ಪ್ರಗತಿವಾಹಿನಿ ಸುದ್ದಿ, ಗೋಕಾಕ : ೮ನೇ ಬಾರಿಗೆ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ, ನೇಗಿಲಯೋಗಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಸರ್ವತೋಮುಖ ಏಳ್ಗೆ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ವಿಶೇಷ ಆದ್ಯತೆ ನೀಡುವ ಮೂಲಕ ಸರ್ವರಿಗೂ ಸಮಪಾಲು ನೀಡಿದ್ದಾರೆಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿದರು.
ಸೋಮವಾರದಂದು ೨೦೨೧-೨೨ ನೇ ಸಾಲಿನ ರಾಜ್ಯ ಸರ್ಕಾರದ ಆಯವ್ಯಯ ಪತ್ರವನ್ನು ಮಾರ್ಚ್ ೮ ರ ವಿಶ್ವ ಮಹಿಳಾ ದಿನಾಚರಣೆಯಂದು ಮಂಡಿಸಿರುವ ಮುಖ್ಯಮಂತ್ರಿಗಳು ಮಹಿಳೆಯರಿಗೆ ಹಲವಾರು ಬಂಪರ್ ಯೋಜನೆಗಳನ್ನು ಪ್ರಕಟಿಸಿದ್ದಾರೆಂದು ತಿಳಿಸಿದರು.
ಒಟ್ಟು ೨,೪೩,೭೩೪ ಕೋಟಿ ರೂ. ಮೊತ್ತದ ಆಯವ್ಯಯ ಮಂಡಿಸಿರುವ ಮುಖ್ಯಮಂತ್ರಿಗಳು ಎಲ್ಲ ಕ್ಷೇತ್ರಗಳಿಗೂ ವಿಶೇಷ ಅನುದಾನ ಒದಗಿಸಿಕೊಟ್ಟಿದ್ದಾರೆ. ಎಲ್ಲ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೂ ವಿಶೇಷ ಅನುದಾನ ಕಲ್ಪಿಸಿಕೊಡುವ ಮೂಲಕ ಸರ್ವ ಸಮಾಜಗಳ ಆರ್ಥಿಕಾಭಿವೃದ್ಧಿಗೆ ಉತ್ತೇಜನ ಕಲ್ಪಿಸಿಕೊಟ್ಟಿದ್ದಾರೆಂದು ತಿಳಿಸಿದರು.
ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಒಟ್ಟು ೮ ಬಾರಿ ಬಜೆಟ್ ಮಂಡಿಸಿರುವ ಕೀರ್ತಿಗೆ ಪಾತ್ರರಾಗಿದ್ದಾರೆ. ಸಮಗ್ರ ಅಭಿವೃದ್ಧಿಯ ದೃಷ್ಟಿಕೋನವನ್ನು ಹೊಂದಿ ಅತ್ಯುತ್ತಮ ಬಜೆಟ್ ಮಂಡಿಸಿದ್ದಾರೆ. ಹಲವಾರು ಹೊಸ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಕೊರೋನಾ ಹತ್ತಿಕ್ಕಲು ಮತ್ತೆ ಮುಂಜಾಗ್ರತಾ ಕ್ರಮಗಳಿಗಾಗಿ ಅನುದಾನವನ್ನು ಸಹ ಮೀಸಲಿಟ್ಟಿದ್ದಾರೆ. ಹಿಂದಿರುವ ಮಾರ್ಗಸೂಚಿಗಳನ್ನು ಸಹ ಪಾಲಿಸುವಂತೆ ಸಾರ್ವಜನಿಕರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ. ದೂರದೃಷ್ಟಿಯನ್ನು ಒಳಗೊಂಡಿರುವ ಇಂದಿನ ಬಜೆಟ್ ಎಲ್ಲರಿಗೂ ಅನುಕೂಲವಾಗಲಿದೆ. ಬಿ.ಎಸ್. ಯಡಿಯೂರಪ್ಪನವರು ಮಂಡಿಸಿರುವ ಬಜೆಟ್‌ನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿರುವುದಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ