Latest

ಮೊದಲೇ ನಿಗದಿಯಾಗಿದ್ದ ಮದುವೆಗಳಿಗೆ ಅನುಮತಿ, ಆದರೆ….

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಮೇ 31ರ ವರೆಗೂ 4ನೇ ಹಂತದ ಲಾಕ್ ಡೌನ್ ಮುಂದುವರಿಯಲಿದೆ.

ಆದರೆ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಕಟ್ಟುನಿಟ್ಟಾದ ಲಾಕ್ ಡೌನ್ ಇರುವುದಿಲ್ಲ. ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಕರ್ಫ್ಯೂ ಮಾದರಿಯಲ್ಲಿ ಲಾಕ್ ಡೌನ್ ಇರಲಿದೆ. ಎಲ್ಲಾ ಅಂಗಡಿಗಳೂ 7 ಗಂಟೆಗೆ ಬಾಗಿಲು ಹಾಕಬೇಕು. ವಾಹನ ಸಂಚಾರವೂ ಸ್ಥಗಿತವಾಗಬೇಕು. ಜನರೂ ಅನಗತ್ಯವಾಗಿ ಸಂಚರಿಸಬಾರದು.

ಇದರ ಜೊತೆಗೆ ಪ್ರತಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆ್ಯವರೆಗೆ ಕೂಡ ರಿಯಾಯಿತಿ ಇಲ್ಲ. ಅಂದರೆ ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ ಅಂಗಡಿಗಳೂ ತೆರೆಯುವಂತಿಲ್ಲ. ಜನ ಹಾಗೂ ವಾಹನ ಸಂಚಾರಕ್ಕೂ ಅನುಮತಿ ಇರುವುದಿಲ್ಲ.

ಈ ಮಧ್ಯೆ, ಕೆಲವರು ಭಾನುವಾರಗಳಂದು ಮದುವೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. 4ನೇ ಹಂತದ ಲಾಕ್ ಡೌನ್ ಘೋಷಣೆಯಾಗುವುದಕ್ಕೂ ಮೊದಲೇ ನಿಗದಿಯಾಗಿರುವ ಮದುವೆ ಸಮಾರಂಭಗಳನ್ನೂ ಭಾನುವಾರ ಕೂಡ ನಡೆಸಲು ಸರಕಾರ ಅನುಮತಿ ನೀಡಿದೆ.

ಆದರೆ ಈಗಾಗಲೆ ತಿಳಿಸಿರುವಂತೆ 50 ಜನರಿಗಿಂತ ಹೆಚ್ಚು  ಸೇರುವಂತಿಲ್ಲ. ಮದುವೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸುವುದು ಖಡ್ಡಾಯ. ಸ್ಯಾನಿಟೈಸರ್ ಗಳನ್ನು ಬಳಸಬೇಕು. ಯಾವುದೇ ನಿಯಮಗಳನ್ನು ಮೀರದೆ ಪೂರ್ವ ನಿಗದಿತ ಮದುವೆಗಳನ್ನು ಮಾಡಲು ಅನುಮತಿ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಿದ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲಕುಮಾರ ಆದೇಶ ಹೊರಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button