟಡ, 20 ಪಿಡಿಯಾಟ್ರಿಕ ಆಯ್.ಸಿ.ಯು ಬೆಡಗಳ ಲೋಕಾರ್ಪಣೆ, 17 ವಿವಿಧ ವಿಭಾಗಗಳಲ್ಲಿ ಪ್ರಾರಂಭಗೊಳ್ಳುತ್ತಿರುವ ಸ್ನಾತ್ತಕೋತ್ತರ ಫೆಲೋಶಿಪ್ ಕೋರ್ಸ, 100 ಹಾಸಿಗೆಯ ಮಾಡ್ಯೂಲ್ ಆಸ್ಪತ್ರೆ ಕಾಮಗಾರಿ, ಸ್ವಾತಂತ್ರದ ಅಮೃತ ಮಹೋತ್ಸವ, ಗದಗ ಜಿಲ್ಲೆಯ ರಜತ ಸಂಭ್ರಮ ಹಾಗೂ ಆರೋಗ್ಯ ಕರ್ನಾಟಕ-ಆಯುಷ್ಮಾನ ಭಾರತ ಯೋಜನೆಯ 3ನೇ  ವರ್ಷಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಖಂಡ ಧಾರವಾಡ ಜಿಲ್ಲೆಯನ್ನು ವಿಭಜಿಸಿ ಗದಗ, ಹಾವೇರಿ, ಧಾರವಾಡ ಮೂರು ಜಿಲ್ಲೆಗಳನ್ನಾಗಿಸಲಾಯಿತು. ದಶಕಗಳು ಕಳೆದರು, ಜಿಲ್ಲೆ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಅಭಿವೃದ್ಧಿ ಕುಂಠಿತಗೊಂಡಿತ್ತು. ಈಗ ಕಾಲ ಬದಲಾವಣೆಯಾಗಿದ್ದು ಜಿಲ್ಲೆ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಅಭಿವೃದ್ಧಿಯನ್ನು ಕಾಣಬಹುದಾಗಿದೆ.
ಕೋವಿಡ್-19 ರ ಮೊದಲನೇ ಹಾಗೂ ಎರಡನೇ ಅಲೆ ಸಂದರ್ಭದಲ್ಲಿ ಜಿಮ್ಸ ಆಸ್ಪತ್ರೆಯು ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಯಾವುದೇ ವೈದ್ಯಕೀಯ ಸಂಸ್ಥೆ ನಡೆಸಲು ಕೇವಲ ಉತ್ತಮ ಕಟ್ಟಡ, ಹಣಕಾಸು ಮಾತ್ರವಲ್ಲದೇ ನುರಿತ ತಜ್ಞರು, ಪ್ರಯೋಗಾಲಯಗಳ ಅವಶ್ಯಕತೆವಿದ್ದು ಸಾರ್ವಜನಿಕರ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ನೂತನವಾಗಿ ಸ್ಥಾಪಿಸಲಾಗುವ ವೈದ್ಯಕೀಯ ಕಾಲೆಜುಗಳ ಕಡೆ ಹೆಚ್ಚಿನ ಗಮನ ಹರಿಸಲಾಗುವದು ಎಂದರು.
ಕೋವಿಡ್ ಎಲ್ಲರ ಜೀವನದಲ್ಲೂ ಒಂದಿಲ್ಲ ಒಂದು ತರಹ ತನ್ನ ಭೀಕರ ಪ್ರಭಾವವನ್ನು ಬೀರಿದ್ದು ಕೋವಿಡ್ ಮೊದಲನೆ ಅಲೆಯಲ್ಲಿ  ವೈದ್ಯಕೀಯ ಮೂಲ ಸೌಕರ್ಯಗಳನ್ನು ಕೊರತೆ, ಎರಡನೇ ಅಲೆಯಲ್ಲಿ ತಲೆದೊರಿದ ಆಕ್ಸಿಜನ್ ಅಭಾವವನ್ನು ಸಮರ್ಥವಾಗಿ ನಿಭಾಯಿಸುವ ದಿಟ್ಟ ನಿರ್ಧಾರದೊಂದಿಗೆ ದೇಶದ ಪ್ರಧಾನಿ ಅವರು ಆತ್ಮನಿರ್ಭರದಡಿ ದೇಶದಲ್ಲಿಯೇ ಲಸಿಕೆ, ಮಾಸ್ಕ, ಸ್ಯಾನಿಟೈಸರ ಹಾಗೂ ಆಕ್ಸಿಜನ್  ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಪ್ರಸ್ತುತ ಸಂಭಾವ್ಯ ಕೋವಡ್ 3 ನೇ ಅಲೆ ಎದುರಾದಲ್ಲಿ ಅದನ್ನು ಸಮರ್ಥವಾಗಿ ನಿಭಾಯಿಸಲು ಸರ್ಕಾರ ಸನ್ನಧ್ದವಾಗಿದ್ದು ಆಯ್.ಸಿ.ಯು ಹಾಗೂ ವೆಂಟಿಲೇಟರಗಳ ಬಳಕೆಗೆ ಬೇಕಾಗುವ ಶುದ್ಧ ಆಕ್ಸ್ಸಿಜಿನ್ ಅಗತ್ಯವಿದ್ದು ಇದರ ಸಿದ್ಧತೆಮಾಡಿಟ್ಟುಕೊಳ್ಳುವಂತೆ ತಿಳಿಸಿದರು.
ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವದು. ಜನರಲ್ಲಿನ ಆತ್ಮವಿಶ್ವಾಸಿ ಹೆಚ್ಚಿಸುವ ನಿಟ್ಟಿನಲ್ಲಿ ಈ ಭಾಗದಲ್ಲಿ ಔದ್ಯೋಗಿಕರಣ ಹೆಚ್ಚಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುವ ಕೈಗಳಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಎಂಪ್ಲಾಯಮೆಂಟ್ ಇನವೆನಷನ್ ಪಾಲಿಸಿ ತರಲಾಗುವದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸಿದ್ದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ ಜಿಮ್ಸ ಕಡಿಮೆ ಅವಧಿಯಲ್ಲಿ ಉತ್ತಮ ಅಭಿವೃದ್ಧಿಯಾಗಿದ್ದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ವರ್ಗದ ವೈದ್ಯಕೀಯ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವದರ ಮೂಲಕ ಅನೇಕ ಜೀವಗಳ ಜೀವದಾತರಾಗಿದ್ದು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ರಾಜಕಾರಣವನ್ನು ಬದಿಗಿಟ್ಟು ಎಲ್ಲ ಜನಪ್ರತಿನಿಧಿಗಳು ಒಟ್ಟಾಗಿ ಶ್ರಮಿಸಲು ಮುಂದಾಗುವಂತೆ ಸಭಾಪತಿಗಳು ಇದೇ ಸಂದರ್ಭದಲ್ಲಿ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಕೆ.ಪಾಟೀಲ ಮಾತನಾಡಿ, ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದು ಸಂತಸದ ಸಂಗತಿಯಾಗಿದ್ದು ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಮಹತ್ತರ ಬದಲಾವಣೆಯಾಗುವ ನಂಬಿಕೆ ಇದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಜಿಮ್ಸ ಉತ್ತಮ ಕಾರ್ಯನಿರ್ವಹಿಸಿದ್ದು ಈ ಕಾರ್ಯದಲ್ಲಿ ದುಡಿದ ಆರೋಗ್ಯ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿಗಳ ಅಪರಿಮಿತ ಶ್ರಮದಿಂದಾಗಿ ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಕಡಿಮೆ ಆಗಿರುವದು ಉತ್ತಮ ನಿದರ್ಶನವಾಗಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯ ಮಂತ್ರಿಯಾಗಿ ಜಿಲ್ಲೆಗೆ ಚೊಚ್ಚಲು ಭೇಟಿ ನೀಡಿದ ಸವಿನೆನಪಿಗಾಗಿ ಜಿಲ್ಲೆಗೆ ಸೂಪರ ಸ್ಪೆಶಾಲಿಟಿ ಆಸ್ಪತ್ರೆ, ಟ್ರಾಮಾ ಸೆಂಟರ್‍ನ ಅವಶ್ಯಕವಿದ್ದು ಮುಂಬರುವ ಬಜೆಟನಲ್ಲಿ ಘೋಷಿಸುವಂತೆ ಮನವಿ ಮಾಡಿದರು.
ಲೋಕೊಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾನ್ಯ ಮುಖ್ಯಮಂತ್ರಿಗಳು ತಮ್ಮ ಚಿಕ್ಕ ಅವಧಿಯಲ್ಲಿಯೇ ಉತ್ತಮ ಆಡಳಿತ ನೀಡುವದರ ಮೂಲಕ ಸರಳತೆಗೆ ದಾರಿಮಾಡಿಕೊಟ್ಟು ಇತರರಿಗೆ ಮಾದರಿಯಾಗಿದ್ದಾರೆ ಎಂದರು. ರಾಜ್ಯದಲ್ಲಿ ಹೆಚ್ಚಿನ ವೆಂಟಿಲೇಟರ್ ಹೊಂದಿದಂತಹ ಪ್ರಥಮ ಆಸ್ಪತ್ರೆ ಜಿಮ್ಸ ಆಗಿದ್ದು ಇದೊಂದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಕಳಕಪ್ಪ ಬಂಡಿ, ಸಂಸದರುಗಳಾದ ಶಿವಕುಮಾರ ಉದಾಸಿ, ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ ಸದಸ್ಯರಾದ ಎಸ್.ವಿ.ಸಂಕನೂರ, ಶಾಸಕ ರಾಮಣ್ಣ ಲಮಾಣಿ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ್ ಬನ್ಸಾಲಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಅಸುಂಡಿ ಗ್ರಾ.ಪಂ. ಅಧ್ಯಕ್ಷೆ ಜಯಶ್ರೀ ಚ.ಅಣ್ಣಿಗೇರಿ, ಉಪಾದ್ಯಕ್ಷ ಹನುಮಪ್ಪ ಪೂಜಾರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ ಮೊಹಸಿನ್, ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು, ಜಿ.ಪಂ. ಸಿ.ಇ.ಓ. ಭರತ ಎಸ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯತೀಶ ಎನ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಜಿಮ್ಸ ಬೋಧಕ-ಭೋಧಕೇತರ ಸಿಬ್ಬಂದಿ ವಿಧ್ಯಾರ್ಥಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button