ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಕಳೆದ ಎರಡು ಮೂರು ದಿನಗಳಿಂದ ಖಾನಾಪುರ ತಾಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ.
ಶಾಸಕಿ ಅಂಜಲಿ ನಿಂಬಾಳಕರ್ ನದಿ ತೀರದಲ್ಲೆಲ್ಲ ಸುತ್ತಾಡಿ ಪರಿಸ್ಥಿತಿಯ ಅವಲೋಕನ ನಡೆಸಿದರು.
ಕಕ್ಕೇರಿ ವರದಿ: ಖಾನಾಪುರ ತಾಲೂಕಿನಲ್ಲಿ ಕಳೆದ ಎರಡು-ಮೂರು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವುದರಿಂದ ನದಿ ತೀರದ ಮತ್ತು ಹಳ್ಳ-ಕೊಳ್ಳದ ಸುತ್ತಲೂ ವಾಸಿಸುವ, ಹೊಲ ಗದ್ದೆಗಳಿಗೆ ಕೂಲಿ ಕೆಲಸ ಮಾಡಲು ತೆರಳಿದ ಜನರ ಪರಿಸ್ಥಿತಿ ಅಯೋಮಯವಾಗಿದೆ.
ತಾಲೂಕಿನ ಪಶ್ಚಿಮ ಘಟ್ಟಭಾಗದಲ್ಲಿ ಹೆಚ್ಚಿನ ಮಳೆ ಆದರೆ ಹೊಲ ಗದ್ದೆಗಳಿಗೆ ತೆರಳಿದ ಜನ, ಮರಳಿ ಮನೆಗೆ ಬಾರದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಕಾಪೋಲಿ ಕೆ.ಜಿ ಗ್ರಾಮದ ರಹವಾಸಿ ವಿಲಾಸ ದತ್ತಾತ್ರೇಯ ದೇಸಾಯಿ(೬೦), ಶಿಂದೊಳ್ಳಿ ಬಿಕೆ ಗ್ರಾಮದ ಹತ್ತಿರವಿರುವ ತನ್ನ ಸ್ವಂತ ಜಮೀನಿನಲ್ಲಿ ಕೆಲಸಕ್ಕೆಂದು ಹೋದಾಗ ವಿಪರೀತ ಮಳೆ ಸುರಿದಿದ್ದರಿಂದ ಪಾಂಡ್ರಿ ನದಿಯ ನೀರಿನ ಪ್ರಮಾಣ ಅತೀ ವೇಗವಾಗಿ ಹೆಚ್ಚಳವಾಗಿದೆ. ದಾಟಿ ಬರಲು ಅನ್ಯ ಮಾರ್ಗವಿಲ್ಲದಿರುವುದರಿಂದ ಸಮೀಪ ಮರದ ಹತ್ತಿ ಕುಳಿತುಕೊಂಡಿದ್ದ ವೃದ್ಧನನ್ನು ರಕ್ಷಿಸುವ ಪ್ರಯತ್ನ ನಡೆದಿದೆ.
ಮುಂಜಾಗ್ರತಾ ದೃಷ್ಟಿಯಿಂದ ತಾಲೂಕಿಗೆ ಎರಡು ಎನ್.ಡಿ.ಆರ್.ಎಫ್ ತಂಡದೊಂದಿಗೆ ಬೋಟ್ ಗಳು, ನಾವಿಕರು ಹಾಗೂ ಹಗ್ಗಗಳನ್ನು ತುರ್ತಾಗಿ ಪೂರೈಸಲು ಬೆಳಗಾವಿ ಜಿಲ್ಲಾಧಿಕಾರಿ ಅವರಿಗೆ ದೂರವಾಣಿ ಮೂಲಕ ಹಾಗೂ ಮನವಿ ಪತ್ರದ ಮುಖಾಂತರ ತಹಶಿಲ್ದಾರ ರೇಶ್ಮಾ ತಾಳಿಕೋಟಿ ವಿನಂತಿಸಿಕೊಂಡಿದ್ದಾರೆ.
ಮುಂದಿನ ಕೆಲವು ದಿನ ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಹೆಚ್ಚಿನ ಮಳೆ ಸುರಿಯುವ ಸಂಭವ ಇರುವುದರಿಂದ ನದಿ ತೀರದಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಕ್ಕೆ ರವಾನೆ ಆಗಬೇಕು, ಹೊಲಗದ್ದೆಗಳಿಗೆ ತೆರಳದೆ, ದನಕರುಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಬೇಕು. ನಿಮ್ಮ ಆರೋಗ್ಯದ ಕಾಳಜಿ ಮತ್ತು ಸುರಕ್ಷತೆಯ ಜವಾಬ್ಧಾರಿಯನ್ನು ಮುಂಜಾಗ್ರತೆಯಾಗಿ ಮಾಡಿಕೊಳ್ಳಬೇಕೆಂದು ಜನತೆಯಲ್ಲಿ ವಿನಂತಿ ಮಾಡಿಕೊಂಡರು.
(ವರದಿ: ಈಶ್ವರ ಜಿ.ಸಂಪಗಾವಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ