ಬೆಂಗಳೂರು ನಿರ್ವಹಣೆಗೆ ಇಲಾಖೆಗಳ ನಡುವೆ ಸಮನ್ವಯತೆ ಕುರಿತು ಜುಲೈ 27 ಕ್ಕೆ ಜನಪ್ರತಿನಿಧಿಗಳ ಸಭೆ: ಡಿಸಿಎಂ ಡಿ.ಕೆ.ಶಿವಕುಮಾರ್
ಪ್ರಗತಿವಾಹಿನಿ ಸುದ್ದಿ: “ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್ ಎಸ್ ಬಿ, ಬೆಸ್ಕಾಂ ಸೇರಿದಂತೆ ಬೆಂಗಳೂರು ಅಭಿವೃದ್ದಿಗೆ ಇರುವ ಪ್ರತಿ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸುವ ವಿಚಾರವಾಗಿ ಬೆಂಗಳೂರು ವ್ಯಾಪ್ತಿಯ ಶಾಸಕರು, ಸಂಸದರ ಸಭೆಯನ್ನು ಜುಲೈ 27 ರಂದು ನಡೆಸಲಾಗುವುದು”ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಶಾಸಕರಾದ ಎಸ್. ಸುರೇಶ್ ಕುಮಾರ್, ರಾಮಮೂರ್ತಿ ಅವರ ಪ್ರಸ್ತಾವನೆಗೆ ಡಿಸಿಎಂ ಅವರು ಹೀಗೆ ಪ್ರತಿಕ್ರಿಯಿಸಿದರು.
ಇದಕ್ಕೂ ಮೊದಲು ಬಿಜೆಪಿ ನಾಯಕರು ಬೆಂಗಳೂರು ಅಭಿವೃದ್ದಿಗೆ ಇರುವ ಇಲಾಖೆಗಳ ನಡುವೆ ಸಮನ್ವಯತೆ ಕೊರತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಡಿಸಿಎಂ ಅವರು, “ಅಶೋಕ್, ಸುರೇಶ್ ಕುಮಾರ್ ಹಾಗೂ ರಾಮಮೂರ್ತಿ ಅವರ ಮಾತಿಗೆ ನನ್ನ ಸಹಮತವಿದೆ. ಕಳೆದ ಒಂದು ವರ್ಷದಿಂದ ಸಮನ್ವಯತೆ ಸಾಧಿಸಲು ನಾನೇ ಸಾಕಷ್ಟು ಕಸರತ್ತು ನಡೆಸಿದ್ದೇನೆ. ಇದರಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ. ಆದರೆ ಒಂದು ಹಂತಕ್ಕೆ ಸಮಸ್ಯೆ ನಿವಾರಣೆ ಮಾಡಿದ್ದೇನೆ. ಆದರೆ ಪ್ರಯತ್ನ ಮುಂದುವರೆಸಿದ್ದೇನೆ. ಪ್ರತಿಪಕ್ಷದವರು ಸಹಕಾರ ನೀಡಿದರೆ ಕಸ ವಿಲೇವಾರಿ, ಕುಡಿಯುವ ನೀರು, ಸಂಚಾರ ದಟ್ಟಣೆ, ಬೀದಿ ದೀಪ, ತೆರಿಗೆ ಸಂಗ್ರಹ, ಹಸಿರೀಕರಣ – ಹೀಗೆ ಅನೇಕ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಬಹುದು”ಎಂದು ತಿಳಿಸಿದರು.
“ನನ್ನ ಬಳಿ ಎರಡು ಆಯ್ಕೆಗಳಿದ್ದು, ಸ್ಪೀಕರ್ ಅವರು ಅವಕಾಶ ನೀಡಿದರೆ ಸದನದಲ್ಲೇ ಚರ್ಚೆ ನಡೆಸಬಹುದು ಅಥವಾ ಸದನ ಮುಗಿದ ಮಾರನೇ ದಿನವೇ ನೀವು ತಿಳಿಸಿದ ಜಾಗದಲ್ಲಿ ಇದೇ ವಿಚಾರವಾಗಿ ಇಡೀ ದಿನ ಚರ್ಚೆ ನಡೆಸೋಣ” ಎಂದರು. ಆಗ ʼಎರಡನೇ ಆಯ್ಕೆಯೇ ಉತ್ತಮʼ ಎಂದು ಸ್ಪೀಕರ್ ಯು.ಟಿ.ಖಾದರ್ ಅವರು ಹೇಳಿದರು.
ನೀವು ವಿಧಾನಸಭೆ ಕಲಾಪವನ್ನು ಯಾವಾಗ ಮುಗಿಸುತ್ತೀರಾ ಎಂದು ಸ್ಪೀಕರ್ ಅವರನ್ನು ಶಿವಕುಮಾರ್ ಅವರು ಪ್ರಶ್ನಿಸಿದಾಗ “26ಕ್ಕೆ ಮುಗಿಸುತ್ತೇವೆ. ನಿಮ್ಮ ಉತ್ತರ ಹಾಗೂ ಅವರ ಸಲಹೆ ಎರಡೂ ಸರಿಯಿದೆ. ಚರ್ಚೆ ಇಲ್ಲಿ ಬೇಡ, ಸದನದ ಹೊರಗೆ ಇಟ್ಟುಕೊಳ್ಳಿ” ಎಂದು ಯು.ಟಿ.ಖಾದರ್ ಹೇಳಿದರು. “ಹಾಗದರೆ ಈ ಸಭೆಯನ್ನು ಇದೇ 27 ರಂದು ನಡೆಸೋಣ”ಎಂದು ಡಿಸಿಎಂ ಅವರು ಹೇಳಿದರು.
ಎತ್ತಿನಹೊಳೆ ನೀರು ತುಮಕೂರಿಗೆ ತಲುಪುತ್ತದೆಯೇ ಎನ್ನುವ ಭಯ ಕಾಡುತ್ತಿದೆ
“ಎತ್ತಿನಹೊಳೆ ಯೋಜನೆಗೆ 25 ಸಾವಿರ ಕೋಟಿ ಹಣ ಖರ್ಚಾಗಿದೆ. ಕಾಲುವೆಗಳಿಂದ ನೀರನ್ನು ಮದ್ಯೆ, ಮದ್ಯೆ ಪಂಪ್ ಸೆಟ್ ಮೂಲಕ ಎತ್ತುವ ಕಾರಣಕ್ಕೆ ನನಗೆ ಹಾಗೂ ನಮ್ಮ ಶಾಸಕರಿಗೆ ಭಯವಾಗುತ್ತಿದ್ದು, ತುಮಕೂರು ಭಾಗಕ್ಕೂ ನೀರು ತಲುಪುತ್ತದೆಯೇ ಎನ್ನುವ ಅನುಮಾನ ಬಂದಿದೆ” ಎಂದು ವಿಧಾನಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆತಂಕ ವ್ಯಕ್ತಪಡಿಸಿದರು.
ಶಾಸಕ ಜಗದೀಶ್ ಶಿವ ಗುಡಗಂಟಿ ಅವರು ತುಂಗಳ- ಸಾವಳಗಿ ಏತ ನೀರಾವರಿ ಯೋಜನೆಯ ಕೊನೆಯ ಭಾಗಗಳ ರೈತರಿಗೆ ನೀರು ತಲುಪುತ್ತಿಲ್ಲ ಎನ್ನುವ ವಿಚಾರವಾಗಿ ಗಮನ ಸೆಳೆದಾಗ ಉತ್ತರಿಸಿದ ಡಿಸಿಎಂ ಅವರು, “ಎತ್ತಿನಹೊಳೆ ಯೋಜನೆಯ ಕಾಲುವೆಗಳಿಗೆ ನೀರು ಹರಿಸಿದರೆ ನೀರನ್ನು ಪಂಪ್, ಸೈಫನ್ ಮಾಡುತ್ತಾರೆ. ಅದೇ ರೀತಿ ಉತ್ತರ ಕರ್ನಾಟಕದ ಅನೇಕ ಕಡೆ ಶೇ 90 ರಷ್ಟು ನೀರನ್ನು ಪಂಪ್ ಮಾಡಲಾಗುತ್ತಿದೆ. ಇದನ್ನು ತಡೆಯುವ ಕೆಲಸ ಅಧಿಕಾರಿಗಳಿಂದ ಆಗುವುದಿಲ್ಲ. ಜನಪ್ರತಿನಿಧಿಗಳಾದ ನಾವುಗಳು ನಮ್ಮ ರೈತರಿಗೆ ಮನವರಿಕೆ ಮಾಡಿಕೊಡಬೇಕು” ಎಂದರು.
ಸದನ ಒಪ್ಪುವುದಾದರೆ ವಾರದೊಳಗೆ ಬಿಲ್ ತಯಾರು
“ಮಂಡ್ಯ, ಹಾಸನ, ಬಾಗಲಕೋಟೆ ಸೇರಿದಂತೆ ರಾಜ್ಯದ ನೀರಾವರಿ ಪ್ರದೇಶಗಳ ಟೇಲ್ ಎಂಡ್ ಭಾಗಗಳಿಗೆ ನೀರು ತಲುಪುತ್ತಿಲ್ಲ. ಏತ ನೀರಾವರಿ ಮಾಡಿದರೂ ಸಹ ಶೇ 50 ರಷ್ಟು ನೀರು ಸಹ ಹೋಗುತ್ತಿಲ್ಲ. ಸದನ ಒಪ್ಪುವುದಾದರೆ ಇದನ್ನು ತಡೆಯಲು ವಾರದೊಳಗೆ ಬಿಲ್ ತಯಾರು ಮಾಡಲಾಗುವುದು” ಎಂದರು.
“ಇದನ್ನು ಯಾವ ರೀತಿ ನಿಯಂತ್ರಣ ಮಾಡಬೇಕು ಎಂದು ಪರಿಶೀಲನೆ ನಡೆಸಲಾಗಿದೆ. ನಾವು ನೀರನ್ನು ಏತ ನೀರಾವರಿ ಮೂಲಕ ಹರಿಸುತ್ತೇವೆ. ಆ ನೀರನ್ನೇ ಪಂಪ್ ಮೂಲಕ 10 ಕಿಮೀಗಟ್ಟಲೇ ಪಂಪ್ ಮಾಡುತ್ತಾರೆ. ಯೋಜನೆ ಮಾಡಿ ಏನು ಲಾಭ?” ಎಂದು ಹೇಳಿದರು.
ಕೆಆರ್ ಎಸ್ ನೀರು ಮಳವಳ್ಳಿಗೆ ಹೋಗುವುದೇ ಇಲ್ಲ. ಕಾಲುವೆ ಮಾಡಿ 20 ವರ್ಷಗಳಾದರೂ ಗದಗ ಜಿಲ್ಲೆ ನೀರನ್ನೇ ನೋಡಿಲ್ಲ. ಎಲ್ಲರೂ ಸಹಕಾರ ಕೊಟ್ಟರೇ ನಾವು ನೀರಿನ ರಕ್ಷಣೆ ಮಾಡಿ ಕೊನೆಯ ಭಾಗದ ರೈತರಿಗೂ ನೀರು ತಲುಪುವಂತೆ ಮಾಡುವ ಕಾನೂನು ತರಲಾಗುವುದು” ಎಂದು ತಿಳಿಸಿದರು.
ದಯವಿಟ್ಟು ಆದಷ್ಟು ಬೇಗ ವಿಧೇಯಕ ಸಿದ್ದಪಡಿಸಿ, ನಮ್ಮ ಸಂಪೂರ್ಣ ಸಹಕಾರವಿದೆ ಎಂದು ಬಿಜೆಪಿ ಶಾಸಕ ಸಿ.ಸಿ.ಪಾಟೀಲ್ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದರು.
ಕಾವೇರಿ ಜಲಾನಯನ ಪ್ರದೇಶಗಳ ನದಿ ನೀರು ಹರಿವಿನ ಪ್ರಮಾಣ ಮಾಹಿತಿ ನೀಡಿದ ಡಿಸಿಎಂ
ಹಾರಂಗಿ ಜಲಾಶಯಕ್ಕೆ 12,827 ಕ್ಯೂಸೆಕ್ಸ್, ಹೇಮಾವತಿ 14,027, ಕೆ.ಆರ್ ಎಸ್ 25,933, ಕಬಿನಿಗೆ 28,840 ಒಟ್ಟು 56, 626 ಕ್ಯೂಸೆಕ್ಸ್ ನೀರಿನ ಒಳಹರಿವಿದೆ. ಕಾನೂನಿನ ಪ್ರಕಾರ 40 ಟಿಎಂಸಿ ನೀರು ಹೋಗಬೇಕಾಗಿತ್ತು. ಬಿಳಿಗುಂಡ್ಲುವಿನಲ್ಲಿ ದಾಖಲೆ ಪ್ರಕಾರ 6 ಟಿಎಂಸಿ ನೀರು ಹೋಗಿದೆ. ಅಂದರೆ ಪ್ರತಿ ದಿನ ನೀರಿನ ಹರಿವಿನ ಪ್ರಮಾಣ 1.5 ಟಿಎಂಸಿ ಮುಟ್ಟಿದೆ. ಏಕೆಂದರೆ 250 ಕಿ.ಮೀ ನಷ್ಟು ನೀರು ಹರಿಯಬೇಕಿದೆ. ಇದೇ ರೀತಿ ಮಳೆ ಬಂದು ನೀರು ಹರಿದರೆ ತೊಂದರೆಯಾಗುವುದಿಲ್ಲ ಎಂಬುದು ನನ್ನ ಭಾವನೆ” ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ