ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿದ್ಯಾರ್ಥಿಗಳಿಗೆ ಸರಿ ತಪ್ಪು ಏನೆಂದು ತಿಳಿದುಕೊಳ್ಳುವ ಶಕ್ತಿ ಸಿಕ್ಕಿದರೆ ಮಾತ್ರ ಸಂಘರ್ಷ ತಪ್ಪುತ್ತದೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ಸಮಾಜ ಕಲ್ಯಾಣ ಕಚೇರಿಯಲ್ಲಿ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಶಾಲೆಗಳಿಗೆ ಡೆಸ್ಕ್ ವಿತರಣಾ ಕಾರ್ಯಕ್ರಮ ಹಾಗೂ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಅಪಪ್ರಚಾರವನ್ನು ಜನರು ಮೊದಲು ನಂಬುತ್ತಾರೆ. ಸತ್ಯವನ್ನು ನೂರು ಸಾರಿ ಹೇಳಿದರೂ ಜನರು ನಂಬುವುದಿಲ್ಲ, ಸುಳ್ಳನ್ನು ಒಂದು ಬಾರಿಗೆ ಹೇಳಿದರೂ ನಂಬಿ ಬಿಡುತ್ತಾರೆ. ಹೀಗಾಗಿ ಸರಿ ಏನು ಎಂದು ತಿಳಿದುಕೊಳ್ಳುವ ಶಕ್ತಿ ಇರಬೇಕು ಎಂದರು.
ಬುದ್ಧ ಬಸವ ಅಂಬೇಡ್ಕರ ಅವರ ಆದರ್ಶಗಳನ್ನು ನಾವು ಅಳವಡಿಸಿಕೊಂಡಿದ್ದರೆ ಈವರೆಗೂ ಹೋರಾಟ ಮಾಡುವ ಅವಶ್ಯಕತೆ ಇರುತ್ತಿರಲಿಲ್ಲ. ಹೀಗಾಗಿ ಇಂತಹ ಮಹಾಪುರುಷರ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕಾರ್ಯ ಮಾಡಬೇಕು ಎಂದು ಶಿಕ್ಷಕ ವೃಂದದಲ್ಲಿ ಮನವಿ ಮಾಡಿದರು. ಸರಿಯಾದ ಮಾರ್ಗದಲ್ಲಿ ನಡೆದರೆ ಅವರಾಗಿಯೇ ಸಮಾಜದ ಮುಖ್ಯವಾಹಿನಿಗೆ ಬರುತ್ತಾರೆ ಎಂದರು.
ನಮ್ಮ ದೇಶದಲ್ಲಿ ಸಂಘರ್ಷ ಹೆಚ್ಚಾಗುತ್ತಿದೆ. ದೇಶ ಇಭ್ಭಾಗವಾಗುವ ಮಾರ್ಗದಲ್ಲಿ ನಡೆದಿದೆ. ಅವರವರ ರಾಜಕೀಯ ಇಚ್ಛಾಶಕ್ತಿ ಅನುಗುಣವಾಗಿ ನಡೆದುಕೊಳ್ಳುತ್ತಿದ್ದೇವೆ. ಆದ್ರೆ ನಾವು ಜಾಗೃತರಾಗಿರಬೇಕು, ಯಾವ ಪಕ್ಷದವರೂ ಏನೇ ಹೇಳಿದರು ನಮಗೆ ತಿಳಿದುಕೊಳ್ಳುವಂತಹ ಶಕ್ತಿ ಇರಬೇಕು. ಅವರು ತಮ್ಮ ಲಾಭಕ್ಕಾಗಿ ಏನೂ ಬೇಕಾದ್ರೂ ಹೇಳುತ್ತಾರೆ, ಆದ್ರೆ ಅದು ಸರಿ ಅಥವಾ ತಪ್ಪು ಎಂಬುದು ತಿಳಿದುಕೊಳ್ಳುವ ಶಕ್ತಿ ನಮ್ಮಲ್ಲಿ ಇರಬೇಕು. ವಿದ್ಯಾರ್ಥಿಗಳಿಗೆ ಸರಿ ತಪ್ಪು ಏನೆಂದು ತಿಳಿದುಕೊಳ್ಳುವ ಶಕ್ತಿ ಸಿಕ್ಕಿದರೆ ಮಾತ್ರ ಸಂಘರ್ಷ ತಪ್ಪುತ್ತದೆ ಎಂದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹ ನಿರ್ದೇಶಕಿ ಉಮಾ ಸಾಲಿಗೌಡರ, ವೀರಕುಮಾರ ಪಾಟೀಲ, ಅರುಣ ಕಟಾಂಬಳೆ, ಸಿದ್ದು ಸುಣಗಾರ, ಬುಡ್ರಿ, ಬಡಿಗೇರ, ಡಿಡಿಪಿಐ ಎ.ಬಿ. ಪುಂಡಲೀಕ ಸೇರಿ ಇತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ